ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Rashmi Kasaragodu
Updated On : 23 Jan 2014, 1:03 am

ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- "ಆಪತ್ಬಾಂಧವ'ನನ್ನು ತಿದ್ದಿ ನೇರ್ಪುಗೊಳಿಸುವ ರಾಘವೇಂದ್ರ ಅವರು 'ಆಪದ್ಬಾಂಧವ'ರಾಗಿ ಬಂದಿದ್ದಾರೆ. ಆದರೆ ಆಪದ್ಬಾಂಧವರಾಗಿ ಬಂದ ಅವರೇ ಅವರಿಗೆ ಅರಿವಿಲ್ಲದೆ ಎಡವಿರುವುದರಿಂದ ಸಹಾಯಕ್ಕೆ ಬಂದಿದ್ದೇನೆ.'
'ಸಂಸ್ಕೃತದ ವ್ಯಂಜನ ಸಂಧಿಗಳಲ್ಲೊಂದು ಜಶ್ತ್ವ ಸಂಧಿ. ಸಂಸ್ಕೃತವನ್ನು ಸರಿಯಾಗಿ ಓದಿಲ್ಲದವರು, ಪಾಣಿನೀಯ ವ್ಯಾಕರಣ ಜ್ಞಾನವಿಲ್ಲದವರು ಈ ಜಶ್ತ್ವ ಸಂಧಿಯನ್ನು 'ಜಸ್ತ್ವ ಸಂಧಿ' ಎಂದು ಬರೆದುಬಿಡುತ್ತಾರೆ. ಮಾಹೇಶ್ವರ ಸೂತ್ರಗಳಲ್ಲಿ 'ಜಬಗಡದ' ವ್ಯಂಜನಗಳಿಗೆ 'ಜಬಗಡದಶ್‌' ಸೂತ್ರದ ಪ್ರಕಾರ 'ಜಶ್‌'ಗಳೆಂದು ಸಂಕೇತ ನೀಡಲಾಗಿದೆ.'
"ಟಪಕಟತ', 'ಜಬಗಡದ' ಏಕಾದೇಶವಾದರೆ 'ಝಲಾಂ ಜಶೋಂತೇ' ಸೂತ್ರದಂತೆ ಜಶ್ತ್ವ ಸಂಧಿಯಾಗುತ್ತದೆ. ಇದು ಕೇವಲ ಮಿತ್ರ ರಾಘವೇಂದ್ರ ಅವರೊಬ್ಬರ ಸಮಸ್ಯೆಯಲ್ಲ. ಅದೆಷ್ಟೋ ಕನ್ನಡ ಪಾಠ ಮಾಡುವ ಅಧ್ಯಾಪಕರೂ ಕರಿಹಲಗೆಯಲ್ಲಿ 'ಜಸ್ತ್ವ ಸಂಧಿ' ಎಂದು ಅರಿವಿನ ಕೊರತೆಯಿಂದ ಬರೆಯುವುದನ್ನು ಗಮನಿಸಿದ್ದೇನೆ. ಜಿಜ್ಞಾಸುಗಳು ತಿದ್ದಿಕೊಳ್ಳಲೆಂಬ ಆಶಯದಿಂದ ಈ ಬಾಲಂಗೋಚಿ ಅಂಟಿಸಿದ್ದೇನೆ' ಎಂದಿದ್ದಾರೆ.
ಶಿರಾಳಕೊಪ್ಪದ ಸಂಪದಿಂದ ಮ.ರಾ. ಹೆಗಡೆ ಅವರು ಬರೆಯುತ್ತಾರೆ- 'ಜ.19ರ 'ಖುಷಿ' ಪುರವಣಿಯ 5ನೇ ಪುಟದ 'ಜ್ಯೋತಿಷ್ಯ ಸುಧೆ' ಲೇಖನದ ಮೂರನೇ ವಾಕ್ಯಪುಂಜದ 2ನೇ ಸಾಲು 'ಕಠಿ'ಗೆ ಮಹಾಪ್ರಾಣ ಬೇಡ. 'ಕಟಿ' ಅಲ್ಪಪ್ರಾಣಕ್ಕೇ ತೃಪ್ತಿಪಡುತ್ತದೆ.'
'ಇದೇ ಲೇಖನದ ಕೊನೆಯ ವಾಕ್ಯಪುಂಜದಲ್ಲಿ 'ದುರಾಭ್ಯಾಸ' ಓದಿ ಸಹಿಸಲಾಗಲಿಲ್ಲ. 'ದುರಭ್ಯಾಸ'ವನ್ನೇ ಬರೆದರೆ  ಓದುವುದಕ್ಕಾದರೂ ಸಹನೀಯವಾಗಿರುತ್ತದೆ' ಎಂದಿದ್ದಾರೆ.
ರಾಯಚೂರಿನ ಮಾನ್ವಿಯಿಂದ ಅಂಬಮ್ಮ ಪ್ರತಾಪಸಿಂಗ್ ಅವರು ಬರೆಯುತ್ತಾರೆ- 'ಜ.5ರ 'ಖುಷಿ'ಯ 'ಖುಷಿಬಂಧ-3'ರಲ್ಲಿ ಆಗಿರುವ ತಪ್ಪಿನ ಬಗ್ಗೆ ಗಮನ ಸೆಳೆಯಬಯಸುತ್ತೇನೆ.'
'ಮೇಲಿನಿಂದ ಕೆಳಕ್ಕೆ ಸುಳುಹು 8ರಲ್ಲಿ ಹರಸುತಲಿದ್ದಾಗ ಬಂದ ಮಗ ಎರಡಕ್ಷರದ ಪದ 'ಸುತ', ಸುಳುಹು 9ರಲ್ಲಿ ಬುದ್ಧಿ ಇಲ್ಲಿದೆ.. ಎರಡಕ್ಷರದ ಪದ ಮತಿ ಎಂದಾಗುತ್ತದೆ. ಪದಬಂಧ ತುಂಬುವ ಹವ್ಯಾಸವಿರುವ ನನಗೆ ಈ ಪದಗಳನ್ನು ಬರೆಯಲು ಕಷ್ಟವಾಗಲಿಲ್ಲ.'
'ಆದರೆ ಎಡದಿಂದ ಬಲಕ್ಕೆ ಸುಳುಹು 8ರಲ್ಲಿ ಸಲೀಸು ಎಂದು ಹೀಗೆ ಹೇಳಿ.. ಇದಕ್ಕೆ ಉತ್ತರ ಸಲೀಸಾಗಿ ಬರೆಯಲು ಆಗಲಿಲ್ಲ. ಮೇಲಿನಿಂದ ಕೆಳಕ್ಕೆ ಸುಳುಹು 8ರ ಉತ್ತರದ ಮೊದಲ ಅಕ್ಷರ 'ಸು', ಸುಳುಹು 9ರ ಉತ್ತರದ ಮೊದಲ ಅಕ್ಷರ 'ಮ' ಬರುತ್ತದೆ. ಆದರೆ ನೀವುಕೊಟ್ಟ ಉತ್ತರದಲ್ಲಿ 'ಸರಾಗ' ಎಂದು ಇದೆ. ನಾನು ಎಷ್ಟೇ ತಿಪ್ಪರಲಾಗ ಹಾಕಿದರೂ ಸರಾಗವಾಗಿ ಬರೆಯಲು ಆಗಲಿಲ್ಲ. 'ಸಲೀಸು' ಎಂದು ಹೇಗೆ ಹೇಳಬಹುದು ಹೇಳಿ ಪ್ಲೀಸ್‌' ಎಂದಿದ್ದಾರೆ.
ಜ.5ರ 'ಖುಷಿಬಂಧ-3'ರಲ್ಲಿ ತಪ್ಪಾಗಿರುವುದು ನಿಜ. ತಿಪ್ಪರಲಾಗ ಹಾಕುವಂತೆ ಮಾಡಿದ್ದಕ್ಕಾಗಿ ಅಂಬಮ್ಮ ಅವರು ನಮ್ಮನ್ನು ಕ್ಷಮಿಸುತ್ತಾರೆ ಎಂದು ಭಾವಿಸಿದ್ದೇನೆ. ಉತ್ತರದಲ್ಲಿ 'ಸರಾಗ'ದ ಬದಲು 'ಸುಗಮ' ಎಂದಾಗಿದ್ದರೆ ಎಲ್ಲವೂ ಸಲೀಸಾಗುತ್ತಿತ್ತು.


-ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement