ಭೂ ಸುಧಾರಣೆಯಲ್ಲಿ ಬದಲಾವಣೆ
ರಾಜ್ಯದಲ್ಲಿ ಉದ್ಯಮಗಳ ಸ್ಥಾಪನೆಗೆ ಅಗತ್ಯವಾದ ಭೂಮಿ ದುರ್ಲಭವಾಗಿರುವುದರಿಂದ, ಭೂ ಸುಧಾರಣಾ ಕಾಯಿದೆಯ ಕೆಲವು ...
ರಾಜ್ಯದಲ್ಲಿ ಉದ್ಯಮಗಳ ಸ್ಥಾಪನೆಗೆ ಅಗತ್ಯವಾದ ಭೂಮಿ ದುರ್ಲಭವಾಗಿರುವುದರಿಂದ, ಭೂ ಸುಧಾರಣಾ ಕಾಯಿದೆಯ ಕೆಲವು ವಿಧಿಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸುವುದಕ್ಕೆ ಸರ್ಕಾರದಲ್ಲಿ ಅತ್ಯುನ್ನತ ಮಟ್ಟದಲ್ಲಿ ಚಿಂತನೆ ನಡೆದಿರುವುದು ಗಂಭೀರವಾದ ವಿಷಯ ಕೃಷಿ ಭೂಮಿಯನ್ನು ಉದ್ಯಮಗಳಿಗೆ ಒದಗಿಸಬಾರದೆನ್ನುವ ವಾದ ಇನ್ನೂ ರಾಜಕೀಯ ವಲಯಗಳಲ್ಲಿ ಬಲವಾಗಿದೆ. ಕೃಷಿ ಭೂಮಿಯನ್ನು ಬಿಟ್ಟರೆ, ಬೇರೆ "ಯೋಗ್ಯ" ಭೂಮಿ ಎಲ್ಲೂ ಇಲ್ಲ. ಹೀಗಾಗಿ ಉದ್ಯಮ ವಲಯ ತತ್ತರಿಸಿದೆ. ಉದ್ಯಮವಲಯದಲ್ಲಿ ಹಿನ್ನಡೆಯಾದರೆ, ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಏರುಪೇರು ಖಂಡಿತ. ಆ ಪರಿಸ್ಥಿತಿಯನ್ನು ತಪ್ಪಿಸುವುದೇ ಈಗಿನ ಚಿಂತನೆಯ ಹಿನ್ನೆಲೆ.
ಈಗಿನ ಭೂ ಸುಧಾರಣೆ ಕಾಯಿದೆಯಂತೆ, ಕಂಪನಿಗಳು - ಸಂಸ್ಥೆಗಳು ಭೂ ಮಾಲಿಕತ್ವವನ್ನು ಹೊಂದುವಂತಿಲ್ಲ. ಆದ್ದರಿಂದ ಕಂಪನಿಗಳು ಕೃಷಿ ಭೂಮಿಯನ್ನು ನೇರವಾಗಿ ಕೊಳ್ಳುವಂತಿಲ್ಲ. ಅದೇ ರೀತಿ ಒಂದು ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯವಿರುವ ವ್ಯಕ್ತಿಗಳೂ ಕೃಷಿ ಭೂಮಿ ಕೊಳ್ಳುವಂತಿಲ್ಲ.
ಈ ಎರಡು ವಿಧಿಗಳನ್ನೂ ಕಾಯಿದೆಯಲ್ಲಿ ಅಳವಡಿಸಿದ್ದರ ಮೂಲ ಉದ್ದೇಶ ಕೃಷಿಕರಿಗೆ ಹಣದ ಆಮಿಷ ತೋರಿಸಿ, ಅವರನ್ನು ಶ್ರೀಮಂತರು ವಂಚಿತರನ್ನಾಗಿ ಮಾಡಬಹುದೆನ್ನುವ ಭೀತಿ. ದೇಶದ ಇತರ ಕೆಲವು ರಾಜ್ಯಗಳಲ್ಲಿ ಕೃಷಿಗೆ ನೀರಾವರಿ ಭೂಮಿಯನ್ನು ಒದಗಿಸಬಾರದೆನ್ನುವ ನಿಯಮವಿದೆ. ಅಲ್ಲಿ ಮಳೆ ಆಧಾರಿತ ಭೂಮಿಯನ್ನು ಉದ್ಯಮಿಗಳಿಗೆ ಸರ್ಕಾರ ಒದಗಿಸಬಹುದು.
ಭೂ ಸುಧಾರಣೆಯ ನಿಯಮಗಳ ಬದಲಾವಣೆಯ ಮಾತು ಕೇಳಿದ ಕೂಡಲೇ, ಕೆಲವು ಜನವರ್ಗಗಳ ಆಕ್ರೋಶ ಪ್ರಕಟವಾಗುವುದೂ ಸಹಜವೇ, ಅದು ಒಂದು ರೀತಿಯಲ್ಲಿ ಯುಗಧರ್ಮವೇ. ಇದು ಸೂಕ್ಷ್ಮವಾದ ವಿಚಾರ. ಕೇವಲ ಘೋಷಣೆಗಳಿಂದ ಪರಿಹಾರವಾಗುವಂತಹ ವಿಷಯವಲ್ಲ ಇದು. ಸರ್ಕಾರ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಮುನ್ನ ಈ ವಿಷಯಕ್ಕೆ ಸಂಬಂಧಿಸಿದ ಎಲ್ಲ ಆಸಕ್ತ ವಲಯಗಳ ಪ್ರತಿನಿಧಿಗಳನ್ನೂ ತನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.