ಬರ್ಬರ ಸ್ಥಿತಿಗೆ ಕೊನೆ ಎಂದು?
ಪಶ್ಚಿಮ ಬಂಗಾಳ, ಭಾರತದ ಮುಂದುವರಿದ ಹಾಗೂ ಪ್ರಗತಿಶೀಲ ರಾಜ್ಯಗಳಲ್ಲಿ ಒಂದು. ಒಂದು ಕಾಲದಲ್ಲಿ ಬಂಗಾಳದ ಇಂದಿನ ಚಿಂತನೆ ಭಾರತದ ನಾಳೆಯ ...
ಪಶ್ಚಿಮ ಬಂಗಾಳ, ಭಾರತದ ಮುಂದುವರಿದ ಹಾಗೂ ಪ್ರಗತಿಶೀಲ ರಾಜ್ಯಗಳಲ್ಲಿ ಒಂದು. ಒಂದು ಕಾಲದಲ್ಲಿ ಬಂಗಾಳದ ಇಂದಿನ ಚಿಂತನೆ ಭಾರತದ ನಾಳೆಯ ಕಾರ್ಯಕ್ರಮ ಎನ್ನುವ ಮಾತೂ ಜಾರಿಯಲ್ಲಿತ್ತು. ಸಾಮಾಜಿಕ ನ್ಯಾಯ ಹಾಗೂ ಸುಧಾರಣೆ ನೀತಿಯಲ್ಲೂ ಬಂಗಾಳಕ್ಕೆ ಭವ್ಯ ಇತಿಹಾಸವೇ ಇದೆ. ರಾಜಾರಾಮ ಮೋಹನ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್ ಅವರಂತಹ ಸುಧಾರಕರ ನಾಡು ಅದು.
ಆದರೆ ಆ ರಾಜ್ಯದಲ್ಲಿ ಈಗಲೂ ಕೆಟ್ಟ ಗ್ರಾಮ ಪಂಚಾಯಿತಿಗಳ, ಅನಧಿಕೃತ ನ್ಯಾಯಾಲಯಗಳ ದುರಾಡಳಿತ ಅನೇಕ ಕಡೆಗಳಲ್ಲಿ ಜಾರಿಯಲ್ಲಿದೆ. "ಕುಲದ ಗೌರವದ" ಹೆಸರು ಹೇಳಿಕೊಂಡು ಅಮಾಯಕರನ್ನು ಸುಲಿಯುವ, ಬರ್ಬರವಾಗಿ ಹಿಂಸಿಸುವ ಘಟನೆಗಳು ನಡೆಯುತ್ತಿವೆ. ಸೋಮವಾರ ಬೀರಭೂಮ್ ಜಿಲ್ಲೆಯ ಸುಬುಲಪುರ ಗ್ರಾಮದಲ್ಲಿ ನಡೆದ ಅನಾಗರಿಕ, ಅಮಾನುಷ ಘಟನೆ ಇದು: ಅಲ್ಲಿನ ಆದಿವಾಸಿ ಸಮಾಜದ, 20 ವರ್ಷದ ತರುಣಿಯೊಬ್ಬಳು ಮೇಲ್ಜಾತಿಯ ಒಬ್ಬ ಯುವಕನ ಜತೆ ಸಂಬಂಧವನ್ನು ಇಟ್ಟುಕೊಂಡಿದ್ದಳು. ಇದನ್ನು ಗಮನಿಸಿದ ಆದಿವಾಸಿ ಕೂಟದ ಮುಖಂಡರು, ಜಾತಿ ನ್ಯಾಯಾಲಯದ ಸಭೆಯನ್ನು ಕರೆದು, ಪ್ರಣಯಿಗಳಿಬ್ಬರನ್ನೂ ಥಳಿಸಿ, ಅನಂತರ ಮರಕ್ಕೆ ಕಟ್ಟಿಹಾಕಿ, ಇಬ್ಬರಿಗೂ "ಮಾಡಿದ ತಪ್ಪಿಗಾಗಿ' ದಂಡವನ್ನು ವಿಧಿಸಿದರು. ಆದಿವಾಸಿ ತರುಣಿಯ ಬಳಿ ದಂಡದ ಮೊತ್ತವಾದ 25000 ರುಪಾಯಿಗಳು ಇರಲಿಲ್ಲ. ಆ ಯುವಕ ತನಗೆ ವಿಧಿಸಿದ್ದ ಜುಲ್ಮಾನೆಯನ್ನು ತೆತ್ತು ಹೊರಟುಹೋದ.
ದಂಡ ಕೊಡಲು ಹಣವಿಲ್ಲದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲು "ನ್ಯಾಯಾಲಯ" ಆದಿವಾಸಿಗಳಿಗೆ ಆದೇಶ ನೀಡಿತು. ಅದರಂತೆ ಶಿಕ್ಷೆಯನ್ನು ಜಾರಿಗೆ ತರಲಾಯಿತು. ಆ ಯುವತಿಯ ಹೇಳಿಕೆಯಂತೆ ಹದಿಮೂರು ಜನರು ಅವಳ ಮೇಲೆ ಅತ್ಯಾಚಾರ ನಡೆಸಿದರು. ಈ ಘಟನೆಯ ವಿಚಾರ ಬಹಿರಂಗವಾದಾಗ ಸುತ್ತಮುತ್ತಲ ಪ್ರದೇಶದಲ್ಲಿನ ಜನರ ಆಕ್ರೋಶ ದೊಡ್ಡ ರೀತಿಯಲ್ಲೇ ಪ್ರಕಟವಾಯಿತು. ಜಿಲ್ಲಾ ಪೊಲೀಸರು ಆದಿವಾಸಿ ಗುಂಪಿನ ಮುಖಂಡನೂ ಸೇರಿದಂತೆ ಹದಿಮೂರು ಜನರನ್ನು ಬಂಧಿಸಿ, ನ್ಯಾಯಾಂಗದ ವಶಕ್ಕೆ ಕೊಟ್ಟಿದ್ದಾರೆ. ಈ ವಿಚಾರವನ್ನು, ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಿಳಿಸಿದಾಗ ಅವರು ಕುಪಿತರಾಗಿದ್ದು ಸಹಜ. ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ತಂದಾಗ, ಅವರನ್ನು ಪೊಲೀಸರ ವಶಕ್ಕೆ ಪಡೆಯಲಿಲ್ಲವೇಕೆ ಎನ್ನುವ ಕೋಪ ಅವರದ್ದು. ಹಿರಿಯ ಪೊಲೀಸ್ ಅಧಿಕಾರಿಯನ್ನೇ ಅಲ್ಲಿಂದ ವರ್ಗ ಮಾಡುವ ಆದೇಶವನ್ನು ಮುಖ್ಯಮಂತ್ರಿ ನೀಡಿದ್ದಾರೆ.
ನಿಜ. ಪೊಲೀಸ್ ಅಧಿಕಾರಿಯ ವರ್ಗದಿಂದ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಅತ್ಯಾಚಾರಕ್ಕೀಡಾದ ತರುಣಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಸುಧಾರಿಸುತ್ತಿದೆ. ಸಹಜವಾಗಿಯೇ, ಘಟನೆಯ ವಿವರಗಳು ಪ್ರಕಟವಾದ ಅನಂತರ ಬಂಗಾಳದ ಊರುಗಳಲ್ಲಿ ಹಾಗೂ ದೆಹಲಿಯಲ್ಲಿ ಮಹಿಳಾ ಸಂಘಟನೆಗಳು ಜಾಗೃತವಾಗಿವೆ. ಖಂಡನಾ ಹೇಳಿಕೆಗಳನ್ನು ನೀಡಿವೆ. ರಾಷ್ಟ್ರೀಯ ಮಹಿಳಾ ಆಯೋಗ ಘಟನೆಯ ತನಿಖೆಗೆ ಮೂವರ ತಂಡವನ್ನು ಕಳುಹಿಸುವ ನಿರ್ಧಾರವನ್ನೂ ಪ್ರಕಟಿಸಿದೆ. ಯಾವುದೇ ಕಾರಣಕ್ಕೂ ಸಮಾಜ ಇಂತಹ ಬರ್ಬರ, ಕ್ರೂರ ಘಟನೆಗಳನ್ನು ಸಹಿಸಬಾರದು. ಇನ್ನು ಈ ಘಟನೆಯ ತನಿಖೆಯಾಗಿ, ಅಪರಾಧಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವವರೆಗೂ ಅಲ್ಲಿನ ಸ್ವಯಂ ಸೇವಾ ಸಂಸ್ಥೆಗಳು ಎಚ್ಚರದಿಂದಿರಬೇಕು.
ಆರೋಪಿಗಳ ವಿರುದ್ಧ ಸಾಕ್ಷಿ ಹೇಳಬಹುದಾದ ವ್ಯಕ್ತಿಗಳನ್ನು ರಕ್ಷಿಸುವ ಹೊಣೆಯೂ ಪೊಲೀಸರದ್ದೇ. ಈಗ ಬಂಧಿತ ವ್ಯಕ್ತಿಗಳಲ್ಲಿ ಕೆಲವರು ತಾವು ಅಲ್ಲಿ ಇರಲೇ ಇಲ್ಲ ಎನ್ನುತ್ತಿದ್ದಾರೆಂದು ವರದಿಯಾಗಿದೆ. ಇಂತಹ ಯಾವುದೇ ತಂತ್ರಕ್ಕೂ ಪೊಲೀಸರು ಬಲಿಯಾಗಬಾರದು. ಅಪರಾದಕ್ಕೆ ತಕ್ಕ ಶಿಕ್ಷೆಯಾಗಿ, ಭವಿಷ್ಯದಲ್ಲಿ ಇದು ಒಂದು ಉದಾಹರಣೆಯಂತೆ ಆಗಬೇಕು. ಅದರ ಜತೆಯಲ್ಲೇ ರಾಜಕೀಯ ಪಕ್ಷಗಳು ತಮ್ಮ ಓಟುಬ್ಯಾಂಕಿನ ರಾಜಕೀಯವನ್ನು ಮರೆತು, ಪರಸ್ಪರ ದೋಷಾರೋಪಣೆಯ ಆಮಿಷಕ್ಕೆ ಬಲಿಯಾಗದೇ ಆದಿವಾಸಿಗಳ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಕುರಿತು ತಿಳಿವಳಿಕೆ ನೀಡಬೇಕು. ಈಗಿನ ಬರ್ಬರ ವ್ಯವಸ್ಥೆ ಅಳಿಯಲೇಬೇಕು.