ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಬೆಂಗಳೂರಿನ ವಿದ್ಯಾರಣ್ಯಪುರದಿಂದ ಎಚ್.ಆನಂದರಾಮ ಶಾಸ್ತ್ರೀ ಪತ್ರ ಬರೆದಿದ್ದಾರೆ. 'ಜಾಹೀರಾತೊಂದರ ಬಗ್ಗೆ ಬರೆಯುತ್ತಿದ್ದೇನೆ...

Rashmi Kasaragodu
Updated On : 21 Jan 2014, 12:33 pm

ಬೆಂಗಳೂರಿನ ವಿದ್ಯಾರಣ್ಯಪುರದಿಂದ ಎಚ್.ಆನಂದರಾಮ ಶಾಸ್ತ್ರೀ ಪತ್ರ ಬರೆದಿದ್ದಾರೆ. 'ಜಾಹೀರಾತೊಂದರ ಬಗ್ಗೆ ಬರೆಯುತ್ತಿದ್ದೇನೆ. 'ಖುಷಿ' ಪುರವಣಿ ಕುರಿತು 'ಕನ್ನಡಪ್ರಭ' ಪತ್ರಿಕೆಯೇ ಕೊಟ್ಟುಕೊಂಡಿರುವ ಜಾಹೀರಾತು ಅದಾದ್ದರಿಂದ ಅದರಲ್ಲಿಯ ತಪ್ಪು ಈ ಅಂಕಣದಲ್ಲಿ ಪ್ರವೇಶಕ್ಕೆ ಅರ್ಹವೆನಿಸುತ್ತದೆ.' 'ಜ.15ರ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಆ ಜಾಹೀರಾತಿನಲ್ಲಿ, 'ಕಣ್ತುಂಬೋ ಓದಿಗೆ 32 ಹಾಳೆ' ಎಂಬ ಸಾಲೊಂದಿದೆ. 'ಖುಷಿ' ಪುರವಣಿಯು 32 ಹಾಳೆಗಳನ್ನು ಹೊಂದಿರುವುದಿಲ್ಲ. ಬದಲಾಗಿ 16 ಹಾಳೆಗಳನ್ನು ಹೊಂದಿರುತ್ತದೆ. ಎರಡು ಪುಟಗಳು ಸೇರಿ ಆಗುವುದು ಒಂದು ಹಾಳೆ. ಅರ್ಥಾತ್, ಒಂದು ಹಾಳೆಯ ಒಂದೊಂದು ಬದಿಯಲ್ಲಿ ಒಂದೊಂದು ಪುಟದಂತೆ ಒಟ್ಟು ಒಂದು ಹಾಳೆಯಲ್ಲಿ ಎರಡು ಪುಟಗಳಿರುತ್ತವೆ. 'ಪುಟ' ಎಂಬ ಪದವನ್ನು 'ಹಾಳೆ'ಯ ಒಂದು ಬದಿ ಎಂಬರ್ಥದಲ್ಲಿ ಬಳಸುತ್ತಾರಾದರೂ 'ಹಾಳೆ' ಎಂಬ ಪದವನ್ನು ಒಂದು ಬದಿಯ 'ಪುಟ' ಎಂಬರ್ಥದಲ್ಲಿ ಬಳಸುವುದಿಲ್ಲ.'ಖುಷಿ'ಯಲ್ಲಿ ನೀವು 32 ಹಾಳೆ ಕೊಟ್ಟರೆ ಓದಲು ನಮಗೆ ಪರಮ ಖುಷಿಯಾಗುತ್ತದೆ.'
'ಆದರೆ ಜ.12ರ 'ಖುಷಿ' ಪುರವಣಿಯ 32 ಪುಟಗಳ ಪೈಕಿ ಪೂರ್ತಿ 14 ಪುಟಗಳು ಜಾಹೀರಾತಿಗೆ ಬಳಕೆಯಾಗಿವೆ. ಮುಖಪುಟವನ್ನೂ ಹೊರತುಪಡಿಸಿದಾಗ, ವಿಷಯಗಳು ಮುದ್ರಿತವಾಗಿರುವುದು ಕೇವಲ 17 ಪುಟಗಳಲ್ಲಿ ಮಾತ್ರ! ಸಂಕ್ರಾಂತಿಯ ಸಂದರ್ಭವಾದ್ದರಿಂದ ಜಾಹೀರಾತುಗಳು ಹೆಚ್ಚಿರುತ್ತವೆಂಬುದು ಮತ್ತು ಜಾಹೀರಾತುಗಳ ಪ್ರಮಾಣದ ನಿರ್ಧಾರವು ಸಂಪಾದಕರಾದ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂಬುದು ನನಗೆ ಗೊತ್ತು. ಈ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ 17 ಪುಟಗಳ ವಿಷಯ ನೀಡಿದ ಮೂರೇ ದಿನಕ್ಕೆ ನೀವು 'ಕಣ್ತುಂಬೋ ಓದಿಗೆ 32 ಹಾಳೆ' ಎಂದು ಜಾಹೀರಾತು ನೀಡಿದ್ದು ಮಾತ್ರ ತಮಾಷೆಯಾಗಿ ಕಂಡಿತು. ಜಾಹೀರಾತನ್ನೂ ಓದಿ ಕಣ್ತುಂಬಿಸಿಕೊಳ್ಳುವುದೆಂಬ ಅರ್ಥದಲ್ಲಿ ನಿಮ್ಮ ಈ ವಾಕ್ಯವನ್ನು ಪರಿಗಣಿಸಿದರೆ, ಆಗ ನೀವು 'ಜಾಹೀರಾತಿಗೂ ಜಾಹೀರಾತು' ನೀಡಿದಂತಾಯಿತು! ಇದೂ ಒಂದು ತಮಾಷೆಯೇ' ಎಂದಿದ್ದಾರೆ.
ತಮಾಷೆ ಮಾಡೋದು ಅತ್ಯಂತ ಸುಲಭ. ಆದರೆ ಜಾಹೀರಾತು ಹೆಚ್ಚು ಹಾಕುತ್ತೀರಿ ಎಂದು ತಮಾಷೆ ಮಾಡುವವರಿಗೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಪತ್ರಿಕೆ ನೀಡುತ್ತಾರೆ ಎಂಬುದು ತಮಾಷೆಯಾಗಿ ಕಾಣುವುದೇ ಇಲ್ಲ! ಬಹುಶಃ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರಕ್ಕೆ ಮಾರಾಟವಾಗುವ ಏಕೈಕ ವಸ್ತು ಎಂದರೆ ಪತ್ರಿಕೆಗಳು.
ಅದನ್ನು ಓದುಗರ ಉಪಕಾರಕ್ಕೇನು ಕೊಡುತ್ತಿಲ್ಲ ಎಂಬ ವಾದವನ್ನೂ ಒಪ್ಪಿಕೊಳ್ಳುವುದರ ಜತೆಗೆ, ಕಡಿಮೆ ದರಕ್ಕೆ ಸಿಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗೆ ಕಡಿಮೆ ದರಕ್ಕೆ ನೀಡಲು ಸಾಧ್ಯವಾಗುವುದು ಜಾಹೀರಾತುಗಳಿಂದ. ಹಬ್ಬದ ಸಂದರ್ಭಗಳನ್ನು ಹೊರತುಪಡಿಸಿದರೆ ಉಳಿದ ಸಂದರ್ಭಗಳಲ್ಲಿ ಸುದ್ದಿ, ಲೇಖನಗಳೇ ಜಾಹೀರಾತಿಗಿಂತ ಹೆಚ್ಚಿರುತ್ತವೆ. ಶಾಸ್ತ್ರಿ ಅವರು ಬಯಸಿದಂತೆ ಹೆಚ್ಚು ಪುಟಗಳನ್ನು ನೀಡಬೇಕೆಂಬ ಆಸೆ ನಮಗೂ ಇದೆ. ಆದರೆ ಗುಣಮಟ್ಟವನ್ನೂ ಕಾಯ್ದುಕೊಳ್ಳಬೇಕು. ಹಾಗೆಯೇ ಜೀವನದ ಸಣ್ಣ ಸಣ್ಣ ಖುಷಿಗಳನ್ನು ಅನುಭವಿಸಬೇಕಂತೆ. ಅದಕ್ಕಾಗಿಯೇ ನಾವು ಸಣ್ಣ ಖುಷಿಯನ್ನು ನಿಮ್ಮ ಕೈಗಿತ್ತಿದ್ದೇವೆ, ಸಣ್ಣ ಖುಷಿ ದೊಡ್ಡದಾಗುತ್ತದೆ ಎಂಬ ಆಸೆಯಿಂದ.
ಕಾಗದ ವಿಷಯದಲ್ಲಿ ಆನಂದರಾಮ ಶಾಸ್ತ್ರೀ ಅವರು ಹೇಳಿದ್ದು ಸರಿಯಾಗಿದೆ.


- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement