ನಾಡಿ ಹೇಳುವಂತೆ 'ನನ್ನಂಥವರು' ಎಂದರೆ ಯಾರು?
ದಿನಾಂಕ 14ನೇ ಜನವರಿಯಂದು ಕಾರ್ಯನಿರತ ಪತ್ರಕರ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸನ್ಮಾನ್ಯ ನಾ.ಡಿ ಸೋಜಾರವರು 'ಭೈರಪ್ಪ ನನ್ನಂಥವರಿಗೆ ಸರಿಯಾದ ಲೇಖಕರಲ್ಲ' ಎಂದು ಹೇಳುವುದರ ಜೊತೆಗೆ ತಮ್ಮ ಘನತೆಗೆ ತಾವೇ ಮುಳುವಾಗುವಂತಹ ಕೆಲಸ ಮಾಡಿಕೊಂಡಿದ್ದಾರೆ. ಕಾರಣ ಇಷ್ಟೇ ಒಬ್ಬ ವ್ಯಕ್ತಿ ವಯಸ್ಸಾದ ಹಾಗೇ ಮಾಗಿರುತ್ತಾನೆ ಎಂಬ ಕಾರಣಕ್ಕಾಗಿ ಕೆಲವು ಸ್ಥಾನ ಮಾನಗಳು ದೊರಕುವುದು. ಹಾಗಾಗಿ ನಾ.ಡಿಸೋಜಾರವರು 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು, ಅವರು ಭೈರಪ್ಪನವರ ಮೇಲೆ ಮಾಡಿದ ಬಾಲಿಶ ಹೇಳಿಕೆಯಿಂದ ಅದಕ್ಕೆ ಅವರು ಅರ್ಹರೇ ಎಂಬ ಅನುಮಾನ ಶುರುವಾಗುವ ಹಾಗೆ ನಡೆದುಕೊಂಡಿದ್ದಾರೆ. ಜನಪ್ರಿಯತೆ, ಜನರಮೆಚ್ಚುಗೆ, ವಿಶ್ವಾಸ, ಒಪ್ಪಿಗೆ ಒಬ್ಬ ಲೇಖಕ ಸಂಪಾದಿಸಿದ್ದಾರೆ ಎಂದಾದರೆ ಅದು ಅವರು ಮಾಡಿರುವ ಆಳವಾದ ಸಾಹಿತ್ಯ ಕೃಷಿ, ಸೃಜನಶೀಲತೆ ಮತ್ತು ವಸ್ತುನಿಷ್ಠತೆಗಳಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ನಿಂತು ಭೈರಪ್ಪವರನ್ನು ಮತ್ತು ಅವರ ಸಾಹಿತ್ಯ ಕೃಷಿಯನ್ನು ಓದುಗರು ಮೆಚ್ಚಿದ್ದಾರೆ ಎಂದರೆ ಓದುಗರು ಮೂರ್ಖರಲ್ಲ. ಜೊತೆಗೆ ನನ್ನಂಥವರ ಗುಂಪಿಗೆ ಎಂದು ನೀವು ಉಲ್ಲೇಖಿಸಿದ ಹಾಗೆ ಅವರಾರೂ ನಿಮ್ಮಂಥವರ ಗುಂಪಿಗೆ ಸೇರಿದವರಲ್ಲ. ಭೈರಪ್ಪನವರು ಸರಿಯಾದ ಲೇಖಕರಲ್ಲ ಎಂದು ನನ್ನಂಥವರಿಗೆ ಅನ್ನಿಸುತ್ತದೆ ಎಂದು ಹೇಳಿದ್ದಾರೆ ನಾ.ಡಿಸೋಜಾ. ನನ್ನಂಥವರು ಎಂದರೆ ಅರ್ಥವೇನು? ಜೊತೆಗೆ ನಿಮ್ಮಂಥವರ ಎಂದರೆ ಆ ಗುಂಪಿಗೆ ಬೇರೆ ಯಾರು ಯಾರು ಸೇರುತ್ತಾರೆ, ಇಲ್ಲವೇ ಯಾರು ಯಾರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಮಾತನ್ನು ಹೇಳಿದ್ದೀರಿ ಎಂಬ ಸ್ಪಷ್ಟನೆಯನ್ನು ನೀಡಬೇಕು. ವಿನಾಕಾರಣ ಬೇರೆಯವರನ್ನು ಅವಹೇಳನ ಮಾಡುವುದು ನಾ.ಡಿಸೋಜಾರಂತಹ ಹಿರಿಯರಿಗೆ ಶೋಭಿಸುವುದಿಲ್ಲ. ಅದು ಕೀಳು ಮಟ್ಟದ ಜನಪ್ರಿಯತೆಯನ್ನು ತಂದು ಕೊಡಬಹುದೇ ಹೊರತು ವ್ಯಕ್ತಿತ್ವಕ್ಕೆ ಘನತೆಯನ್ನು ತಂದು ಕೊಡುವುದಿಲ್ಲ. ಈ ಹಿನ್ನೆಲೆಯಲ್ಲಿ ನಾ. ಡಿಸೋಜಾ ಅವರು ಹೇಳಿದ ಹಾಗೆ 'ನನ್ನಂಥವರು' ಎಂಬುದರ ಹಿಂದೆ ಸಾಹಿತ್ಯ ವಲಯದ ಮಾಫಿಯಾ ಇರುವುದೇ ಎಂಬ ಅನುಮಾನ ಬರುತ್ತದೆ. ನಿಮ್ಮಂಥವರಿಗೆ(ನಾ. ಡಿಸೋಜಾರಂಥವರಿಗೆ) ಭೈರಪ್ಪನವರು ಸರಿಯಿಲ್ಲವಾದರೆ ಅವರ ಬಗ್ಗೆ ಮಾತನಾಡುವುದನ್ನು ಬಿಟ್ಟುಬಿಡಿ. ಅದನ್ನು ಬಿಟ್ಟು ಭೈರಪ್ಪರನ್ನು ಒಪ್ಪಿರುವ ಬಹು ದೊಡ್ಡ ಸಂಖ್ಯೆಯ ಜನರನ್ನು, ಓದುಗರನ್ನು, ನಾ. ಡಿಸೋಜಾರವರಂಥ ಗುಂಪಿಗೆ ಸೇರದ ಸಾಹಿತಿಗಳ ಹಾಗೂ ಸಾಹಿತ್ಯವಲಯದ ಜನರ ಭಾವನೆಯನ್ನು ಕೆದುಕುವಂತಹ ಕೆಲಸದಿಂದ ಏನು ಪ್ರಯೋಜನ? ಭೈರಪ್ಪನವರು ಹಳೆಯ ವಿಚಾರವನ್ನೇ ಕೆದುಕುತ್ತಾರೆ ಎಂದಾದರೆ ನೀವು ಅದೇ ಮಾಡಿದ್ದೀರಿ. ನಿಮ್ಮ ಹೊಟ್ಟೆಕಿಚ್ಚು, ಅಸಹನೆ ಎಂತಹ ಉಗ್ರವಾದದ್ದು ಎಂದು ನಿಮ್ಮ ಹೇಳಿಕೆಯಿಂದಲೇ ಗ್ರಾಹ್ಯವಾಗುವಂತೆ ಮಾತಾಡಿದ್ದೀರಿ. ನಿಮ್ಮ ಎಲ್ಲ ತಲ್ಲಣಗಳನ್ನು ಸೃಜನಶೀಲ ಕೆಲಸದಲ್ಲಿ ತೋರಿಸಿ ಸೈ ಎನ್ನಿಸಿಕೊಳ್ಳಿ.
-ನ.ವೆಂ. ರಂಗನಾಥ, ಬೆಂಗಳೂರು
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com