ನಿರುದ್ಯೋಗಿ ಅರ್ಹ ಉಪನ್ಯಾಸಕರ ಪಾಡೇನು?
ಬೆಳಗಾವಿ ಅಧಿವೇಶನದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ರವರು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿರುವ ಸುಮಾರು 1300 ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡುವುದಾಗಿ ತಿಳಿಸಿರುತ್ತಾರೆ. ಶಿಕ್ಷಣ ಸಚಿವರು ಯಾವುದಾದರೊಂದು ತೀರ್ಮಾನ ಮಾಡುವ ಮೊದಲು ಅದರ ಸಾಧಕ-ಬಾಧಕಗಳ ಬಗ್ಗೆ ಯೋಚಿಸುವುದು ಬೇಡವೆ? ಈ ರೀತಿ ಕ್ರಮಕೈಗೊಂಡರೆ ಇಲ್ಲಿಯವರೆಗೂ ಕ್ರಮಬದ್ಧವಾಗಿ ನೇರ ಶಿಕ್ಷಣದಡಿಯಲ್ಲಿ ವ್ಯಾಸಂಗ ಮಾಡಿ, ನೆಟ್, ಸ್ಲೆಟ್, ಪಿ.ಹೆಚ್.ಡಿ. ಪಡೆದು ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕತ್ತೆಯಂತೆ ಜೀತ ಮಾಡುತ್ತಿರುವ ವಯೋವುತಿ ಮೀರುತ್ತಿರುವ ನಿರುದ್ಯೋಗಿ ಅರ್ಹ ಉಪನ್ಯಾಸಕರ ಪಾಡೇನು?
ಈಗಾಗಲೇ ಅನುದಾನಿತ ಪದವಿ ಕಾಲೇಜುಗಳಲ್ಲಿದ್ದ ಕೆಲಸದ ಅವಧಿ ಕಡಿಮೆ ಇದೆ ಎಂದು ಹಲವಾರು ಅರ್ಹ ಉಪನ್ಯಾಸಕರ ತಲೆಯ ಮೇಲೆ ಚಪ್ಪಡಿ ಎಳೆದಂತಾಗಿದೆ. ಇನ್ನು ಪದವಿ ಪೂರ್ವ ಕಾಲೇಜುಗಳಲ್ಲಿರುವ ಉಪನ್ಯಾಸಕರನ್ನು ಪದವಿ ಕಾಲೇಜುಗಳಿಗೆ ಬಡ್ತಿ ನೀಡಿ ಪೂರ್ಣವಾಗಿ ಅವರನ್ನು ಶಾಶ್ವತ ನಿರುದ್ಯೋಗಿಗಳನ್ನಾಗಿ ಮಾಡಲು ಹೊರಟಿರುವುದನ್ನು ಗಮನಿಸಿದರೆ ಈ ಸರ್ಕಾರಕ್ಕೆ ಕಿಂಚಿತ್ತೂ ಮುಂದಾಲೋಚನೆ ಇಲ್ಲದಿರುವುದು ಅರಿವಾಗುತ್ತದೆ.
ಈ ಮೂಲಕ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಸಚಿವರಲ್ಲಿ ನಮ್ಮ ಕೋರಿಕೆಯೇನೆಂದರೆ, ಅವರವರ ವಿದ್ಯಾರ್ಜನೆಯ ಮೇಲೆ ಪ್ರಾಥಮಿಕ ಶಿಕ್ಷಕರನ್ನು ಮಾಧ್ಯಮಿಕ ಶಿಕ್ಷಣಕ್ಕೆ, ಮಾಧ್ಯಮಿಕ ಶಿಕ್ಷಣ ಇಲಾಖೆಯಲ್ಲಿರುವವರನ್ನು ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಹಾಗೂ ಪದವಿ ಪೂರ್ವದಿಂದ ಪದವಿ ಕಾಲೇಜುಗಳಿಗೆ ಹಾಗೂ ಪದವಿ ಕಾಲೇಜುಗಳಿಂದ ಸ್ನಾತಕೋತ್ತರ ಪದವಿ ಅಂದರೆ ವಿಶ್ವವಿದ್ಯಾಲಯಗಳಿಗೆ ಬಡ್ತಿ ನೀಡಿ ಪದವಿ ಪಡೆದಾದ ನಂತರ ಉನ್ನತ ವ್ಯಾಸಂಗ ಬಯಸುವವರಿಗೆ ಒಂದು ಸೂಚನೆಯನ್ನು ನೀಡಿ, "ನೀವು ಅಧ್ಯಯನ ಮಾಡುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಉಪನ್ಯಾಸಕ ಹುದ್ದೆಗಳನ್ನು ನೀಡುವುದಿಲ್ಲ". ಇದನ್ನು ರದ್ದುಪಡಿಸಲಾಗಿದೆ ಎಂದು ಒಂದು ಆದೇಶ ನೀಡಿಬಿಟ್ಟರೆ ಸಾಕು ಆ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಓದುವುದನ್ನು ನಿಲ್ಲಿಸುತ್ತಾರೆ. ಇದಕ್ಕಾಗಿ ಲಕ್ಷಾಂತರ ರು. ವ್ಯಯವಾಗುವುದನ್ನು ತಪ್ಪಿಸಬಹುದು. ಶಿಕ್ಷಣ ಸಚಿವರು ಇಂತಹ ಅವೈಜ್ಞಾನಿಕ ನುಡಿಗಳನ್ನು ಬಿಟ್ಟು ಅದೇ ಉಪನ್ಯಾಸಕರನ್ನು ಅವರ ಅರ್ಹತೆಯ ಆಧಾರದ ಮೇಲೆ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ನೇಮಕಾತಿ ಮಾಡಲಿ. ಹಾಗೆಯೇ ಅರ್ಹರಿರುವ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಲಿ.
-ಡಿ.ಎನ್. ಅಶ್ವತ್ಥ ನಾರಾಯಣ್ , ತುಮಕೂರು
ಭೋಜನದ ಜಾತ್ರೆಗಳು ಬೇಡ
ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ಕೋಟ್ಯಂತರ ರುಪಾಯಿಗಳ ವೆಚ್ಚದಲ್ಲಿ ಯಾವುದೂ ಒಮ್ಮತ ಮೂಡದೆ, ಜಾರಿಗೆ ಬಾರದ ನಿರ್ಣಯಗಳೊಂದಿಗೆ ಮುಕ್ತಾಯವಾಗುತ್ತದೆ. ಅಲ್ಲಿ ನಡೆದ ಭೂರಿ ಭೋಜನಗಳ ಬಗ್ಗೆಯೇ ಹೆಚ್ಚು ಪ್ರಚಾರವಾಗುತ್ತೆ. ನಮ್ಮ ಸರ್ಕಾರಕ್ಕೆ, ರಾಜಕೀಯ ನಾಯಕರುಗಳಿಗೆ ಹಾಗೂ ಸಾಹಿತ್ಯ ಪರಿಷತ್ತಿನವರಿಗೆ ನಿಜವಾದ ಕಾಳಜಿಯಿದ್ದಲ್ಲಿ ಪ್ರಸಿದ್ಧ ಹೆಸರಾಂತ ಎಲ್ಲ ಸಾಹಿತಿಗಳ ಕೃತಿಗಳನ್ನು ಸುಲಭ ದರದಲ್ಲಿ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಜನಪ್ರಿಯ ಪ್ರಕಾಶನಗಳಲ್ಲಿ ಮುದ್ರಿಸಿ ಮನೆಮನೆಗೂ ತಲುಪಿಸುವ ಕ್ರಮ ಕೈಗೊಳ್ಳಲಿ ಹಾಗೂ ಇತರ ಭಾಷೆಗಳಿಗೆ ಭಾಷಾಂತರ ಕಾರ್ಯ ಕೈಗೊಳ್ಳಲಿ. ದಿ. ಕೆಂಗಲ್ ಹನುಮಂತಯ್ಯನವರ ಮಾದರಿ ಅನುಸರಿಸಲಿ.
-ಗೌರಿಬಿದನೂರು ನಾಗೇಗೌಡ, ಗೌರಿಬಿದನೂರು., ಕೋಲಾರ ಜಿಲ್ಲೆ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com