ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 31 Jan 2014, 10:04 am

ತುಮಕೂರಿನ ಕೊರಟಗೆರೆಯಿಂದ ಉಪನ್ಯಾಸಕ ಚಿಕ್ಕಣ್ಣ ಅವರು ಪತ್ರ ಬರೆದಿದ್ದಾರೆ. 'ಡಿ.25ರ ಪತ್ರಿಕೆಯ 5ನೇ ಪುಟದಲ್ಲಿ 'ಪಿಸಿಎಂಬಿ ಹೊರೆ ಇಳಿಸಿದ ಪಪೂ' ಎಂದಿದೆ. ಅದು 'ಪಪೂಶಿಇ' ಆದರೆ ಒಳ್ಳೆಯದಲ್ಲವೇ? ಆರನೇ ಪುಟದ ಎ.ಆರ್.ಮಣಿಕಾಂತ್ ಅವರ ಅಂಕಣದಲ್ಲಿ ಮೊದಲ ಪ್ಯಾರಾದ ಐದನೇ ಸಾಲಿನಲ್ಲಿ 'ಮರೆದದ್ದು' ಎಂದಿದೆ,  ಅದು 'ಮೆರೆದದ್ದು' ಎಂದಾಗಬೇಕಿತ್ತು. 3, 4 ಮತ್ತು ಆರನೇ ಪ್ಯಾರಾದಲ್ಲಿ 'ಕಚೇರಿ' ಹಾಗೂ 'ಕಛೇರಿ' ಎಂಬ ಎರಡು ಪ್ರಯೋಗವಾಗಿದೆ. ಇದರಲ್ಲಿ ಯಾವುದು ಸರಿಯಾದ ಬಳಕೆ? ಇದೇ ಪುಟದಲ್ಲಿ ಸಚ್ಚಿದಾನಂದ ಹೆಗಡೆ ಅವರ ಲೇಖನದ 3ನೇ ಪ್ಯಾರಾದಲ್ಲಿ 'ಸುದೂರದ' ಎಂಬ ಪದ ಅಚ್ಚಾಗಿದೆ. ಅದು ಸರಿಯೇ'
'ಏಳನೇ ಪುಟದಲ್ಲಿ ಪ್ರಕಟವಾಗಿರುವ ಕೆ.ಎಸ್.ಸೋಮೇಶ್ವರ ಲೇಖನದ ನಾಲ್ಕನೇ ಪ್ಯಾರಾದ ಮೂರನೇ ಸಾಲಿನಲ್ಲಿ 'ಅಂತರೆ' ಎಂದಿದೆ, ಅದು 'ಅಂತರ' ಎಂದಿರಬೇಕಿತ್ತು.'
'ಇದೇ ದಿನದ 'ಬೈಟುಕಾಫಿ'ಯ ಮುಖಪುಟದಲ್ಲಿ 'ಕುವೆಂಪು ಮನೆ ಸೊಂಪು(ಕವಿಮನೆ)' ಲೇಖನ ಪ್ರಕಟವಾಗಿದೆ. ಈ ಲೇಖನದ ಮೊದಲನೇ ಪ್ಯಾರಾದ ಮೂರನೇ ಸಾಲಿನಲ್ಲಿ 'ಬಳೆದ' ಎಂಬ ಪದವಿದೆ. ದು 'ಬೆಳೆದ' ಅಥವಾ 'ಬಾಳಿದ' ಎಂದಾಗಬೇಕಲ್ಲವೇ? ಇನ್ನು 3ನೇ ಪುಟದಲ್ಲಿ ಎ.ಎಸ್.ಹೂಲಗೇರಿ ಅವರ ಲೇಖನದ ಎರಡನೇ ಪ್ಯಾರಾದ ಕೊನೆಯಲ್ಲಿ ಪ್ರಕಟವಾಗಿರುವ 'ಶ್ರೀದೇವಿ ಯೋಗದಲ್ಲೀಗ ಅಪ್ಪನಿಗೆ ಕೊಡುತ್ತಾರೆ' ಎಂಬ ವಾಕ್ಯ ಸರಿಯಾಗಿದೆಯೇ?' 'ಬೈಟುಕಾಫಿ'ಯ ಕೊನೆಯ ಪುಟದಲ್ಲಿರುವ ಬಸವನಗೌಡ ಹೆಬ್ಬಳಗೆರೆ ಲೇಖನದಲ್ಲಿ 'ಕೃಪಾಚಾರ್ಯರ ತಂಗಿ ಕೃಪಯನ್ನು' ಎಂದು ಬರೆಯಲಾಗಿದೆ. ಆದರೆ ಕೃಪಯನ್ನು ಎನ್ನುವ ಪ್ರಯೋಗ ಸರಿಯಾಗಿದೆಯೇ ಅಥವಾ ಕೃಪಳನ್ನು, ಕೃಪೆಯನ್ನು, ಕೃಪಯಳನ್ನು ಇದರಲ್ಲಿ ಯಾವುದು ಸರಿಯಾಗಿದೆ ಅಥವಾ ಸೂಕ್ತವಾದುದು ಯಾವುದು?' ಎಂದು ಪ್ರಶ್ನಿಸಿದ್ದಾರೆ.
ನಮ್ಮ ಪತ್ರಿಕೆಯ ಶೀರ್ಷಿಕೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಗೆ ಮೊದಲಿನಿಂದಲೂ 'ಪಪೂ' ಎಂಬ ಬಳಕೆ ಮಾಡಲಾಗುತ್ತಿದೆ. ಶೀರ್ಷಿಕೆಯಲ್ಲಿ 'ಪಪೂಶಿಇ' ಎಂದು ಬಳಸಲು ಸಾಧ್ಯವೂ ಇಲ್ಲ. 'ಪಿಯು' ಎಂಬ ಇಂಗ್ಲಿಷ್ ಶಬ್ದವನ್ನು ಒಪ್ಪಿಕೊಂಡಿರುವಾಗ 'ಪಪೂ' ಕುರಿತಂತೆ ವಿರೋಧ ಸಾಧು ಎನಿಸಲಿಕ್ಕಿಲ್ಲ. ಇನ್ನು ಕೆಲಸ ಮಾಡುವ ಸ್ಥಳವಾಗಿದ್ದರೇ ಕಚೇರಿ ಎಂದೂ, ಸಂಗೀತ ನಡೆಯುವುದಕ್ಕೆ ಕಛೇರಿ ಎಂದು ಬಳಸಲಾಗುತ್ತದೆ. ಅಂಕಣದಲ್ಲಿ ಕೆಲವೆಡೆ 'ಕಚೇರಿ' ಎಂದು ತಪ್ಪಾಗಿ ಬಳಸಲಾಗಿದೆ. 'ಶ್ರೀದೇವಿ ಯೋಗದಲ್ಲೀಗ ಅಪ್ಪನಿಗೆ ಸಾಥ್ ಕೊಡುತ್ತಾರೆ' ಎಂದಿದ್ದರೆ ಸೂಕ್ತವಿರುತ್ತಿತ್ತು. ಕೃಪಾಚಾರ್ಯರ ತಂಗಿಯ ಹೆಸರು ಕೃಪಿ. 'ಕೃಪಿಯನ್ನು' ಎಂದು ಬಳಸಿದ್ದರೆ ಸಾಕಿತ್ತು.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement