ಸಿಲಿಂಡರ್ ಸಂಖ್ಯೆಗಳ ಗಿಮಿಕ್
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಉತ್ಸಾಹ ಮುಗಿಲೆತ್ತರಕ್ಕೆ ಧಾವಿಸುತ್ತದೆ. ಆಡಳಿತದ ತನ್ನ ಐದು ವರ್ಷಗಳ ಅವಧಿಯಲ್ಲಿ ...
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಉತ್ಸಾಹ ಮುಗಿಲೆತ್ತರಕ್ಕೆ ಧಾವಿಸುತ್ತದೆ. ಆಡಳಿತದ ತನ್ನ ಐದು ವರ್ಷಗಳ ಅವಧಿಯಲ್ಲಿ ಸಾಧಿಸಲಾಗದ ಬಹುತೇಕ ಯೋಜನೆಗಳಿಗೆ ಸಂಜೀವಿನಿಯ ಭರವಸೆಗಳ ಮಹಾಪೂರವೇ ಹರಿದು ಬರುತ್ತದೆ. ಬೆಳಕು ಬೆಳಗಲು ವಿದ್ಯುತ್ ಕೊರತೆ. ಅನ್ನ ಭಾಗ್ಯದ ಅಕ್ಕಿ ಬೇಯಲು ಇಂಧನ ಸಮಸ್ಯೆ. ಉರುವಲು ಕಟ್ಟಿಗೆಗೂ ಬರಗಾಲ. ಸೀಮೆಎಣ್ಣೆಗೂ ಪರದಾಟ. ಬೆಲೆ ಏರಿಕೆಯ ಹೊಡೆತದಿಂದ ಜನಸಾಮಾನ್ಯನ ಬದುಕೇ ತತ್ತರಿಸುತ್ತಿದೆ. ಈ ನಡುವೆಯೇ ಗ್ಯಾಸ್ ಸಿಲಿಂಡರ್‌ಗಳ ಸಂಖ್ಯೆ ಹೆಚ್ಚಿಸುವ ಆಶ್ವಾಸನೆ ಕೇಂದ್ರ ಮಂತ್ರಿಗಳಿಂದ ಹೊರಹೊಮ್ಮಿದೆ. ಕಳೆದ ಮೂರು ತಿಂಗಳುಗಳಿಂದ ಸಿಲಿಂಡರ್‌ಗಳ ಸರಬರಾಜಿನಲ್ಲಿ ಕಂಡು ಕೇಳರಿಯದ ವ್ಯತ್ಯಾಸ ತಲೆದೋರಿದೆ. ಗ್ಯಾಸ್ ಬುಕ್ ಮಾಡಿದ 15 ದಿನಗಳ ಬಳಿಕವೇ ಮನೆಗೆ ಸಿಲಿಂಡರ್‌ನ ಸರಬರಾಜಾಗುತ್ತದೆ. ಹೀಗೆ ಸರಬರಾಜಾದ ದಿನಾಂಕದಿಂದ ಮುಂದಿನ ಒಂದು ತಿಂಗಳ ಅವಧಿ ಬಳಿಕವೇ ಗ್ರಾಹಕನು ಇನ್ನೊಂದು ಸಿಲಿಂಡರ್ ಬುಕ್ ಮಾಡಲು ಅರ್ಹನಾಗುತ್ತಾನೆ. ಇದು ಇಂದಿನ ನಿಯಮ. ಹೀಗಾಗಿ ಗ್ರಾಹಕರು ಪಡೆಯಬಹುದಾದ ಎರಡು ಸಿಲಿಂಡರ್‌ಗಳ ನಡುವಿನ ಕಾಲಾವಧಿ ಕನಿಷ್ಟ ನಲವತ್ತೈದು ದಿನಗಳಾಗುತ್ತವೆ. ವಸ್ತುಸ್ಥಿತಿ ಹೀಗಿರುವಾಗ ವರ್ಷಕ್ಕೆ 12 ಸಿಲಿಂಡರ್‌ಗಳ ಕೊಡುಗೆಯನ್ನು ಹೇಗೆ ತಾನೇ ಪಡೆಯಲು ಸಾಧ್ಯ? ಮೂಗಿಗೆ ತುಪ್ಪ ಸವರುವ ಇಂತಹ ಗಿಮಿಕ್‌ಗಳ ಕುರಿತು ಕೇಂದ್ರ ಇಂಧನ ಸಚಿವರು ಸ್ಪಷ್ಟೀಕರಣ ನೀಡಬಲ್ಲರೇ?
- ಟಿ. ಯಶವಂತ ಪೈ, ಕೆಜಿಎಫ್
ಭೂ ನ್ಯಾಯ ಮಂಡಳಿ ವಿಳಂಬ ನೀತಿ
ಸರ್ಕಾರ ತೀರ್ಥಹಳ್ಳಿ ತಾಲೂಕು ಭೂನ್ಯಾಯ ಮಂಡಳಿಯನ್ನು ಸ್ಥಗಿತಗೊಳಿಸಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಭ್ರಷ್ಟ ಅಧಿಕಾರಿಗಳಿಗೆ-ಭೂಗಳ್ಳರಿಗೆ ಕೊಟ್ಟ ವರವಾಗಿದೆ. ಲೋಕಸಭೆ ಚುನಾವಣೆಯ ಅಧಿಸೂಚನೆಯ ಆದೇಶದ ಒಳಗಾಗಿ ಸ್ಥಗಿತಗೊಳಿಸಿರುವ ಭೂ ನ್ಯಾಯ ಮಂಡಳಿಯು 40 ವರ್ಷಗಳಿಂದಲೂ ಅಂತಿಮ ತೀರ್ಪು ನೀಡದೇ ಉಳಿಸಿಕೊಂಡಿರುವ ಪ್ರಕರಣಗಳ ಕಲಾಪ ನಡೆಸಿ ಸ್ವಂತ ಆಸ್ತಿಗಳನ್ನು ಕಳೆದುಕೊಂಡು ಅಶಕ್ತ ಅಸಹಾಯಕರಾಗಿ ಬದುಕುತ್ತಿರುವ ಕುಟುಂಬಗಳಿಗೆ ಶೀಘ್ರ ನ್ಯಾಯ ದೊರಕಿಸಿಕೊಡಬೇಕಾಗಿ ವಿನಂತಿ. ಈ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆಗಳ ಪರಿಪಾಲನೆಗಾಗಿಯೇ ನೇಮಕಗೊಂಡಿರುವ ರಾಜ್ಯಪಾಲರು, ಜನಪ್ರತಿನಿಧಿಗಳು, ಕಾನೂನು ತಜ್ಞರು ಹಾಗೂ ಮಾಧ್ಯಮದವರು ನೊಂದವರ ಪರವಾಗಿ ಸ್ಪಂದಿಸಬೇಕಾಗಿ ಕೋರುತ್ತೇನೆ.
- ದಿನೇಶ್ ಯು.ಎನ್., ಶಿವಮೊಗ್ಗ
ಕಲಾವಿದರನ್ನು ಕೇಳುವವರಿಲ್ಲ
ಕಲೆ, ಕಲಾವಿದರ ಉದ್ಧಾರಕ್ಕೆಂದು ಸರ್ಕಾರ ಪ್ರತೀ ವರ್ಷ ಕೋಟಿಗಟ್ಟಲೆ ಹಣವನ್ನು ಅಕಾಡೆಮಿಗಳು ಮತ್ತು ಕ. ಸಂಬಂಧಪಟ್ಟ ಇಲಾಖೆ ಮೂಲಕ ಖರ್ಚು ಮಾಡುತ್ತಿದೆ. ಆದರೆ, ಇದರಲ್ಲಿ ನಿಜವಾಗಿ ನಿಜವಾದ ಕಲಾವಿದರಿಗೆ ಸಿಗುತ್ತಿರುವುದೆಷ್ಟು ಎಂಬುದು ರಹಸ್ಯವಾಗಿಯೇನೂ ಉಳಿದಿಲ್ಲ. ಕೆಲವೇ ಕಲಾವಿದರು ಅಥವಾ ಕಲಾವಿದರ ಹೆಸರಿನ ಮಧ್ಯವರ್ತಿಗಳು ಲಾಭದಾಯಕವಾಗಿ ಬದುಕುತ್ತಿರುವುದನ್ನು, ವಸೂಲಿಬಾಜಿ ಗೊತ್ತಿಲ್ಲದ ಅಮಾಯಕ ಕಲಾವಿದರು ಸಂಕಷ್ಟದಲ್ಲೇ ಇರುವುದು ಸರ್ಕಾರಕ್ಕೆ ಗೌರವ ತರುವಂತಹದ್ದಲ್ಲ. ಈಚೆಗೆ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ, ಹಂಪಿ ಉತ್ಸವ ಹಾಗೂ ನಗರದ ಸುಗ್ಗಿ -ಹುಗ್ಗಿ...ಈ ಎಲ್ಲೆಡೆಯೂ ಕೆಲವೇ ಕಲಾವಿದರು ಅವಕಾಶ ಗಿಟ್ಟಿಸಿದ್ದು ಹೇಗೆಂಬುದನ್ನು ಗಮನಿಸಿದರೆ, ಅಕಾಡೆಮಿಯ ಕಾರ್ಯವೈಖರಿ ಸರ್ಕಾರದ ಗಮನಕ್ಕೆ ಬಂದೀತು. ಸಂಬಂಧಿಸಿದವರು ಇನ್ನಾದರೂ ಅರ್ಹರಿಗೆ ಸಮಾನ ನ್ಯಾಯ ನೀಡಲಿ.
- ಡಾ. ಟಿ. ಗೋವಿಂದರಾಜು, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com