ಅಧಿಕಾರಿಗಳಿಗೆ ಆಚಾರ ಸಂಹಿತೆ
ಸರ್ಕಾರದ ಹಿರಿಯ ಅಧಿಕಾರಿಗಳು ಈಗಿನ ಸೇವಾನಿಯಮಗಳಿಗೆ ಬದ್ಧರು. ಆದರೆ ಆ ನಿಯಮಗಳು ಬಹುಮಟ್ಟಿಗೆ ಅವರ ವೇತನ, ಭತ್ಯ, ರಜೆ..
ಸರ್ಕಾರದ ಹಿರಿಯ ಅಧಿಕಾರಿಗಳು ಈಗಿನ ಸೇವಾನಿಯಮಗಳಿಗೆ ಬದ್ಧರು. ಆದರೆ ಆ ನಿಯಮಗಳು ಬಹುಮಟ್ಟಿಗೆ ಅವರ ವೇತನ, ಭತ್ಯ, ರಜೆ, ಶಿಸ್ತು ಇಂತಹ ವಿಚಾರಗಳಿಗೇ ಸೀಮಿತ. ಅದಕ್ಕೂ ಮೀರಿ ಅವರ ಕಾರ್ಯಾಲಯದ ಹೊರಗಡೆ, ಸಾರ್ವಜನಿಕವಾಗಿ ಅನುಸರಿಸಬೇಕಾದ ಆಚಾರ ಸಂಹಿತೆಯನ್ನು ಕುರಿತಂತೆ ಈಗ ವಿಚಾರ ವಿನಿಮಯ ಆರಂಭವಾಗಿದೆ.
ಅಸಲಿಗೆ, ಅಂತಹ ಆಚಾರ ಸಂಹಿತೆ ಬೇಕೆ ಎನ್ನುವ ವಿಷಯದಲ್ಲೇ ಭಿನ್ನಾಭಿಪ್ರಾಯಗಳು ಇರಬಹುದು. ಆದರೂ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಇತರರಿಗೆ ಇಲ್ಲದ ಹಲವು ಸೌಲಭ್ಯಗಳನ್ನು ಸರ್ಕಾರ ಒದಗಿಸುವುದರಿಂದ ಹಾಗೂ ಸರ್ಕಾರದಲ್ಲಿ ಅವರಿಗಿರುವ ಸ್ಥಾನ-ಮಾನ ಅವರ ನಿತ್ಯ ಜೀವನದಲ್ಲಿ, ಸಾರ್ವಜನಿಕ ಜೀವನದಲ್ಲಿ, ವಿಶಿಷ್ಟವಾದ ರೀತಿಯ ಪ್ರತಿಷ್ಠೆಯನ್ನು ಒದಗಿಸಿದಂತೆಯೇ ಆಗಿರುವುದರಿಂದ ಅವರ ಸಾರ್ವಜನಿಕ ಜೀವನಕ್ಕೂ ಅನ್ವಯವಾಗುವ ಒಂದು ಆಚಾರ ಸಂಹಿತೆ ಬೇಕೇ ಎನ್ನುವ ಜನವರ್ಗವೂ ಇದೆ. ಈ ವಿವಾದ ಈಗ ದೆಹಲಿ ಹೈಕೋರ್ಟಿನ ಮೆಟ್ಟಿಲನ್ನೂ ಹತ್ತಿದೆ. ಸಿಬಿಐ ನಿರ್ದೇಶಕರು ಒಂದು ಸಾರ್ವಜನಿಕ ಸಭೆಯಲ್ಲಿ, ಜೂಜನ್ನು ನಿಷೇಧಿಸಿರುವ ಆದೇಶವನ್ನು ಜಾರಿಗೆ ತರುವುದಕ್ಕೆ ಆಗಿಲ್ಲ ಎಂದು ಒಪ್ಪಿಕೊಂಡು, ಅದೇ ರೀತಿ ಮಹಿಳೆಯರ ಮೇಲಿನ ಅತ್ಯಾಚಾರವನ್ನು ತಡೆಗಟ್ಟುವುದು ಸಾಧ್ಯವಿಲ್ಲ, ಅದನ್ನು ಹಾಗೇ ಸ್ವೀಕರಿಸುವುದು ಒಳಿತು ಎಂದು ಹೇಳಿರುವುದಕ್ಕೆ ಪ್ರತಿಭಟನೆ ಸೂಚಿಸುವ ರೀತಿಯಲ್ಲಿ ಎರಡು ಮಹಿಳಾ ಸಂಘಟನೆಗಳು ದೆಹಲಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತರಕ್ಷಣಾ ಮನವಿಯೊಂದನ್ನು ಸಲ್ಲಿಸಿದೆ.
ನ್ಯಾಯಾಲಯ, ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಸಾರ್ವಜನಿಕ ವರ್ತನೆ ಕುರಿತಂತೆ ಒಂದು ಆಚಾರ ಸಂಹಿತೆಯನ್ನು ರೂಪಿಸುವ ವಿಚಾರದಲ್ಲಿ ಸರ್ಕಾರ ಮಾರ್ಗಸೂಚಿಯನ್ನು ನೀಡಬೇಕೆನ್ನುವ ಆದೇಶವನ್ನು ನೀಡಿರುವುದು ಗಮನಾರ್ಹ. ಸರ್ಕಾರಿ ನೌಕರರ ನಡವಳಿಕೆಯನ್ನು ನಿಯಂತ್ರಿಸುವ ನಿಯಮಗಳು ಜಾರಿಯಲ್ಲಿದ್ದರೂ, ಅದುಅವರ ನೌಕರಿ ಹಾಗೂ ಕಾರ್ಯಾಲಯಕ್ಕೇ ಸೀಮಿತವಾದದ್ದು. ಆದರೆ ಕಾರ್ಯಾಲಯದ ಹೊರಗಡೆ ಅವರ ಹಾಗೂ ಸರ್ಕಾರದ ಪ್ರತಿಷ್ಠೆಯನ್ನು ಕಾಪಾಡುವ ದೃಷ್ಟಿಯಿಂದ ಕೆಲವು ಸೂತ್ರಗಳನ್ನು ರೂಪಿಸುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ, ಅಂತಹ ಸೂತ್ರ ಹಿರಿಯ ಅಧಿಕಾರಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವಂತೆ ಇರಬಾರದು. ನಿಜ. ಇಂತಹ ಸೂತ್ರವನ್ನು ರೂಪಿಸುವುದು ಕಷ್ಟ. 1977ರ (ತುರ್ತು ಪರಿಸ್ಥಿತಿಯ ಅನಂತರದ) ಲೋಕಸಭೆ ಚುನಾವಣೆ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರರು, ರಾಜಕೀಯ ಪಕ್ಷಗಳ ಬಹಿರಂಗ ಸಭೆಗಳಿಗೆ ಹಾಜರಾಗಬಾರದೆನ್ನುವ ನಿಯಮವನ್ನು ಜಾರಿಗೆ ತರಲು ಅಂದಿನ ಇಂದಿರಾಗಾಂಧಿ ಸರ್ಕಾರ ಪ್ರಕಟಿಸಿತ್ತು. ಆ ಚುನಾವಣೆಯಲ್ಲಿ ದೆಹಲಿಯಿಂದಲೇ ಸ್ಪರ್ಧಿಸಿದ್ದ ವಾಜಪೇಯಿ ಆ ನಿಯಮವನ್ನು ಧಿಕ್ಕರಿಸಲು ನೌಕರರಿಗೆ ಕರೆ ನೀಡಿದಾಗಲೂ ಇಂತಹದ್ದೇ ಚರ್ಚೆ ನಡೆದಿತ್ತು. ಅದು ಅಲ್ಲಿಗೇ ಮುಗಿಯಿತು. ಈಗಲೂ ಈ ವಿಚಾರ ಗಂಭೀರ ಪ್ರಬುದ್ಧ ಸ್ವರೂಪದ ಚರ್ಚೆ, ವಿಚಾರ ವಿನಿಮಯಕ್ಕೆ ಗ್ರಾಸವನ್ನು ಒದಗಿಸಿದೆ. ದೆಹಲಿ ಹೈಕೋರ್ಟ್, ಈ ವಿವಾದವನ್ನು ಅದರ ತರ್ಕಬದ್ಧ ಅಂತಿಮ ಘಟ್ಟಕ್ಕೆ ಕೊಂಡೊಯ್ಯಬೇಕು. ಇತರ ಅನೇಕ ವಿಚಾರಗಳಂತೆ, ಇದೂ ಅರ್ಧದಾರಿಯಲ್ಲೇ ಮಾಯವಾಗಬಾರದು.