ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತೆಲಂಗಾಣ ರಚನೆ ನಿರ್ಣಯ: ಕಾಂಗ್ರೆಸ್ ಬಂಡಾಯದ ಬಾವುಟ

Mainashree
Updated On : 30 Jan 2014, 9:53 am

ಆಂಧ್ರ ಪ್ರದೇಶ ರಾಜ್ಯವನ್ನು ವಿಭಜಿಸಿ, ತೆಲಂಗಾಣ ರಾಜ್ಯದ ರಚನೆ ಕುರಿತಂತೆ ವಿಧಾನ ಸಭೆಯ ಅವಗಾಹನೆ ಹಾಗೂ ಪರಿಶೀಲನೆಗೆ ರಾಷ್ಟ್ರಪತಿ ಕಳುಹಿಸಿದ್ದ ವಿಧೇಯಕವನ್ನು ಸಾರಾಸಗಟು ತಿರಸ್ಕರಿಸಲು ಮುಖ್ಯಮಂತ್ರಿ ಕಿರಣ ಕುಮಾರ ರೆಡ್ಡಿ ಮಂಡಿಸಿದ ನಿರ್ಣಯವನ್ನು ಅಲ್ಲಿನ ವಿಧಾನ ಸಭೆ ಅಂಗೀಕರಿಸಿದ್ದು, ಸ್ಪಷ್ಟವಾಗಿ ಕಾಂಗ್ರೆಸ್ಸಿನಲ್ಲಿ ನಡೆದಿರುವ ಬಂಡಾಯಕ್ಕೆ ಸಾಕ್ಷಿ.
ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಪ್ರಕಟಿಸಿದಾಗಲೇ ಆಂಧ್ರ ಪ್ರದೇಶದ ಕಾಂಗ್ರೆಸ್ ಶಾಸಕರಿಗೆ ಈ ವಿಚಾರದಲ್ಲಿ ವರಿಷ್ಠರು ಎಚ್ಚರಿಕೆ ನೀಡಿದ್ದರೂ ಮುಖ್ಯಮಂತ್ರಿ ಕಿರಣ ಕುಮಾರ ರೆಡ್ಡಿ ಅವರೇ ಮುಂದೆ ನಿಂತು ಕೇಂದ್ರದ ಸೂಚನೆಯನ್ನು ಧಿಕ್ಕರಿಸುವ ನಿರ್ಣಯ ಮಂಡಿಸಿದ್ದು ದೇಶದ ಸಂವೈಧಾನಿಕ ಇತಿಹಾಸದಲ್ಲೇ ಸರಿಸಾಟಿ ಇಲ್ಲದ ಘಟನೆ.
ಸಂವಿಧಾನದಂತೆ, ಆಂಧ್ರ ಪ್ರದೇಶ ವಿಧಾನ ಸಭೆ ಕೇಂದ್ರದ ನಿರ್ಣಯವನ್ನು ತಿರಸ್ಕರಿಸಿದರೂ, ಸಂಸತ್ತು ಮೂಲ ನಿರ್ಣಯವನ್ನು ವಿಲೇವಾರಿ ಮಾಡುವ ಅಧಿಕಾರವನ್ನು ಹೊಂದಿದೆ. ಆದ್ದರಿಂದ ಸಂಸತ್ತಿನಲ್ಲಿ ಆಂಧ್ರ ಪ್ರದೇಶದ ವಿಭಜನೆಯ ನಿರ್ಣಯದ ಚರ್ಚೆಗೆ ಅವಕಾಶ ಇದ್ದೇ ಇದೆ. ಆಂಧ್ರ ಪ್ರದೇಶ ವಿಧಾನ ಸಭೆಯಲ್ಲಿ ಸೀಮಾಂಧ್ರ ಸೀಮೆಯ ಶಾಸಕರದ್ದೇ ಬಹುಮತವಿರುವುದರಿಂದ ಆ ಗುಂಪಿನ ನಿಲವೂ ಅರ್ಥವಾಗುವಂತಹದ್ದೇ. ಈಗ ಕಾಂಗ್ರೆಸ್‌ನ ವರಿಷ್ಠರು ಸಂಕಷ್ಟದಲ್ಲಿದ್ದಾರೆ.
ಲೋಕಸಭೆ ಚುನಾವಣೆಯ ಸಮಯದಲ್ಲಿ ಆಂಧ್ರದಲ್ಲಿ ಕಾಂಗ್ರೆಸ್ ಶಕ್ತಿಹೀನವಾಗುವುದು ಪಕ್ಷಕ್ಕೆ ಒಳ್ಳೆಯದಲ್ಲ. 2009ರಲ್ಲಿ ಆಂಧ್ರ ಪ್ರದೇಶದ ಜನ ಕಾಂಗ್ರೆಸ್ಸಿಗೆ ಪ್ರಚಂಡ ಎನ್ನಬಹುದಾದ ಬೆಂಬಲ ನೀಡಿದ್ದರು. ರಾಜಕೀಯವಾಗಿ ಕೇಂದ್ರದ (ಕಾಂಗ್ರೆಸ್ಸಿನ) ನಿಲವು ತೆಲಂಗಾಣದಲ್ಲಿ ಬೆಂಬಲ ಪಡೆದರೂ, ಇತರ ಕಡೆಗಳಲ್ಲಿ ವಿರೋಧವನ್ನು ಕಟ್ಟಿಕೊಳ್ಳುವುದು ದೊಡ್ಡ ನಷ್ಟದ ವಿಚಾರವೇ.
 ಭಾಷಾವಾರು ರಾಜ್ಯಗಳ ನಿರ್ಮಾಣದ ಸಿದ್ಧಾಂತದ ಆಧಾರದ ಮೇಲೆ ರಚನೆಯಾದ ಮೊದಲ ರಾಜ್ಯ ಆಂಧ್ರ. (ಆಗಿನ್ನೂ ಹೈದರಾಬಾದ್ ಸಂಸ್ಥಾನ ಅಸ್ತಿತ್ವದಲ್ಲಿತ್ತು) ಈಗ ಒಂದು ಜನಾಂಗದ ಆಸೆ ಆಕಾಂಕ್ಷೆಗಳಿಗೆ ಭಾಷೆಯೊಂದೇ ಆಧಾರವಾಗುವುದಿಲ್ಲ ಎನ್ನುವುದಕ್ಕೆ ತೆಲಂಗಾಣದ ರಚನೆಯ ಸಲಹೆಯೇ ಸಾಕ್ಷಿ.
ಇದು ಒಂದು ರೀತಿಯಲ್ಲಿ ಜೇನುಗೂಡಿಗೆ ಕೈ ಹಾಕಿದಂತೆಯೇ. ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲೂ, ರಾಜ್ಯಗಳ ಪುನಾರಚನೆಗೆ ಸಮರ್ಥನೀಯ ರೀತಿಯಲ್ಲಿ ಬೇಡಿಕೆಯ ಮಂಡನೆಯಾದರೂ ಆಶ್ಚರ್ಯವಿಲ್ಲ. ಕರ್ನಾಟಕವೂ ಸೇರಿದಂತೆ, ಇತರ ಕೆಲವು ರಾಜ್ಯಗಳಲ್ಲಿ ಸಣ್ಣ ರಾಜ್ಯದ ರಚನೆಗೆ ಒತ್ತಾಯದ ಕೂಗು ಕೆಲವು ಕಾಲ ಕೇಳಿ ಬಂದರೂ, ಅದಕ್ಕೆ ಜನರ ಬೆಂಬಲ ಸಿಗುವುದಿಲ್ಲ ಎನ್ನುವುದರಲ್ಲಿ ಅನುಮಾನವಿಲ್ಲ.
ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿ, ತೆಲಂಗಾಣ ರಾಜ್ಯದ ನಿರ್ಮಾಣಕ್ಕೆ ನಡೆದ ದೀರ್ಘ ಹೋರಾಟವನ್ನು ಹಿಂದೆ ವಿರೋಧಿಸಿದ್ದರೂ, ಈಗ ರಾಜಕೀಯ ಕಾರಣಗಳಿಂದಾಗಿ ಆ ಒತ್ತಾಯಕ್ಕೆ ಮಣಿದಿದೆ. ಸಂಸತ್ತಿನಲ್ಲಿ ಪ್ರಧಾನ ಪಕ್ಷವಾದ ಭಾರತೀಯ ಜನತಾ ಪಾರ್ಟಿಯೂ ಆಂಧ್ರದ ವಿಭಜನೆಗೆ ಒಪ್ಪಿದೆ. ಹೊಸ ರಾಜ್ಯದ ನಿರ್ಮಾಣಕ್ಕೆ ಸಂವಿಧಾನದಲ್ಲೇ ಬದಲಾವಣೆಯಾಗಬೇಕು. ಅದನ್ನು ಸಾಧಿಸಬೇಕಾದರೆ ಉಭಯ ಸದನಗಳಲ್ಲೂ ಮೂರರಲ್ಲಿ ಎರಡರಷ್ಟು ಬಹುಮತ ಬೇಕು.
ಕೇಂದ್ರ ಸರ್ಕಾರ, ಫೆಬ್ರವರಿಯ ಮೊದಲ ಭಾಗದಲ್ಲಿ ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಲು ಬದ್ಧ. ಆದರೆ ಆ ನಿರ್ಣಯದ ಗೆಲವಿಗೆ ಅಗತ್ಯವಾದ ಬಹುಮತವನ್ನು ಪಡೆಯುವುದು ಯಾರ ಜವಾಬ್ದಾರಿ? ಈಗಾಗಲೇ ಕಾಂಗ್ರೆಸ್ ನಾಯಕರು ನಿರ್ಣಯದ ಪರವಾಗಿ ಆದಷ್ಟು ಪಕ್ಷಗಳ ಬೆಂಬಲವನ್ನು ಗಳಿಸುವುದರಲ್ಲಿ ಮಗ್ನರಾಗಿದ್ದಾರೆ.
ಆಂಧ್ರದಲ್ಲಿ ಕಾಂಗ್ರೆಸ್ ಉಳಿಯಬಹುದು. ಆದರೆ ಈಗಿನ ಮುಖ್ಯಮಂತ್ರಿ ಕಿರಣ ಕುಮಾರ ರೆಡ್ಡಿ ಕಾಂಗ್ರೆಸ್ಸಿನಲ್ಲಿ ಉಳಿಯುವುದು ಸಾಧ್ಯವಿಲ್ಲ. ಒಂದು ರೀತಿಯಲ್ಲಿ ಇದು ಕಾಂಗ್ರೆಸ್ಸೇ ನಿರ್ಮಿಸಿಕೊಂಡ ಸಮಸ್ಯೆ. ಅದರ ಪರಿಹಾರಕ್ಕೂ ಆ ಪಕ್ಷವೇ ಮುಂದಾಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement