ಈ ಹಿಂದಿನ ಕಂಪ್ಯೂಟರ್ ಯೋಜನೆಗಳ ಕತೆ ಗೊತ್ತಲ್ಲ!
ರಾಜ್ಯ ಸರ್ಕಾರವು ರಾಜ್ಯಪಾಲರ ಭಾಷಣದಲ್ಲಿ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಕೊಡಲು ತೀರ್ಮಾನಿಸಿರುವುದು ಆತುರದ ಹಾಗೂ ಅವೈಜ್ಞಾನಿಕವಾಗಿದೆ. ಈ ಹಿಂದೆ ಇದೇ ಕಾಂಗ್ರೆಸ್ ಪಕ್ಷದ ಸರ್ಕಾರ, ಸರ್ಕಾರಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ನೀಡಲು ಜಾರಿಗೆ ತಂದಿದ್ದ 'ಮಾಹಿತಿಸಿಂಧು'ವನ್ನು ಸರ್ಕಾರ ಸಮರ್ಪಕವಾಗಿ ಜಾರಿಗೆ ತರದೆ ಬೇಜವಾಬ್ದಾರಿಯಿಂದ ಕೋಟ್ಯಂತರ ಬೆಲೆ ಬಾಳುವ ಕಂಪ್ಯೂಟರ್ಗಳು ಧೂಳು ಹಿಡಿದು ಮಕಾಡೆ ಮಲಗಿ 3 ವರ್ಷಗಳೇ ಗತಿಸಿದವು. ಕೇಂದ್ರ- ರಾಜ್ಯ ಸರಕಾರದ ಸಹಕಾರದ ಐ.ಸಿ.ಟಿ ಫೇಸ್-1 ಮತ್ತು ಫೇಸ್-2 ಯೋಜನೆಯಲ್ಲಿ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಉಚಿತ ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದರು. ಇಲ್ಲೂ ಕೂಡ ಉಚಿತ ಕಂಪ್ಯೂಟರ್ ಶಿಕ್ಷಣ ಸ್ಥಗಿತಗೊಂಡು ಕೋಟ್ಯಂತರ ಬೆಲೆ ಬಾಳುವ ಕಂಪ್ಯೂಟರ್ಗಳು ಕೆಲಸ ಇಲ್ಲದೆ ಮಕಾಡೆ ಮಲಗಿ ವರ್ಷಗಳೇ ಕಳೆದಿವೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕೋಟ್ಯಂತರ ಬೆಲೆ ಬಾಳುವ ಕಂಪ್ಯೂಟರ್ಗಳು ಇದ್ದರೂ ಅವುಗಳನ್ನು ಸರಿಯಾಗಿ ಬಳಸಿಕೊಳ್ಳದೆ ಈಗ ಉಚಿತ ಲ್ಯಾಪ್ಟಾಪ್ ಕೊಡಲು ಮುಂದಾಗಿರುವುದು ಬೇಜವಾಬ್ದಾರಿಯಾಗಿದೆ. ಶಿಕ್ಷಣ ಸಚಿವರು ಉಚಿತ ಲ್ಯಾಪ್ಟಾಪ್ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಶಾಲಾ-ಕಾಲೇಜುಗಳಲ್ಲಿ ಉಚಿತ ಕಂಪ್ಯೂಟರ್ ಶಿಕ್ಷಣ ನೀಡಲು ಜಾರಿಯಲ್ಲಿದ್ದ ಯೋಜನೆಗಳು ಸ್ಥಗಿತಗೊಂಡು ಎಷ್ಟೋ ವರ್ಷಗಳೇ ಕಳೆದರೂ ಅದನ್ನು ಮತ್ತೆ ಪ್ರಾರಂಭಿಸುವ ಹಾಗೂ ಸುಧಾರಿಸುವ ಇಚ್ಛಾಶಕ್ತಿ ತೋರದೆ ಇರುವವರು ಉಚಿತ ಲ್ಯಾಪ್ಟಾಪ್ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವರೇ? ಆದ್ದರಿಂದ ಈ ಉಚಿತ ಲ್ಯಾಪ್ಟಾಪ್ ಕೊಡುವ ಯೋಜನೆಯನ್ನು ಕೈಬಿಟ್ಟು ಈಗಾಗಲೇ ಶಾಲಾ-ಕಾಲೇಜುಗಳಲ್ಲಿ ಕಂಪ್ಯೂಟರ್ಗಳು ಇದ್ದು ಸ್ವಲ್ಪ ಹಣ ಖರ್ಚು ಮಾಡಿ ಅವುಗಳನ್ನೆ ಹೆಚ್ಚು ಕಾಯಕಲ್ಪಗೊಳಿಸಿದರೆ ಎಲ್ಲಾ ಪ್ರೌಢ ಶಾಲೆ ಹಾಗೂ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಸಿಗುತ್ತದೆ.
-ಎಸ್. ಸಯದ್ ಏಜಾಜ್, ಶಿಕಾರಿಪುರ
ಈ ಅಸಂಬದ್ಧ ಬೇಕಿತ್ತೇ?
ಜ.26ರ ಬೆಳಿಗ್ಗೆ ಹಿರಿಯೂರಿನ ನೆಹರು ಮೈದಾನದಲ್ಲಿ ಗಣರಾಜ್ಯೋತ್ಸವ ಸಮಾರಂಭವನ್ನು ವೀಕ್ಷಿಸಲು ತೆರಳಿದ್ದೆ. ಗಣ್ಯರ ಭಾಷಣದ ನಂತರ ಎಂದಿನಂತೆ ಶಾಲಾ ಮಕ್ಕಳಿಂದ ದೇಶಭಕ್ತಿ ಕುರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು. ಮಕ್ಕಳು ಉತ್ಸಾಹದಿಂದ ದೇಶಭಕ್ತಿ ಗೀತೆಗಳಿಗೆ ಜೀವ ತುಂಬಿದರು. ಆದರೆ ಕಾರ್ಯಕ್ರಮದ ಕಡೆಯದಾಗಿ ಹಿರಿಯೂರಿನ ಖಾಸಗಿ ಶಾಲೆಯಾದ ವಾಗ್ದೇವಿ ವಿದ್ಯಾಸಂಸ್ಥೆಯ ಮಕ್ಕಳು 'ಗುರು ಶಿಷ್ಯರು' ಚಿತ್ರದ ದೊಡ್ಡವರೆಲ್ಲಾ ಜಾಣರಲ್ಲಾ, ಚಿಕ್ಕವರೆಲ್ಲಾ ಕೋಣರಲ್ಲಾ ಎಂಬ ಗೀತೆಗೆ ಕುಣಿಯತೊಡಗಿದಾಗ ಇಡೀ ಗಣರಾಜ್ಯೋತ್ಸವದ ಉದ್ದೇಶವೇ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಯಿತು. ಪ್ರತಿ ವರ್ಷ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವಗಳನ್ನು ಬಿಟ್ಟರೆ ನಾವು ನಮ್ಮ ದೇಶವನ್ನು ನೆನಪಿಸಿಕೊಳ್ಳುವುದೇ ಅಪರೂಪ. ಇಂತಹ ದಿನಗಳಲ್ಲಾದರೂ ಅರ್ಥಪೂರ್ಣವಾಗಿ ಆಚರಿಸಿದ್ದರೆ ಅದಕ್ಕೊಂದು ಮಹತ್ವ ಇರುತ್ತಿತ್ತು. ಅದು ಬಿಟ್ಟು ಇಂತಹ ದಿನದಲ್ಲಿ 'ದೊಡ್ಡವರೆಲ್ಲಾ ಜಾಣರಲ್ಲಾ, ಚಿಕ್ಕವರೆಲ್ಲಾ ಕೋಣರಲ್ಲಾ' ಹಾಡಿಗೆ ಶಿಕ್ಷಕರುಗಳು ಮಕ್ಕಳಿಂದ ನೃತ್ಯ ಮಾಡಿಸುವ ಅವಶ್ಯಕತೆ ಇತ್ತೇ?
-ಎಲ್.ವಿ. ಕುಮಾರಸ್ವಾಮಿ, ಹಿರಿಯೂರು
ಅಥಣಿಗೆ ಬೇಕು ರಿಂಗ್ ರೋಡ್, ಬೈಪಾಸ್ ರಸ್ತೆ
ಬೆಳಗಾವಿಯ ಅಥಣಿ ತಾಲೂಕು ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. 2011ರ ಜನಗಣತಿಯ ಪ್ರಕಾರ ಅಥಣಿ ನಗರದ ಜನಸಂಖ್ಯೆ ಐವತ್ತು ಸಾವಿರ ದಾಟಿದೆ. ಅದೆ ರೀತಿ ಅಥಣಿ ತಾಲೂಕು ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು ಜನಸಂಖ್ಯೆ ಐದು ಲಕ್ಷವನ್ನು ಮೀರಿದೆ. ತಾಲೂಕಿನಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಿರುವುದರಿಂದ ನಗರದಲ್ಲಿ ದಿನವೂ ಟ್ರಾಫಿಕ್ ಕಿರಿಕಿರಿ ಹೆಚ್ಚಾಗಿದೆ. ಈ ಸಮಸ್ಯೆಯನ್ನು ತಾಳಲಾರದೆ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ ಮತ್ತು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.
ಕಿಕ್ಕಿರಿದ ಟ್ರಾಪಿಕ್ ಸಮಸ್ಯೆಯಿಂದಾಗಿ ಅಪಘಾತಗಳು ನಗರದಲ್ಲಿ ಸಾಮಾನ್ಯವಾಗಿವೆ. ಆದ್ದರಿಂದ ಅಥಣಿಗೆ ಬೈಪಾಸ್ ರಸ್ತೆ ಆಗಬೇಕೆಂಬುದು ಜನರ ಆಗ್ರಹ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಸರ್ಕಾರಕ್ಕೆ ಈ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ಜನನಾಯಕರು ಈ ಕಡೆ ಗಮನಹರಿಸಬೇಕೆಂಬುದು ಜನರ ಅಂಬೋಣ.
ಬಸವರಾಜ ಕುಳಲಿ, ಅಥಣಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com