ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕೊಡುಗೆ ಸಂಪ್ರದಾಯ ಸಾಕಿನ್ನು ಮೋದಿಯ ಹೊಸ ದೃಷ್ಟಿ

ಹಲವು ತಿಂಗಳ ಹಿಂದೆಯೇ, ಗುಜರಾತ್ ಮುಖ್ಯಮಂತ್ರಿಯ ಕೆಲಸದ ಜತೆಯಲ್ಲೇ ಲೋಕಸಭೆ ಚುನಾವಣೆ ಅಭಿಯಾನವನ್ನೂ ...

Rashmi Kasaragodu
Updated On : 21 Jan 2014, 12:27 pm

ಹಲವು ತಿಂಗಳ ಹಿಂದೆಯೇ, ಗುಜರಾತ್ ಮುಖ್ಯಮಂತ್ರಿಯ  ಕೆಲಸದ ಜತೆಯಲ್ಲೇ ಲೋಕಸಭೆ ಚುನಾವಣೆ ಅಭಿಯಾನವನ್ನೂ ಆರಂಭಿಸಿ, ಹೋದ ವರ್ಷದಲ್ಲೇ ಚುನಾವಣೆಯ ವಾತಾವರಣವನ್ನು ನಿರ್ಮಿಸಿದ ನರೇಂದ್ರ ಮೋದಿ ಈಗಾಗಲೇ ಪ್ರಚಾರ ಸಮರದಲ್ಲಿ ಬಹುದೂರ ಸಾಗಿ ಬಂದಿದ್ದಾರೆ.
ಭಾನುವಾರ, ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಮಂಡಳಿಯ ಅಧಿವೇಶನದ ಕೊನೆಯ ದಿನದ ಬಹಿರಂಗ ಸಭೆಯಲ್ಲಿ ಪಕ್ಷದ ಅತಿರಥ-ಮಹಾರಥರೂ ಸೇರಿದಂತೆ, ಸುಮಾರು ಹತ್ತು ಸಹಸ್ರ ಜನ ಮೋದಿ ಅವರ ಭಾಷಣಕ್ಕೆಂದೇ ಕಾದಿದ್ದರು. ಆ ಜನರನ್ನು ನರೇಂದ್ರ ಮೋದಿ ನಿರಾಸೆಗೊಳಿಸಲಿಲ್ಲ. ಈಗಿನ ಚುನಾವಣೆ ಇಬ್ಬರು ವ್ಯಕ್ತಿಗಳು ಅಥವಾ ಎರಡು ಕೂಟಗಳ ನಡುವಣ ಸಂಘರ್ಷವಲ್ಲ. ಎರಡು ವಿಭಿನ್ನ ಸ್ವರೂಪದ ಯೋಜನೆಗಳನ್ನು ನಂಬುವ ಶಕ್ತಿಗಳ ನಡುವಣ ಸಂಘರ್ಷ ಎನ್ನುವುದರ ಮೂಲಕ, ತಮ್ಮ ಭಾಷಣಕ್ಕೆ ಹೊಸ ಆಯಾಮವನ್ನೇ ಕೊಟ್ಟರು ಮೋದಿ. ನಿಜ. ಇನ್ನೂ ಕಾಂಗ್ರೆಸ್-ಬಿಜೆಪಿಗಳು ತಮ್ಮ ಚುನಾವಣೆ ಪ್ರಣಾಳಿಕೆಗಳನ್ನು ಪ್ರಕಟಿಸಿಲ್ಲ. ಆದ್ದರಿಂದ ಭಾನುವಾರ ರಾಮಲೀಲಾ ಮೈದಾನದಲ್ಲಿ, ನರೇಂದ್ರ ಮೋದಿ ಪ್ರಕಟಿಸಿದ ಪಕ್ಷದ ಹೊಸ ಚಿಂತನೆಯೇ ಕೊನೆಯ ಮಾತು ಎಂದೇನೂ ಅಲ್ಲ. ಆದರೂ ಈಗಿನ ಸ್ಥಾಪಿತ ಸಿದ್ಧಾಂತಗಳಿಗೆ ಪರ್ಯಾಯ ಸ್ವರೂಪದ ಚಿಂತನೆಗೆ ಬಿಜೆಪಿಯಲ್ಲಿ ಚಾಲನೆ ಸಿಕ್ಕಿರುವುದಂತೂ ನಿಜ.
ದೇಶದಲ್ಲಿ ಆರಿಸಿದ ನೂರು ಮಹಾನಗರಗಳನ್ನು ಅತ್ಯಾಧುನಿಕ (ಸ್ಮಾರ್ಟ್) ದರ್ಜೆಗೇರಿಸುವುದು, ಅಡುಗೆ ಗ್ಯಾಸ್ ಪೈಪ್‌ಲೈನ್‌ಗಳ ಜಾಲ ರೂಪಿಸಿದರೆ, ಆ ಸಮಸ್ಯೆಗೆ ಪೂರ್ಣ ಪರಿಹಾರ ಕೊಟ್ಟಂತೆಯೇ ಎನ್ನುವ ಅಭಿಪ್ರಾಯ ಹೆದ್ದಾರಿಗಳ ನಿರ್ಮಾಣ, ಜಪಾನ್ ಮಾದರಿಯ ಬುಲೆಟ್ ರೈಲುಗಳ ಯೋಜನೆ, ಎಲ್ಲ ರಾಜ್ಯಗಳಲ್ಲೂ ಐಐಟಿ, ಐಐಎಂ ಉನ್ನತ ಮಟ್ಟದ ಮೆಡಿಕಲ್ ಕಾಲೇಜು, ಪ್ರತಿಭೆ, ಸಂಪ್ರದಾಯ, ಪ್ರವಾಸೋದ್ಯಮ, ವಾಣಿಜ್ಯ, ತಂತ್ರಜ್ಞಾನದ ಬಳಕೆಯ ಆಧಾರದ ಮೇಲೆ ಸಂಸತ್ತಿನ ಸೃಷ್ಟಿಯ ಯೋಜನೆಗಳತ್ತ ಮೋದಿ ಗಮನ ಹರಿದಿರುವಂತಿದೆ. ಈಗಿನ ವ್ಯವಸ್ಥೆಯಲ್ಲಿ ದೇಶದ ಉತ್ಪಾದನೆ ಹಾಗೂ ಪ್ರಗತಿಯ ವೇಗವನ್ನು ತಡೆದು ನಿಲ್ಲಿಸುತ್ತಿರುವ ಉಡುಗೊರೆ, ಕೊಡುಗೆ, ದಾನ-ಧರ್ಮಗಳ ನೀತಿಯಿಂದ ಯಾವ ದೇಶವೂ ಉದ್ಧಾರವಾಗುವುದಿಲ್ಲ ಎನ್ನುನ ಮಾತಿನಲ್ಲಿ ಖಚಿತವಾದ ನಂಬಿಕೆ ಅವರದ್ದು. ನಿಸರ್ಗದ ಮುನಿಸಿನಂತಹ ದುರಂತಗಳ ಸಮಯದಲ್ಲಿ ಜನರ ನೆರವಿಗೆ ಬರುವುದು ಬೇರೆ, ಅವರ ನಿತ್ಯ ಜೀವನಕ್ಕೇ ದಾನ ಕೊಡುವುದೇ ಬೇರೆ. ಅವೆರಡರ ನಡುವಣ ವ್ಯತ್ಯಾಸವೂ ಅವರಿಗೆ ಗೊತ್ತು.
ರಾಮಲೀಲಾ ಮೈದಾನದ ಹತ್ತಿರದಲ್ಲೇ ಇರುವ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಎಐಸಿಸಿ ವಿಶೇಷ ಅಧಿವೇಶನದ ಕಾರ್ಯಕಲಾಪ ಕುರಿತ ಕಟು ಟೀಕೆ ನಿರೀಕ್ಷಿತವೇ. ಕಾಂಗ್ರೆಸ್ ಮೇಳದಲ್ಲಿ ನರೇಂದ ಮೋದಿ ಅವರನ್ನು ಚಹ ಮಾರುವ ಹುಡುಗನೆಂದು ಲೇವಡಿ ಮಾಡಿದ ಮಣಿ ಶಂಕರ ಅಯ್ಯರ್ ಹಾಗೂ ಅದನ್ನು ಒಪ್ಪಿದಂತೆ ಕಂಡು ಬಂದ ಸೋನಿಯಾ- ರಾಹುಲ್ ಗಾಂಧಿ ಜೋಡಿಯ ವಿರುದ್ಧದ ಟೀಕಾಸ್ತ್ರವನ್ನು ಪ್ರಯೋಗಿಸುವ ಮುನ್ನ ಮೋದಿ ಇದುವರೆಗೂ ತಮ್ಮ ಜಾತಿ ಮೂಲದ ಪ್ರಸ್ತಾಪ ಮಾಡದೇ ಇದ್ದರೂ "ರಾಹುಲ ಗಾಂಧಿ, ಅವರನ್ನು ಪ್ರಧಾನಿ ಪೀಠದ ಅಭ್ಯರ್ಥಿಯಾಗಿ ಆರಿಸುವುದು ಮೇಲ್ಜಾತಿಯ ಶ್ರೀಮಂತ ಮನೆತನದ ವ್ಯಕ್ತಿಗಳ ನಾಯಕತ್ವದ ಪಕ್ಷಕ್ಕೆ ಅಪಮಾನದ ವಿಚಾರ ಅಲ್ಲವೇ? ಎಷ್ಟಾದರೂ ನಾನು ತೀರ ಹಿಂದುಳಿದ ಜಾತಿಯಲ್ಲಿ ಹುಟ್ಟಿದವನು. ಚಹ ಮಾರಿಕೊಂಡು ಬದುಕುತ್ತಿದ್ದ ಹುಡುಗ. ಇಂತಹ ವ್ಯಕ್ತಿಯ ವಿರುದ್ಧ ಯುವರಾಜ ಸ್ಪರ್ಧಿಸುವುದು ಎಂದರೇನು?" ಎಂದು ಚುಚ್ಚಿದ್ದು, ಸಂದೇಶವನ್ನು ನೇರವಾಗಿ ಮುಟ್ಟಿಸಿದಂತೆಯೇ ಇತ್ತು.
ಇನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮರ ಅಥವಾ ನರೇಂದ್ರ ಮೋದಿ- ರಾಹುಲ ಗಾಂಧಿ (ಅವರನ್ನು ಪಕ್ಷ ಪ್ರಧಾನಿ ಪೀಠದ ಸ್ಪರ್ಧಿ ಎಂದು ಬಹಿರಂಗವಾಗಿ ಹೇಳದೇ ಇದ್ದರೂ) ಅವರ ನಡುವಣ ಇಂತಹ ಚಕಮಕಿ ಪ್ರತಿದಿನವೂ ನಡೆಯಬಹುದೇನೋ ಎನಿಸಿತ್ತು. ನರೇಂದ್ರ ಮೋದಿ ಅವರ ಭಾಷಣದಲ್ಲಿ ಕೃಷಿ, ಕೃಷಿಕರು, ಕೂಲಿ ಮಾಡುವ ಜನ, ಮಧ್ಯಮ ವರ್ಗದ ಜನರ ಪ್ರಸ್ತಾಪವೇ ಇಲ್ಲದೇ ಇರುವುದು ಒಂದು ಲೋಪವೇ. ಕಾಂಗ್ರೆಸ್‌ಗೆ ಅದೇ ಒಂದು ದೊಡ್ಡ ಅಂಶ. ಭಾನುವಾರ ರಾತ್ರಿಯೇ ಕೆಲವು ಟಿ.ವಿ. ಕಾರ್ಯಕ್ರಮಗಳಲ್ಲಿ ಇದು ಕಂಡು ಬಂದಿತ್ತು.
ಬಿಜೆಪಿ ಅಧಿವೇಶನದ ಗಮನಾರ್ಹವಾದ ಅಂಶವೆಂದರೆ, ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಕಂಡುಬಂದ ಮೇರೆ ಮೀರಿದ ಉತ್ಸಾಹ. ಅದನ್ನು ಗಮನಿಸಿದ ಹಿರಿಯ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರು ಇಂತಹ ಸನ್ನಿವೇಶದಲ್ಲಿ ಪಕ್ಷ ಸಂಯಮವನ್ನು ಪ್ರದರ್ಶಿಸಿ, ಕಷ್ಟಪಟ್ಟು ದುಡಿಯಲು ಕಲಿಯಬೇಕು ಎಂದಿದ್ದು ತೀರ ಸಹಜ. ಆಡ್ವಾಣಿಯವರು ಮೋದಿ ಅವರ ಭಾಷಣವನ್ನು ಮೆಚ್ಚಿ, ಅತಿ ಉತ್ಸಾಹ ಹಾಗೂ ಗೆಲವಿನ ವಿಚಾರದಲ್ಲಿ ವಿಪರೀತ ವಿಶ್ವಾಸದ ಪ್ರದರ್ಶನ ಭವಿಷ್ಯದಲ್ಲಿ ಕೈ ಕೊಡುವ ಅಪಾಯವಿರುವುದರಿಂದ ಉತ್ಸಾಹದಲ್ಲಿ ಮೈಮರೆಯದೇ ಎಚ್ಚರದಿಂದಿರುವುದು ಒಳ್ಳೆಯದು ಎಂದು ಹೇಳಿದ್ದು ಸಾಮಯಿಕವಾಗಿತ್ತು. ಇತ್ತೀಚಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಸಭೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಇದ್ದ, ಲೋಕಸಭೆಯ ಪ್ರತಿಪಕ್ಷದ ನಾಯಕಿ, ಸುಷ್ಮಾ ಸ್ವರಾಜ್ ಬಹಿರಂಗ ಸಭೆಯಲ್ಲಿನ ವೇದಿಕೆಯಿಂದಲೇ ಪಕ್ಷದ ಎಲ್ಲ ನಿಲವುಗಳನ್ನು ಬೆಂಬಲಿಸಿದ್ದು ಸೂಕ್ತವಾಗಿಯೇ ಇತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement