ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪತ್ರಪ್ರಭ

Mainashree
Updated On : 27 Jan 2014, 10:17 am

ಹಣಕಾಸು ಅವ್ಯವಸ್ಥೆ: ಬೇರೆಯವರನ್ನೇಕೆ ದೂರುವಿರಿ?
ರಾಜ್ಯದ ಶಿಕ್ಷಣ ಮಂತ್ರಿ ಕಿಮ್ಮನೆ ರತ್ನಾಕರ ಅವರು ಸರ್ಕಾರದ ಬಳಿ ಪಾವತಿಗೆ ಕಾಯುತ್ತಿರುವ 1700 ಕೋಟಿ. ರುಗಳಷ್ಟು ಹಳೆಯ ಬಾಕಿ ಇದ್ದು, ಸರ್ಕಾರಕ್ಕೆ ದುಡ್ಡೇನು ಮೇಲಿಂದ ಉದುರುವುದಿಲ್ಲ ಎಂದು ಅಪ್ಪಣೆ ಕೊಡಿಸಿದ್ದಾರೆ. ಹಿಂದಿನ ಸರ್ಕಾರದ ಅಂದಾದುಂದಿ ನಿರ್ಧಾರಗಳೇ ಇದಕ್ಕೆ ಕಾರಣ ಎಂದೂ ಹೇಳಿದ್ದಾರೆ. ಅದು ನಿಜವೂ ಇರಬಹುದು. ಆದರೆ ಅಧಿಕಾರಕ್ಕೆ ಬಂದೊಡನೆ ಪೂರ್ಣ ಪ್ರಮಾಣದ ಸಚಿವ ಸಂಪುಟದ ರಚನೆಗೂ ಕಾಯದೆ ಸಾವಿರಾರು ಕೋಟಿ ರು.ಗಳ ಯೋಜನೆಯನ್ನು ಘೋಷಿಸಿದ ಮುಖ್ಯಮಂತ್ರಿಗಳಿಗೆ ಗೊತ್ತಿರಲಿಲ್ಲವೇ? ಅವರು ಈ ಹಿಂದೆ ಹಣಕಾಸು ಖಾತೆಯನ್ನು ನಿರ್ವಹಿಸಿದವರಲ್ಲವೇ? ಹತ್ತಿರದಲ್ಲಿ ಯಾವ ಚುನಾವಣೆಯೂ ಇಲ್ಲದ ಸಂದರ್ಭದಲ್ಲಿ ಅಷ್ಟು ತರಾತುರಿಯಲ್ಲಿ ಕಾರ್ಯಸಾಧುವಲ್ಲದ, ಓಲೈಕೆ ರಾಜಕಾರಣದ ಯೋಜನೆಗಳನ್ನು ಘೋಷಿಸಲು ಮುಂಗಡ ಪತ್ರ ಮಂಡನೆವರೆಗೂ ಕಾಯಬಹುದಿತ್ತಲ್ಲವೇ? ಅಸಮರ್ಪಕ ಹಣಕಾಸು ನಿರ್ವಹಣೆಯ ಬಗ್ಗೆ ಇನ್ನೊಬ್ಬರನ್ನು ದೂರುವ ಇವರು ತಮ್ಮ ಸರ್ಕಾರದ ಕ್ರಮಗಳನ್ನು ಹೇಗೆ ಸಮರ್ಥಿಸುತ್ತಾರೆ?ಬೊಕ್ಕಸದಲ್ಲಿ ಹಣವೇ ಇಲ್ಲದೆ ಯೋಜನೆಗಳನ್ನು ಘೋಷಿಸುತ್ತಾ ಯಾರನ್ನು ಮರುಳು ಮಾಡಲು ಯತ್ನಿಸುತ್ತಿದ್ದಾರೆ? ಮಂತ್ರಿಗಳಿಗೆ ಹೊಸ ಕಾರು ಕೊಳ್ಳಲು, 'ವಾಸ್ತು' ಪ್ರಕಾರ ವಿಧಾನಸೌಧವನ್ನೇ ಒಡೆದು ರಿಪೇರಿ ಮಾಡಲು, ಶಾಸಕರ ವಿದೇಶಿ ಪ್ರವಾಸದ ಮೋಜಿಗೆ ಸರ್ಕಾರದ ಬಳಿ ಹಣ ಇರುವುದಾದರೆ ಉಳಿದ ಯೋಜನೆಗಳಿಗೆ ಹಣ ಕ್ರೋಢೀಕರಣ ಏಕೆ ಸಾಧ್ಯವಿಲ್ಲ? ಹಿಂದಿನ ಸರ್ಕಾರಗಳ ಯೋಜನೆಗಳು ಅವೈಜ್ಞಾನಿಕ ಎನ್ನುವವರು, ರಸ್ತೆ, ವಿದ್ಯುತ್, ಆರೋಗ್ಯದಂತಹ ಮೂಲಸೌಕರ್ಯಗಳನ್ನು ನಿರ್ಲಕ್ಷಿಸಿ ಶಾದಿ ಭಾಗ್ಯ, ಲ್ಯಾಪ್ಟಾಪ್ ಅಂತಹ ಯೋಜನೆಗಳಿಗೆ ಆದ್ಯತೆ ನೀಡುತ್ತಿರುವುದು ವೈಜ್ಞಾನಿಕ, ಸಂತುಲಿತ ಆಡಳಿತದ ದ್ಯೋತಕವೇ?
-ಅ.ಸು.ರವೀಂದ್ರ, ಶಿವಮೊಗ್ಗ
ನಿಜವಾಗಿಯೂ ವಿದ್ಯುತ್ನ ಅಭಾವವಿದೆಯೇ?
ಮೊನ್ನೆ ಪತ್ರಿಕೆಗಳಲ್ಲಿ ದಪ್ಪ ದಪ್ಪ ಅಕ್ಷರಗಳಲ್ಲಿ ಕರ್ನಾಟಕದ ವಿದ್ಯುತ್ ದರ, ಅದರ ಅಭಾವ ಮುಂತಾದ ವಿಷಯಗಳ ಕುರಿತು ಸುದ್ದಿಗಳು ಹರಿದಾಡಿದ್ದವು. ಸರ್ಕಾರಕ್ಕೆ ರೈತರಿಗೆ ಕೊಡಲು ವಿದ್ಯುತ್ ಇಲ್ಲ. ಏನಾದರೂ ಕೇಳಿದರೆ ವಿದ್ಯುತ್ನ ಅಭಾವವಿದೆ ಅಂತ ಹೇಳಿಕೆ ಕೊಡುತ್ತಾರೆ. ರಾಜ್ಯಕ್ಕೆ ಬೇಕಿರುವ ವಿದ್ಯುತ್ನಲ್ಲಿ ಇನ್ನೂ 1700 ಮೆಗಾವ್ಯಾಟ್ನ ಕೊರತೆಯಿದೆಯಂತೆ. ಆದರೆ ಬೆಂಗಳೂರು ಮಹಾನಗರದ ರಸ್ತೆಗಳಲ್ಲಿ ಸುಖಾ ಸುಮ್ಮನೆ ಬೆಳಿಗ್ಗೆ 8 ಗಂಟೆಯವರೆಗೂ ವಿದ್ಯುತ್ ಅನ್ನು ಪೋಲು ಮಾಡುವುದಕ್ಕೆ ಅವರ ಬಳಿ ವಿದ್ಯುತ್ ಇದೆ. ಇದು ಭಾನುವಾರ(26-01-2014), ನಮ್ಮ ಗಣರಾಜ್ಯೋತ್ಸವದಂದು ಕಡಿದಾಳ್ ಮಂಜಪ್ಪ ರಸ್ತೆಯಿಂದ ರಿಚ್ಮಂಡ್ ವೃತ್ತಕ್ಕೆ ಹೋಗುವ ರಸ್ತೆಯಲ್ಲಿ ನಾನು ಕಂಡ ದೃಶ್ಯ. ನಾನು ನಡೆದುಕೊಂಡು ಹೋದ ರಸ್ತೆಯಲ್ಲಿ ಇದ್ದ ಸುಮಾರು 20ಕ್ಕೂ ಹೆಚ್ಚು ಬೀದಿ ದೀಪಗಳು ಬೆಳಗಿನ 7.45ರ ಹೊತ್ತಿಗೆ ಇನ್ನೂ ಉರಿಯುತ್ತಲೇ ಇದ್ದವು. ಆದರೆ ಅಷ್ಟರಲ್ಲಾಗಲೇ ಆಗಸದಲ್ಲಿ ಪ್ರಖರವಾಗಿ ಬೆಳಗುತ್ತಿದ್ದ ಸೂರ್ಯ ಮಾತ್ರ ನಮ್ಮ ಪಾಲಿಕೆಯವರ ಬೇಜವಾಬ್ದಾರಿಯನ್ನು ಕಂಡು ಬಾಯ್ತೆರೆದು ನಗುತ್ತಿರುವಂತೆ ಇಷ್ಟಗಲ ಮುಖ ಮಾಡಿದ್ದ. ಇದು ಒಂದೆಡೆಯಾದರೆ, ಇನ್ನು ಹಣ ಪಾವತಿಸುವ ರೈತರಿಗೆ ಮಾತ್ರ ದಿನದ 24 ಗಂಟೆಯ ವಿದ್ಯುತ್ ಸಿಗಲಿದೆ ಎಂದು ಮೊನ್ನೆ ಇಂಧನ ಸಚಿವರು ಹೇಳಿಕೆ ನೀಡಿದ್ದರು. ಅಲ್ಲದೆ ಎಸ್ಕಾಂಗೆ ಇನ್ನೂ 10,900 ಕೋಟಿ ರುಪಾಯಿ ಬಾಕಿ ಬೇರೆಯಿದೆಯಂತೆ ನಮ್ಮ ಸರ್ಕಾರ. ಸರಿ ಇದರ ಹೊರೆ ಯಾರ ಮೇಲೆ ಬೀಳಲಿದೆ? ನಮ್ಮ ಮೇಲೆಯೇ ಅಲ್ಲವೆ? ಸಚಿವರೇ ಇನ್ನಾದರೂ ಎಚ್ಚೆತ್ತುಕೊಳ್ಳಿ. ಸುಮ್ಮನೆ ವಿದ್ಯುತ್ ಅಭಾವವಿದೆ ಅಂತ ಹೇಳಿಕೆ ಕೊಡುವ ಬದಲಾಗಿ ಪೋಲಾಗುತ್ತಿರುವ ವಿದ್ಯುತ್ ಅನ್ನು ಉಳಿಸುವುದರ ಕಡೆಗೆ ಗಮನ ಹರಿಸಿದರೆ ಇರುವ ತೊಂದರೆಗಳಲ್ಲಿ ಸ್ವಲ್ಪವಾದರೂ ನಿವಾರಣೆಯಾಗುವ ಸಾಧ್ಯತೆಯಿದೆಯೇನೋ...
-ನವೀನ್ ಕುಮಾರ್ .ಕೆ., ಬೆಂಗಳೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments