ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ಸಾಮಗ ದತ್ತಾತ್ರಿ ಅವರು ಬರೆಯುತ್ತಾರೆ- 'ಜ.22ರ ಪತ್ರಿಕೆಯ ಪುಟ 8ರಲ್ಲಿ (ಬೆಂಗಳೂರು ಆವೃತ್ತಿ) ...
ಬೆಂಗಳೂರಿನಿಂದ ಸಾಮಗ ದತ್ತಾತ್ರಿ ಅವರು ಬರೆಯುತ್ತಾರೆ- 'ಜ.22ರ ಪತ್ರಿಕೆಯ ಪುಟ 8ರಲ್ಲಿ (ಬೆಂಗಳೂರು ಆವೃತ್ತಿ) 25 ಕುರಿಗಳು ರೈಲಿಗೆ ಸಿಕ್ಕಿ ಅಸುನೀಗಿದ ವರದಿ ಇದೆ. ಈ ವರದಿಯನ್ನು ಸುದ್ದಿಯ ವಿಷಯಕ್ಕೆ ವ್ಯತ್ಯಯವಿಲ್ಲದಂತೆ ಹ್ರಸ್ವಗೊಳಿಸಲು ಸಾಧ್ಯವಿತ್ತು. ಇಲ್ಲಿ ಆಗಿರುವುದು ಪುನರಾವರ್ತನೆಯ ತಪ್ಪು. ಎರಡನೆಯ ಪ್ಯಾರಾದ ಮೊದಲ ಎರಡು ವಾಕ್ಯಗಳನ್ನು ಬಿಡಬಹುದಿತ್ತು.'
'ಅಂದರೆ ಈ ಪ್ಯಾರಾ 'ಅಮಿಟಾಗನಹಳ್ಳಿಯಲ್ಲಿ ಮಂಗಳವಾರ... ತಮ್ಮ ನೋವನ್ನು ತೋಡಿಕೊಂಡಿದ್ದಾರೆ' ಎಂದಿಷ್ಟೇ ಇದ್ದರೆ ಸಾಕಾಗುತ್ತಿತ್ತು. ಅಲ್ಲದೇ ಈ ಭಾಗದಲ್ಲಿ ಮೂರನೇ ಕಾಲಂನ ನಾಲ್ಕನೆಯ ಸಾಲಿನಲ್ಲಿ ಬಂದಿರುವ 'ಇನ್ನೂ ಹಲವು ಕುರಿಗಳು' ಈ ಪದಗಳು ಅನವಶ್ಯಕ.'
'ಪುಟ 10ರಲ್ಲಿ 'ರಾಜಕಾರಣಿ ರಾಜ್ಯಪಾಲರಾದರಂತೂ ಹೆಚ್ಚು ಲಂಚ ತಗೋತಾರೆ' ಶೀರ್ಷಿಕೆಯಡಿಯಲ್ಲಿ ಬಂದಿರುವ ವರದಿ. ಇದರಲ್ಲೂ ಕೂಡ ಮುಂದಿನ ಕಾಲಂನ ಎರಡನೆಯ ಪ್ಯಾರಾದ ಎರಡನೇ ಸಾಲಿನಲ್ಲಿ 'ಬಸವಣ್ಣ ಮಂತ್ರಿಯಾಗಿ ಎಂಬಲ್ಲಿಂದ ಎರಡನೇ ಕಾಲಂನ ಮೊದಲನೆ ಸಾಲಿನ 'ಲಂಚಕ್ಕೆ ತಲೆಯಾಗ್ತಾರೆ' ಎನ್ನುವವರೆಗಿನ ಭಾಗವು ಮೊದಲನೆಯ ಪ್ಯಾರಾದಲ್ಲೂ ಯಥಾವತ್ತಾಗಿ ಬಂದಿದೆ. ಇದು ಪುನರಾವರ್ತನೆಯ ದೋಷ. ಇಡೀ 2ನೇ ಕಾಲಂನ ಕೊನೆಯ ಸಾಲಿನಲ್ಲಿರುವ 'ಎರಡು ಸಾಗಿದೆ' ಗಳಲ್ಲಿ ಒಂದು ಸಾಗಿದೆ ಸಾಕಾಗಿತ್ತು. ಮೂರನೇ ಕಾಲಂನ ಮೂರನೆಯ ಸಾಲಿನಲ್ಲಿ 'ವರಟುತನ' ಎಂಬ ಪ್ರಯೋಗವಿದೆ. ಇದು 'ಒರಟುತನ' ಎಂದಿರಬೇಕಿತ್ತು' ಎಂದಿದ್ದಾರೆ.
ಬೆಳಗಾವಿಯಿಂದ ಜಗದೀಶ ಎಂ. ಸಂಗಣ್ಣನವರ ಅವರು ಬರೆಯುತ್ತಾರೆ- 'ಜ.20ರ ಬೆಳಗಾವಿ ಆವೃತ್ತಿಯಲ್ಲಿ 'ಇಂಥ ಉತ್ಸವಗಳು ಯಾರಿಗಾಗಿ?' ಎಂಬ ಲೇಖನದಲ್ಲಿ ಪದಗಳು ಸರಿಯಾಗಿವೆ. ಆದರೆ ಒಂದು ಕಡೆ ವಾಕ್ಯ ತಪ್ಪಾಗಿದೆ. ತಪ್ಪಾದ ವಾಕ್ಯ ಹೀಗಿದೆ, 'ಅಖಿಲ ಭಾರತ ಸಾಹಿತ್ಯ ಸಮ್ಮೇಳನದಂತಹ ನಾಡಿನ ಅಭಿಮಾನದ ಕಾರ್ಯಕ್ರಮಕ್ಕೆ ಕೋಟಿ ಎರಡು ಕೊಡಲು ಮೀನಮೇಷ ಮಾಡುವ ಸರ್ಕಾರ' ಎಂದು ಪ್ರಕಟಗೊಂಡಿದೆ. ಇದರ ಬದಲಾಗಿ ಕಾರ್ಯಕ್ರಮಕ್ಕೆ ಎರಡು ಕೋಟಿ ಕೊಡಲು ಮೀನಮೇಷ ಎಂದಾಗಬೇಕಿತ್ತು ಅಲ್ವೇ?' ಎಂದಿದ್ದಾರೆ.
ಅಣ್ಣೂರಿನ ಭಾರತೀ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ನಂದಿನಿ ಎಸ್. ಅವರು ಬರೆಯುತ್ತಾರೆ- 'ಜ.23 ಗುರುವಾರದಂದು ಪ್ರಕಟವಾದ ನ್ಯೂಜಿಲೆಂಡ್ ಮತ್ತು ಭಾರತದ ನಡುವಿನ 2ನೇ ಏಕದಿನ ಪಂದ್ಯದ ಫಲಿತಾಂಶ ಗೊಂದಲಕ್ಕೀಡು ಮಾಡಿತು. ಪ್ರಕಟವಾದ ಸ್ಕೋರ್ ಪ್ರಕಾರ ನ್ಯೂ. 271 ರನ್, ಭಾರತ 277 ಎಂದಿದೆ. ಇದರ ಪ್ರಕಾರ ಜಯ ಭಾರತದ್ದು. ಆದರೆ ವಾಸ್ತವ ಮತ್ತು ನೀವು ನೀಡಿದ ತಲೆಬರಹ ಪ್ರಕಾರ ಜಯ ನ್ಯೂಜಿಲೆಂಡ್ಗೆ. ಟಿ.ವಿ. ನೋಡದ ಎಷ್ಟೋ ಜನರು ಪತ್ರಿಕೆಯ ಫಲಿತಾಂಶ ನೆಚ್ಚಿಕೊಂಡಿರುತ್ತಾರೆ. ಹೀಗಾದಾಗ ಬೇಸರ ಮೂಡುತ್ತದೆ. ದಯಮಾಡಿ ಕ್ರೀಡಾ ವಿಷಯವನ್ನು ಪ್ರಕಟಿಸುವಾಗ ಎಚ್ಚರ ವಹಿಸುವುದು ಸೂಕ್ತ' ಎಂದಿದ್ದಾರೆ.
ಸುದ್ದಿ ಸರಿಯಾಗಿದೆ. ನ್ಯೂಜಿಲೆಂಡ್ನವರು 42 ಓವರ್ಗಳಲ್ಲಿ 271ರನ್ ಹೊಡೆದಿದ್ದರು. ತಾಂತ್ರಿಕ ಕಾರಣಕ್ಕೆ ಪಂದ್ಯ ನಿಂತಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 297 ರನ್ಗಳ ಗುರಿ ನೀಡಲಾಗಿತ್ತು. ಭಾರತದವರು ಪಂದ್ಯ ಮುಗಿದಾಗ 277 ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು. ಸುದ್ದಿ ಓದಿದರೆ ಬಹುಶಃ ಈ ಗೊಂದಲ ಇರುತ್ತಿರಲಿಲ್ಲ.
ವಿಶ್ವೇಶ್ವರ ಭಟ್