ಬಸವ ಪುರಸ್ಕಾರಕ್ಕೆ ಅನಂತಮೂರ್ತಿ ಎಷ್ಟು ಅರ್ಹ?
ಇದೇ ತಿಂಗಳ ಏಳನೇ ತಾರೀಖಿನ ಎಲ್ಲಾ ದಿನಪತ್ರಿಕೆಗಳಲ್ಲಿ ಪ್ರಕಟವಾದ "ಬಸವ ಪುರಸ್ಕಾರ"ದ ಸುದ್ದಿಯನ್ನೋದಿ ದಿಗ್ಭ್ರಮೆಯಾಯಿತು...
ಇದೇ ತಿಂಗಳ ಏಳನೇ ತಾರೀಖಿನ ಎಲ್ಲಾ ದಿನಪತ್ರಿಕೆಗಳಲ್ಲಿ ಪ್ರಕಟವಾದ "ಬಸವ ಪುರಸ್ಕಾರ"ದ ಸುದ್ದಿಯನ್ನೋದಿ ದಿಗ್ಭ್ರಮೆಯಾಯಿತು. "ಬಸವ ಪುರಸ್ಕಾರ"ದ ಯೋಜನೆಯನ್ನು, ನಾನು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸದಸ್ಯನಾಗಿದ್ದಾಗ (92-2000) 23.09. 1998ರ ಸಭೆಯಲ್ಲಿ ಪ್ರಸ್ತಾವನೆಯನ್ನು ಮಂಡಿಸಿದ್ದೆ. ಆಗ ಮುಖ್ಯಮಂತ್ರಿಗಳಾಗಿದ್ದ ದಿ॥ ಜೆ.ಎಚ್. ಪಟೇಲರು ತಕ್ಷಣ ಒಪ್ಪಿಕೊಂಡರು. ಅವುಗಳ ವಿವರಗಳನ್ನು ನಾನಿಲ್ಲಿ ಸ್ಥಳವಾಕಾಶವಿಲ್ಲದ ಕಾರಣ ಬರೆಯುವುದಿಲ್ಲ. ಆಗ ಆರಿಸಿಕೊಂಡ ಮಾನದಂಡಗಳು ಇವು: 1. ನಡೆ ನುಡಿ ಶುದ್ಧವಾಗಿ ಮತ್ತು ಒಂದಾಗಿರಬೇಕು. 2. ಈ ಪ್ರಶಸ್ತಿಯನ್ನು ಕನ್ನಡನಾಡಿನ ಹೊರಗೆ ಸಾಮಾಜಿಕ ಸೇವೆಯನ್ನು, ನಿಸ್ವಾರ್ಥದಿಂದ ಮಾಡುತ್ತಿರುವ ವ್ಯಕ್ತಿಗೆ ನೀಡುವುದು ಪ್ರಥಮ ಆದ್ಯತೆ ಎಂದು ವಿಶೇಷವಾಗಿ ಒಪ್ಪಿಕೊಳ್ಳಲಾಗಿತ್ತು. ಇದರರ್ಥವೆಂದರೆ, "ಮಹಾ ಮಾನವತಾವಾದಿ, ಸಮಾಜ ಸುಧಾರಕ, ಪರಿವರ್ತನೆಯ ಪ್ರವರ್ತಕ, ಸರ್ವ ಸಮಾನತೆಗಾಗಿ ಹೋರಾಡಿದ ಹಾಗೂ ಶೋಷಿತ ವರ್ಗಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದ 12ನೇ ಶತಮಾನದ ಜಗಜ್ಯೋತಿ ಬಸವೇಶ್ವರರ ಹೆಸರು ಮತ್ತು ಕೀರ್ತಿ ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲಿ ಹಬ್ಬಲಿ" ಎಂಬುದಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಕೀರ್ತಿ ಬರುತ್ತದೆ. 3. ವಚನ ಸಾಹಿತ್ಯದ ಸಂಶೋಧನೆ ಹಾಗೂ ಬರವಣಿಗೆಯಲ್ಲಿ ತೊಡಗಿರುವ ವ್ಯಕ್ತಿಗೂ ಈ ಪ್ರಶಸ್ತಿಯನ್ನು ನೀಡಬಹುದು. ಬಸವ ಪ್ರಶಸ್ತಿಗೆ ಮೊದಲ ಬಾರಿಗೆ ಡಾ॥ ಜಿ.ಎಸ್.ಎಸ್. ಮತ್ತು ಡಾ॥ ಎಚ್.ನರಸಿಂಹಯ್ಯನವರ ಸಮಿತಿಯು ಆರಿಸಿದ್ದು ಆಂಧ್ರದ ವಿಜಯವಾಡದ ದಿ॥ ಸರಸ್ವತಿ ಗೋರಾ ಅವರನ್ನು. ಅವರನ್ನು "ನಾಸ್ತಿಕ ಕೇಂದ್ರದ ಪ್ರೀತಿಯ ಬೆಳಕು" ಎಂದು ಜಿ.ಎಸ್.ಎಸ್. ತಮ್ಮ ಲೇಖನದಲ್ಲಿ ಬಣ್ಣಿಸಿದ್ದಾರೆ (2001). ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪ್ರದಾನ ಮಾಡಿದರು. ಆ ಸಭೆಯಲ್ಲಿ ನಾನಿದ್ದೆ. ಜಿ.ಎಸ್.ಎಸ್. ಮತ್ತು ಎಚ್. ನರಸಿಂಹಯ್ಯ ಇದ್ದರು. ಆಗ ಈ ಪ್ರಶಸ್ತಿಯ ಮೊತ್ತ ರು. 1.50 ಲಕ್ಷಗಳಷ್ಟಿತ್ತು. ಈಗ, ಈ ಪ್ರಶಸ್ತಿಯ ಮೊತ್ತ 10 ಲಕ್ಷ ರುಪಾಯಿಗಳಿಗೇರಿದೆ. ಆದರೆ ಅನಂತಮೂರ್ತಿ ಅವರಿಗೆ ನೀಡಲಿರುವುದರಿಂದ ಪ್ರಾಶಸ್ತ್ಯ ಕುಸಿದು ಹೋಗಿದೆ.
ಡಾ॥ ಯು.ಆರ್. ಅನಂತಮೂರ್ತಿಯವರು ವಚನ ಸಾಹಿತ್ಯ ಕುರಿತು ಒಂದು ಚಿಕ್ಕ ಪುಸ್ತಿಕೆಯನ್ನೂ ಬರೆದಿಲ್ಲ. ಅಷ್ಟೇ ಅಲ್ಲ, ಬಸವಣ್ಣನವರ ತತ್ವ ಆದರ್ಶಗಳ ವಿರುದ್ಧವಾಗಿ ಬದುಕಿದ್ದಾರೆ, ಬದುಕುತ್ತಲಿದ್ದಾರೆ. ಬಸವಣ್ಣನವರ ಸಪ್ತ ಸೂತ್ರಗಳಲ್ಲಿ ಒಂದನ್ನಾದರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿಲ್ಲ. ಇಂಥ ವ್ಯಕ್ತಿಗೆ ಬಸವ ಪುರಸ್ಕಾರವನ್ನು ನೀಡಿದರೆ ಬಸವಣ್ಣನವರಿಗೆ ಅಪಮಾನ ಮಾಡಿದಂತೆ- ಘೋರ ಅಪಮಾನ ಮಾಡಿದಂತೆ. ರಾಜಕೀಯ ಅವಕಾಶವಾದೀ ಸಾಹಿತಿಗಳಾದ ಅನಂತಮೂರ್ತಿಯವರು ಅನಂತ ಅವತಾರಗಳನ್ನು ತಳೆಯಬಲ್ಲವರು. ಈಗ ಸಿದ್ದರಾಮಯ್ಯನವರಿಗೆ ಆಪ್ತರು. ಭಾಜಪದ ಪ್ರಧಾನ ಮಂತ್ರಿ ಅಭ್ಯರ್ಥಿ ಮೋದಿಯವರನ್ನು ಹಿಗ್ಗಾಮುಗ್ಗಾ ಟೀಕೆ ಮಾಡಿರುವುದರಿಂದ ಈಗ ಸಿದ್ದರಾಮಯ್ಯ ಕೃಪೆ ತೋರಿದ್ದಾರೆ. ಆಯ್ಕೆ ಸಮಿತಿಯ ಅಧ್ಯಕ್ಷ ರಂಜಾನ ದರ್ಗಾ ಯಾವುದೋ ಒತ್ತಡಗಳಿಗೆ ಮಣಿದಿದ್ದಾರೆ ಎಂಬುದು ನನ್ನ ಅನ್ನಿಸಿಕೆ. ಅವರು ನನ್ನ ಫೋನಿಗೂ, ಅಲ್ಲದೆ ಯಾರ ಫೋನಿಗೂ ಉತ್ತರಿಸದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಜೀವನದುದ್ದಕ್ಕೂ ಬಸವಣ್ಣನವರ ತತ್ವ, ಆದರ್ಶಗಳ ಪ್ರಸಾರ ಮತ್ತು ಪಾಲನೆ ಮಾಡುತ್ತಿರುವ ಗೆಳೆಯ ರಂಜಾನ್ ದರ್ಗಾ ಬಹುದೊಡ್ಡ ತಪ್ಪು ಮಾಡಿದ್ದಾರೆ ಎಂದು ವಿಷಾದದಿಂದ ಹೇಳುತ್ತೇನೆ. ಬಸವಣ್ಣನವರನ್ನು ಗೌರವಿಸುವವರೆಲ್ಲರೂ ಅನಂತಮೂರ್ತಿಯ ಆಯ್ಕೆಯನ್ನು ವಿರೋಧಿಸಬೇಕು ಹಾಗೂ ಧಿಕ್ಕರಿಸಬೇಕು. ಲಾಬಿ ಮಾಡುತ್ತಲೇ ರಾಷ್ಟ್ರಮಟ್ಟದ ಜ್ಞಾನಪೀಠಿಗಳಾಗಿರುವ ಅನಂತಮೂರ್ತಿ ಈಗ ಆ ಪ್ರಶಸ್ತಿಗಿಂತಲೂ ಶ್ರೇಷ್ಠವಾದ ಪ್ರಶಸ್ತಿಗಾಗಿ ಲಾಬಿ ಮಾಡಿ ಯಶಸ್ವಿಯಾಗಿದ್ದಾರೆ. ಬಸವಣ್ಣನವರಿಗೆ ಇದಕ್ಕಿಂತ ಹೆಚ್ಚಿನ ಅವಮಾನ ಇನ್ನೊಂದಿರಲಾರದು! "ನುಡಿಯೊಳಗಾಗಿ ನಡೆಯದಿದ್ದರೆ/ ಕೂಡಲ ಸಂಗಮದೇವನೆಂತೊಲಿವನಯ್ಯಾ" ಆದರೆ, ಈಗ ಸಿದ್ದರಾಮಯ್ಯನೊಲಿದಿದ್ದಾರೆ! ಅಷ್ಟು ಸಾಕಲ್ಲವೇ ಅನಂತಮೂರ್ತಿಗಳೇ?
- ಡಾ॥ ಹೆಚ್. ಚಂದ್ರಶೇಖರ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com