ತಪ್ಪಾಯ್ತು ತಿದ್ಕೋತೀವಿ
ಬಾಗಲಕೋಟೆಯ ಇಳಕಲ್ನಿಂದ ಶ್ರೀಕಾಂತ್ ಮುದಗಲ್ಲ ಪತ್ರ ಬರೆಯುತ್ತಾರೆ- "ತಪ್ಪಾಯ್ತು ತಿದ್ಕೋತೀವಿ' ಅಂಕಣದ ..
ಬಾಗಲಕೋಟೆಯ ಇಳಕಲ್ನಿಂದ ಶ್ರೀಕಾಂತ್ ಮುದಗಲ್ಲ ಪತ್ರ ಬರೆಯುತ್ತಾರೆ- "ತಪ್ಪಾಯ್ತು ತಿದ್ಕೋತೀವಿ' ಅಂಕಣದ ಬಗ್ಗೆ ಕೆಲವು ಓದುಗರು ಆಕ್ಷೇಪ ಮತ್ತು ವಿರೋಧವ್ಯಕ್ತಪಡಿಸಿದ್ದಾರೆ. ಆದರೆ ಇಂತಹ ಅಂಕಣ ಬೇರೆ ಯಾವ ಪತ್ರಿಕೆಯಲ್ಲೂ ಇಲ್ಲ. ಇದೊಂದು ಹೊಸ ಪ್ರಯೋಗ. ಈ ಅಂಕಣದ ಓದುಗರಿಗೆ ಪತ್ರಿಕೆಯ ವರದಿಗಳಲ್ಲಿ, ಲೇಖನಗಳಲ್ಲಿ ತಪ್ಪಾಗಿದ್ದರೆ ಅದನ್ನು ಬರೆದು ತಿಳಿಸಲು ಇದೊಂದು ಒಳ್ಳೆಯ ಅವಕಾಶ. ಹೀಗೆ ಓದುಗರು ಬರೆದ ತಪ್ಪಿನ ಬಗ್ಗೆ ಸ್ವತಃ ಸಂಪಾದಕರೇ ಅದನ್ನು ಒಪ್ಪಿಕೊಳ್ಳುತ್ತಾ ಅಥವಾ ಅದಕ್ಕೆ ಸೂಕ್ತ ಉತ್ತರ ನೀಡಿ ತಪ್ಪದೇ ಈ ಅಂಕಣದಲ್ಲಿ ಪ್ರಕಟಿಸುತ್ತಿರುವುದು ಪತ್ರಿಕೆಯ ಬಗ್ಗೆ ನಮಗೆ ಅಭಿಮಾನ ಮೂಡಿಸಿದೆ. ಈ ಅಂಕಣವು ಹೊಸಬರಿಗೆ ಪತ್ರಿಕೆ ಓದುವ ಮತ್ತು ಪತ್ರಿಕೆಗೆ ಬರೆಯುವ ಹವ್ಯಾಸವನ್ನು ವಿಶೇಷವಾಗಿ ಪ್ರೋತ್ಸಾಹಿಸುತ್ತದೆ. ಇದರಿಂದ ಉದಯೋನ್ಮುಖ ಬರಹಗಾರರಿಗೆ ಮತ್ತು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ನನಗಂತೂ ಇದು ತುಂಬಾ ಮೆಚ್ಚಿನ ಅಂಕಣ.'
'ಮಾನ್ಯರೇ, ಜ.17ರ ಸಂಚಿಕೆಯ ಪುಟ 3ರಲ್ಲಿ ಮೇಲ್ಗಡೆ ಪ್ರಕಟವಾದ 'ಉದ್ಯಮ ಆರಂಭಿಸಲು ಸರ್ಕಾರ ಉತ್ತೇಜಿಸುತ್ತದೆ' ಎಂಬ ತಲೆಬರಹದ ಸುದ್ದಿಯು ಜ.13ರ ಸಂಚಿಕೆಯ ಪುಟ 3ರಲ್ಲಿಯೇ ಈ ಮೊದಲು ಪ್ರಕಟವಾಗಿದೆ! ನಿಮ್ಮ ಪತ್ರಿಕೆಯಲ್ಲಿ ಪದೇಪದೆ ಇಂತಹ ಪ್ರಮಾದಗಳು ಏಕೆ ಸಂಭವಿಸುತ್ತವೆ. ಪುಟ ನಿರ್ವಹಿಸುವವರು ಪತ್ರಿಕೆಯನ್ನು ಓದುವುದಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನ ಕುವೆಂಪು ನಗರದಿಂದ ಸಿ.ವಿನಯ್ ರಾವ್ ಪತ್ರ ಕಳುಹಿಸಿದ್ದಾರೆ. 'ಜಗತ್ತಿನ ಕಾಲಮಾನದ ಗಣನೆಯಲ್ಲಿ ನಾನು ತಿಳಿದಂತೆ 'ಜಿಎಂಟಿ' ಎಂದರೆ 'ಗ್ರಿನಿಚ್ ಮೀನ್ ಟೈಂ' ಎಂದು. ಕಾಲವನ್ನು ಇದರಿಂದ ಅಂದರೆ 'ಗ್ರಿನಿಚ್' ಎಂಬ ಸ್ಥಳದಿಂದ ಪೂರ್ವಕ್ಕೆ ಮತ್ತು ಪಶ್ಚಿಮಕ್ಕೆ ಅಳೆಯಲಾಗುತ್ತದೆ. ಕ.ಪ್ರ ಪತ್ರಿಕೆಯ ಜ.3ರ ಪುಟ 10ರಲ್ಲಿ 'ಐಎಸ್ಟಿ ಕೈಬಿಟ್ಟು ಪ್ರತ್ಯೇಕ ಕಾಲಮಾನದತ್ತ ಅಸ್ಸಾಂ' ಸುದ್ದಿಯಲ್ಲಿ 'ಗ್ಲೋಬಲ್ ಮ್ಯೂನಿಚ್ ಟೈಂ' ಎಂಬ ಪದ ವಿವರಣೆ ನೀಡಲಾಗಿದೆ. 'ಗ್ರಿನಿಚ್ ಮೀನ್ ಟೈಂ' ಎಂಬುದನ್ನು 'ಗ್ಲೋಬಲ್ ಮ್ಯೂನಿಚ್ ಟೈಂ' ಎಂದು ಬದಲಾವಣೆ ಮಾಡಲಾದ ಬಗ್ಗೆ ನಾನು ಓದಿಲ್ಲ. 'ಗ್ಲೋಬಲ್ ಮ್ಯೂನಿಚ್ ಟೈಂ' ಎಂಬುದು ತಪ್ಪು ಬಳಕೆ ಎನಿಸುತ್ತದೆ. ಇನ್ನು ಜ.2ರ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ಎಸ್.ರಾಘವೇಂದ್ರ ಅವರು 'ದ್ವಾರಕಾ ಉತ್ತರದಲ್ಲಿಲ್ಲ, ಅದು ಪಶ್ಚಿಮ ಭಾರತದ ಗುಜರಾತ್ ರಾಜ್ಯದಲ್ಲಿದೆ ಎಂದು ಹೇಳಿದ್ದಾರೆ. ದ್ವಾರಕಾವು ಮೈಸೂರಿಗೆ ವಾಯವ್ಯದಲ್ಲಿದೆ. ದ್ವಾರಕೆಯು ಉತ್ತರದಲ್ಲಾದರೂ ಇರಲಿ, ಪಶ್ಚಿಮದಲ್ಲಾದರೂ ಇರಲಿ ನಷ್ಟವೇನು? ಅದು ಭಾರತದಲ್ಲಿದೆ' ಎಂದು ಹೇಳಿದ್ದಾರೆ.
- ವಿಶ್ವೇಶ್ವರ ಭಟ್