ಹೊಸ್ತಿಲು ದಾಟಿದ ರಾಹುಲ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಟಿವಿ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಮುಂದಾಳು ಎಂದೇ ಬಿಂಬಿತವಾಗಿರುವ ರಾಹುಲ್ ಗಾಂಧಿ ತಮಗೆದುರಾದ ಪ್ರಶ್ನೆಗಳಿಗೆ ಹೇಗೆ ಉತ್ತರಿಸುತ್ತಾರೆ ಎಂಬ ಕೌತುಕ ಎಲ್ಲರಲ್ಲೂ ಸಹಜವಾಗಿತ್ತು. ಅಲ್ಲದೇ, ಆಗೀಗ ಟಿವಿ ಬೈಟ್ಸ್ಗಳಿಗೆ ಸಿಕ್ಕಿದರೂ ಮುಖಾಮುಖಿ ಸಂದರ್ಶನಗಳಿಗೆ ಒಪ್ಪದೆ, ತೆರೆಮರೆಯಲ್ಲೇ ಎಲ್ಲವನ್ನೂ ಸಂಭಾಳಿಸಿಕೊಂಡಿರುವವರು ನೆಹರು ಪರಿವಾರದವರು. ಜಯ ದೊರೆತಾಗ ಮಾತ್ರ ಪ್ರಶಂಸೆ ಸುರಿಸಿ ಇವರನ್ನು ಮಾಧ್ಯಮದ ಎದುರು ನಿಲ್ಲಿಸುವ, ಟೀಕೆಗಳನ್ನೆಲ್ಲ ತಮ್ಮ ಮೇಲೆ ಸುರಿದುಕೊಳ್ಳುವ ರಕ್ಷಣಾತ್ಮಕ ಗೋಡೆಯ ಕೆಲಸವನ್ನು ಕಾಂಗ್ರೆಸ್ಸಿಗರು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂಬ ಟೀಕೆಯನ್ನು ವಿರೋಧಿಗಳು ಪ್ರಮುಖವಾಗಿ ಮಾಡುತ್ತಿದ್ದರು. ಅದು ನಿಜವೂ ಹೌದು. ಇಂಥ ಗೋಡೆಯನ್ನು ದಾಟಿದ ರಾಹುಲ್, ಸೋಮವಾರ ರಾತ್ರಿ ಟೈಮ್ಸ್ನೌ ಸುದ್ದಿವಾಹಿನಿಯಲ್ಲಿ ಕಾಣಿಸಿಕೊಂಡರು.
ಇದಕ್ಕೂ ಮುಂಚೆ ಕಾಂಗ್ರೆಸ್ಗೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಹಿನ್ನಡೆ ಆಗಿದ್ದಾಗಲೂ ಸೋನಿಯಾ ಗಾಂಧಿ ಅವರ ಜತೆಗೂಡಿ ಕೆಲವೇ ನಿಮಿಷಗಳಮಟ್ಟಿಗೆ ಅವರು ಮಾಧ್ಯಮವನ್ನು ಎದುರಿಸಿದ್ದರು.ಅದೇನೂ ವಿಸ್ತೃತ ಪ್ರಶ್ನೋತ್ತರ ಅವಧಿ ಆಗಿರಲಿಲ್ಲವಾದರೂ ಕೊನೆಪಕ್ಷ ಸೋಲನ್ನು ಎದುರಿಸುವ ಧೈರ್ಯವನ್ನು ತೋರಿದ್ದು ವಿಶೇಷವೇ ಆಗಿತ್ತು. ಏಕೆಂದರೆ ಕಾಂಗ್ರೆಸ್ ಸಂಸ್ಕೃತಿಯಲ್ಲಿ ಅದುವರೆಗೆ ಗೆದ್ದು ಬೀಗಿದಾಗ ಮಾತ್ರ ಶ್ರೇಯಸ್ಸನ್ನು ಕುಟುಂಬಕ್ಕೂ, ಸೋತಾಗ ಅದನ್ನು ವಿವರಿಸುವ ಹೊಣೆಯನ್ನು ವಕ್ತಾರರೆನಿಸಿಕೊಂಡವರಿಗೂ ಬಿಡಲಾಗುತ್ತಿದ್ದದ್ದು ಎಲ್ಲರಿಗೂ ತಿಳಿದ ಸಂಗತಿ. ಈ ನಿಟ್ಟಿನಲ್ಲಿ ರಾಹುಲ್ ಅವತ್ತು ಸೋಲಿನ ಗಳಿಗೆಯಲ್ಲಿ ಮಾಧ್ಯಮದೆದುರು ಬಂದು, ತಾವು ಪಕ್ಷವನ್ನು ಊಹಿಸಲಾಗದಂತೆ ಬದಲಾಯಿಸುವುದಾಗಿ ಹೇಳಿದಾಗ ತಕ್ಕಮಟ್ಟಿಗಿನ ಗಾಂಭೀರ್ಯ ಬಂದಿತ್ತು. ನಂತರದ ದಿನಗಳಲ್ಲಿ ಕಾಂಗ್ರೆಸ್ ತನ್ನ ಹೆಚ್ಚುಗಾರಿಕೆ ಹೇಳಿಕೊಳ್ಳುವ ಜಾಹೀರಾತನ್ನು ಪ್ರಕಟಿಸಿದಾಗಲೂ ಅದರಲ್ಲಿ ರಾಹುಲ್ ಗಾಂಧಿಯವರನ್ನೇ ಪ್ರಧಾನವಾಗಿ ಚಿತ್ರಿಸಿದ್ದಲ್ಲದೇ ಮನಮೋಹನ ಸಿಂಗ್, ಸೋನಿಯಾ ಗಾಂಧಿ ಅವರ ಚಿತ್ರವನ್ನೂ ಪ್ರಕಟಿಸಿರಲಿಲ್ಲ. ಇವೆಲ್ಲವೂ ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರನ್ನು ಎದುರಿಸುವುದಕ್ಕೆ ನಿಧಾನವಾಗಿಯಾದರೂ ದೃಢ ಹೆಜ್ಜೆ ಇಡುತ್ತಿದ್ದಾರೆ ಎಂಬ ಆಶಾಭಾವವನ್ನು ಪಕ್ಷದ ಬೆಂಬಲಿಗರಲ್ಲಿ ತುಂಬುತ್ತಾದ್ದರಿಂದ ಅವರು ನೀಡಿದ ಮೊದಲ ಟಿವಿ ಸಂದರ್ಶನ ಪ್ರಾಮುಖ್ಯ ಪಡೆದುಕೊಂಡಿದ್ದು.
ತಾವು ಇನ್ನಷ್ಟು ದೃಢತೆ ಮೆರೆಯಬೇಕಿದ್ದ ಈ ಹಂತದಲ್ಲಿ ರಾಹುಲ್ ಪ್ರಶ್ನೆಗಳನ್ನೇನೋ ತೆಗೆದುಕೊಂಡರು. ಆದರೆ ಅವಕ್ಕೆ ಉತ್ತರಿಸುವ ಗೋಜಿಗೆ ಹೋಗದೆ ತಮ್ಮ ಮಾತುಗಳನ್ನಷ್ಟೇ ಪುನರುಚ್ಚರಿಸಿದಂತಿತ್ತು. ಒಂದು ತಾಸು ಇಪ್ಪತ್ತು ನಿಮಿಷ ನಡೆದ ಸಂದರ್ಶನದಲ್ಲಿ ರಾಹುಲ್ ಗಾಂಧಿ ತಮಗೆ ಕೇಳಿದ ಎಲ್ಲ ಪ್ರಶ್ನೆಗಳಿಗೆ 'ಸ್ತ್ರೀ ಸಬಲೀಕರಣ, ಮಾಹಿತಿ ಹಕ್ಕು, ಪಾರದರ್ಶಕತೆ' ಎಂಬ ಪದಪುಂಜಗಳಲ್ಲೇ ಉತ್ತರಿಸುವುದಕ್ಕೆ ಹೋದರು. ಪರಿಣಾಮವಾಗಿ ಸಂದರ್ಶಕ ಅರ್ನಬ್ ಗೋಸ್ವಾಮಿ ಅವರು ತಾವು ಕೇಳಿದ ಪ್ರಶ್ನೆಗಳನ್ನು ಪದೇ ಪದೆ ನೆನಪಿಸಬೇಕಾಗಿ ಬಂತು. ರಾಹುಲ್ ಗಾಂಧಿ ಅವರಿಗೆ ನರೇಂದ್ರ ಮೋದಿ ಅವರ ಮೇಲೆ ಅಭಿಪ್ರಾಯ ವ್ಯಕ್ತಪಡಿಸುವುದು ಬೇಡದ ವಿಷಯವಾಗಿದ್ದರೆ ತಾವು ಆ ವಿಚಾರ ಮಾತನಾಡಲು ಇಷ್ಟಪಡುವುದಿಲ್ಲ ಎಂದು ನೇರವಾಗಿ ಹೇಳಿ ವಿಷಯಾಧಾರಿತ ಪ್ರಶ್ನೆಗಳತ್ತ ಮಾತ್ರ ಗಮನಹರಿಸೋಣ ಎನ್ನಬಹುದಿತ್ತು. ಆದರೆ ಅವರಲ್ಲಿ ಕಂಡ ದ್ವಂದ್ವ ಏನೆಂದರೆ ಮೋದಿ ದೂಷಣೆಯಿಂದ ಅವರು ಹಿಂದೆ ಸರಿಯಲೊಲ್ಲರು. ಹೀಗಾಗಿಯೇ ಗುಜರಾತ್ ಗಲಭೆ ಸರ್ಕಾರಿ ಪ್ರಾಯೋಜಿತ, ಆದರೆ ಸಿಖ್ ವಿರೋಧಿ ದಂಗೆ ದುರದೃಷ್ಟವಷ್ಟೇ ಎಂಬ ವಾದ ಮಂಡಿಸಿದರು. ಆ ಪ್ರಕರಣದಲ್ಲಿ ಕಾಂಗ್ರೆಸ್ಸಿಗರ ವಿರುದ್ಧ ಆರೋಪ ಪಟ್ಟಿ ಇದೆಯಲ್ಲ ಎಂಬ ಪ್ರಶ್ನೆಗೆ, 'ಅದು ಕಾನೂನು ಪ್ರಕ್ರಿಯೆ' ಎಂಬ ನಿಲವು. ಇದೇ ಕಾನೂನು ಪ್ರಕ್ರಿಯೆ ಮೋದಿಯವರಿಗೆ ಕ್ಲೀನ್ಚಿಟ್ ಕೊಟ್ಟಿದೆಯಲ್ಲ ಎಂಬುದಕ್ಕೆ ಸಮರ್ಥ ಪ್ರತಿಕ್ರಿಯೆಯನ್ನೇನೂ ರಾಹುಲ್ ಕೊಡಲಿಲ್ಲ.
ಮಾಹಿತಿ ಹಕ್ಕು ಕಾಯ್ದೆ ತಮ್ಮ ಕೊಡುಗೆ ಎಂದು ರಾಹುಲ್ ಪದೇ ಪದೆ ಹೇಳಿಕೊಂಡರು. ಹಾಗಾದರೆ ಕಾಂಗ್ರೆಸ್ ಪಕ್ಷವನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ತಂದು ಮಾದರಿ ಆಗಬಾರದೇಕೆ ಎಂಬ ಪ್ರಶ್ನೆ ಎದುರಾದಾಗ, 'ಮಾಧ್ಯಮಕ್ಕೆ, ನ್ಯಾಯಾಂಗಕ್ಕೆ ಇಲ್ಲದ ಮಾಹಿತಿ ಹಕ್ಕು ಇಲ್ಲಿ ಮಾತ್ರ ಬಂದರೆ ಸಮತೋಲನ ತಪ್ಪುತ್ತದೆ' ಎಂಬ ಸಮರ್ಥನೆ ನೀಡಿದರು. ಮಾಧ್ಯಮ ದೇಶವನ್ನು ನಡೆಸುವ ಸಂಸ್ಥೆ ಅಲ್ಲವಾದ್ದರಿಂದ ಹೋಲಿಕೆ ಸಾಧುವಲ್ಲ ಎಂದು ಸಂದರ್ಶಕರು ನೆನಪಿಸಬೇಕಾಯಿತು.
ಲೋಕ್ಪಾಲ್ ಮಸೂದೆ ಪಾಸಾಗುವುದಕ್ಕೆ ಪ್ರಯತ್ನಿಸಿದ್ದು ತಾವು, ಮಾಹಿತಿ ಹಕ್ಕು ತರುವುದರಲ್ಲಿ ತಾನೇ ಮುಂಚೂಣಿಯಲ್ಲಿದ್ದೆ ಎಂದೆಲ್ಲ ಶ್ರೇಯಸ್ಸುಗಳನ್ನು ಅಪೇಕ್ಷಿಸಿದ ರಾಹುಲ್, ಕಠಿಣ ಪ್ರಶ್ನೆಗಳು ಎದುರಾದಾಗ ನುಣುಚಿಕೊಳ್ಳುವ ಮಾರ್ಗ ನೋಡಿದರು. ಭ್ರಷ್ಟಾಚಾರದಲ್ಲಿ ಶಿಕ್ಷೆಗೆ ಒಳಗಾಗಿರುವ ಲಾಲು ಪ್ರಸಾದ್ ಅವರೊಂದಿಗೆ ಬಿಹಾರದಲ್ಲಿ ಮೈತ್ರಿ ಏಕೆ ಎಂದು ಕೇಳಿದಾಗ ರಾಹುಲ್, 'ಅದು ಪಕ್ಷದ ಹಿರಿಯ ನಾಯಕರು ಕೈಗೊಂಡ ನಿರ್ಧಾರ' ಎಂದುಬಿಟ್ಟರು. ನೀವೇ ಬಾಸ್ ಸ್ಥಾನದಲ್ಲಿದ್ದೀರಲ್ಲ ಎಂದು ಸಂದರ್ಶಕರು ನೆನಪಿಸಿದಾಗ, 'ಕಾಂಗ್ರೆಸ್ನ ಮೈತ್ರಿ ವ್ಯಕ್ತಿಯೊಂದಿಗಲ್ಲ, ಪಕ್ಷದೊಂದಿಗೆ' ಎಂದರು.
ಇವೇನೇ ಇದ್ದರೂ, ರಾಹುಲ್ ಗಾಂಧಿ ಹೀಗೆ ಯೋಚಿಸಿದ್ದಾರೆ ಎಂದು ವಕ್ತಾರರ ಬಾಯಲ್ಲಿ ಕೇಳಬೇಕಿದ್ದ ಹಾಗೂ ಆ ವಕ್ತಾರರಲ್ಲೇ ಭಿನ್ನಧ್ವನಿಯ ಹೇಳಿಕೆಗಳು ಹೊರಟು ಗೊಂದಲ ಮೂಡಿಸುತ್ತಿದ್ದ ಕಾಲಘಟ್ಟದ ಸಮಾಪ್ತಿಗೆ ರಾಹುಲ್ ಮುಂದಾಗಿರುವುದು ಪ್ರಶಂಸನೀಯ. ಇದೀಗ ದೇಶವು ನೇರ ಅವರ ಮಾತುಗಳ ಮೂಲಕವೇ ಯೋಗ್ಯತೆ ನಿರ್ಧರಿಸಬಹುದು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲಾಗದಿದ್ದರೆ ಪಕ್ಷದ ಉಪಾಧ್ಯಕ್ಷನಾಗಿ ಆ ಹೊಣೆಯನ್ನು ತಾವೇ ಹೊರುವುದಕ್ಕೆ ಸಿದ್ಧ ಎಂದಿದ್ದೂ ಹೊಣೆಗಾರಿಕೆ ಹೊರುವುದಕ್ಕೆ ಸಿದ್ಧವಾಗಿರುವ ನಾಯಕತ್ವದ ಉತ್ತಮ ಗುಣವೇ ಸರಿ.