ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸುಧಾರಣೆಗೆ ದೊಡ್ಡ ಪೆಟ್ಟು

Mainashree
Updated On : 31 Jan 2014, 9:54 am

ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳಿಗೆ ನೆರವಿನ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೇ ಭರ್ತಿ ಮಾಡುವುದು ಹಾಗೂ ಅಡುಗೆ ಅನಿಲದ ನೆರವಿನ ಹಣದ ಪಾವತಿಗೆ ಗ್ರಾಹಕರ ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಿಸುವ ಕ್ರಮಗಳನ್ನು "ತಾತ್ಕಾಲಿಕವಾಗಿ" ಸರ್ಕಾರ ತಡೆಹಿಡಿದಿದೆ.
ಅಷ್ಟೇ ಅಲ್ಲದೇ, ಅದೇ ಸಮಯದಲ್ಲೇ ಅಡುಗೆ ಅನಿಲದ ಸಬ್ಸಿಡಿ ನೆರವಿನ ಸಿಲಿಂಡರ್ ನೀಡಿಕೆಯಲ್ಲಿ ಔದಾರ್ಯದ ಪ್ರದರ್ಶನವಾಗಿದೆ. ಇದುವರೆಗೆ ವರ್ಷಕ್ಕೆ ಒಂಬತ್ತು ಸಿಲಿಂಡರ್‌ಗಳ ಮಿತಿ ಇತ್ತು. ಈಗ ಅದನ್ನು ಹನ್ನೆರಡು ಸಿಲಿಂಡರ್‌ಗಳಿಗೆ ಏರಿಸಲಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎಐಸಿಸಿ ಅಧಿವೇಶನದಲ್ಲೇ ಬಹಿರಂಗವಾಗಿಯೇ ಈ "ಆದೇಶವನ್ನು ನೀಡಿದ್ದರು". ಅದನ್ನು ಸಚಿವ ಸಂಪುಟ ಪಾಲಿಸಿದೆ.
ಇದುವರೆಗೂ ಕೇಂದ್ರ ಸರ್ಕಾರದ ವಕ್ತಾರರು ಹಾಗೂ ಕಾಂಗ್ರೆಸ್ ಮುಖಂಡರು, ಬಡವರಿಗೆ ನೆರವು ಹಣವನ್ನು ಬ್ಯಾಂಕ್ ಖಾತೆಗೇ ಕಟ್ಟುವ ಹಾಗೂ ಅಡುಗೆ ಅನಿಲ ಸಿಲಿಂಡರ್‌ಗಳ ನೆರವನ್ನು ಅರ್ಹ ಬಡವರಿಗೆ ಮಾತ್ರ ಸೀಮಿತಗೊಳಿಸುವುದನ್ನು ಸುಧಾರಣೆ ನೀತಿಯ ಜಾರಿಯಲ್ಲಿ ಬಹುದೊಡ್ಡ ಹೆಜ್ಜೆಗಳೆಂದು ಪ್ರತಿಪಾದಿಸುತ್ತಿದ್ದರು  ನಿಜ. ಈಗ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜನರನ್ನು ಆಕರ್ಷಿಸಲು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಕೂಟ ಸರ್ಕಾರ ತನ್ನ ಸುಧಾರಣೆ ನೀತಿಗೇ ಪೆಟ್ಟುಕೊಟ್ಟುಕೊಂಡಂತೆ ಆಗಿದೆ ಎನ್ನುವ ಆರೋಪ ಹಲವು ವಲಯಗಳಲ್ಲಿ ಕೇಳಿ ಬಂದಿದೆ.
ಅಡುಗೆ ಅನಿಲದ ಸಬ್ಸಿಡಿ ಸಹಿತ ಸಿಲಿಂಡರ್ ಪೂರೈಕೆಯ ಪ್ರಮಾಣವನ್ನು ಏರಿಸುವ ಕ್ರಮವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ರಘುರಾಮ ರಾಜನ್ ಒಂದು ಟಿ.ವಿ. ವಾಹಿನಿಯ ಸಂದರ್ಶನದಲ್ಲಿ ಟೀಕಿಸಿ, ಇದು ಕೆಟ್ಟ ಆರ್ಥಿಕ ನೀತಿ ಹಾಗೂ ಕೆಟ್ಟ ರಾಜಕೀಯ ನೀತಿಯೂ ಹೌದು ಎಂದಿದ್ದಾರೆ.
ಇದೇನು ಹೊಸ ವಿವಾದವಲ್ಲ. ಬಡವರಿಗೆ ಅಗತ್ಯವಾಗಿರಬಹುದಾದ "ನೆರವನ್ನು" ಬಡವರಲ್ಲದ ಜನವರ್ಗಗಳಿಗೂ ಅನ್ವಯವಾಗುವಂತಹ ನೀತಿ ಆರ್ಥಿಕ ಶಿಸ್ತಿನ ದೃಷ್ಟಿಯಲ್ಲಿ ಸರಿಯಲ್ಲ ಎನ್ನುವುದು ಒಂದು ಹಳೆಯ ವಾದ. ಈಗಿನ ಕ್ರಮದಿಂದ ಸರ್ಕಾರದ ಮೇಲೆ ಸುಮಾರು 5000 ಕೋಟಿ ರುಪಾಯಿಗಳ ಹೊರೆ ಬೀಳುವುದರಿಂದ ವಿತ್ತೀಯ ಕೊರತೆಯ ಮೇಲೂ ಪರಿಣಾಮವಾಗುತ್ತದೆ ಎನ್ನುವುದು ಆ ವರ್ಗದ ವಾದ. ವಿತ್ತೀಯ ಕೊರತೆಯೇ ದೇಶದಲ್ಲಿನ ಚಿಲ್ಲರೆ ಮಾರಾಟ ವಲಯದಲ್ಲಿ ಅಧಿಕ ಪ್ರಮಾಣದ ಹಣದ ಅತಿಪ್ರಸರಣದ ಹಾವಳಿಗೆ ಬಹುಮಟ್ಟಿಗೆ ಕಾರಣ ಎನ್ನುವುದು ಪಂಡಿತರು ಒಪ್ಪಿರುವ ಸಿದ್ಧಾಂತ.
ಹಣದ ಅತಿಪ್ರಸರಣದ ಪರಿಣಾಮವಾಗಿ ಪೇಟೆಯಲ್ಲಿ ಬೆಲೆಗಳು ಏರಿದಾಗ, ಅದರ ಬಿಸಿಯನ್ನು ಹೆಚ್ಚಾಗಿ ಅನುಭವಿಸುವುದು ಬಡಜನ ವರ್ಗಗಳೇ. ಆ ಬವಣೆಗೆ ಹೆಚ್ಚು ಪ್ರಚಾರ ಸಿಗದೇ ಇರುವುದರಿಂದ ಆ ಜನ ಹೇಗೋ ಬದುಕಬೇಕಾಗಿದೆ.
ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯ ಸಂಖ್ಯೆಗೆ ಜೋಡಿಸಿ, ನೇರವಾಗಿ ಹಣದ ಪಾವತಿಯ ವ್ಯವಸ್ಥೆಯನ್ನು ತಡೆಹಿಡಿದಿರುವುದಕ್ಕೆ ಕಾರಣ ಸುಪ್ರೀಮ್ ಕೋರ್ಟಿನಲ್ಲಿ ಆಧಾರ್ ಕಾರ್ಡ್‌ನ ಸಂವಿಧಾನದಲ್ಲಿನ ಸ್ಥಾನ-ಮಾನವನ್ನೇ ಕೆಲವರು ಪ್ರಶ್ನಿಸಿರುವುದರಿಂದ.
ಕೆಲವು ಜನವರ್ಗಗಳಿಗೆ ಅಗತ್ಯವಾಗಿರಬಹುದಾದ ನೆರವನ್ನು ಅಪಾತ್ರರಿಗೂ ಅನ್ವಯಿಸಿದಾಗ, ಆ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರುವುದು ಕಷ್ಟ ಎನ್ನುವುದನ್ನು ಪರೋಕ್ಷವಾಗಿ ಈಗ ಸರ್ಕಾರವೇ ಒಪ್ಪಿಕೊಂಡಂತೆ ಆಗಿದೆ.
ಇನ್ನೂ ದೇಶದ ಎಲ್ಲ ಕಡೆ ಆಧಾರ್ ಕಾರ್ಡ್‌ಗಳನ್ನು ಹಂಚಿಲ್ಲ. ಹಿಂದೆ ಪ್ರಕಟವಾಗಿದ್ದ ಯೋಜನೆಯಂತೆ, ಸದ್ಯದಲ್ಲೇ ಅರವತ್ತು ಕೋಟಿ ಜನರಿಗೆ ಆಧಾರ್ ಕಾರ್ಡ್ ಹಂಚುವ ಆಂದೋಲನ ಆರಂಭವಾಗಬೇಕಿತ್ತು. ಈಗ ಅದು ನೆನೆಗುದಿಗೆ ಬಿದ್ದಂತೆಯೇ. ಚುನಾವಣೆ ಮುಗಿಯುವವರೆಗೂ ಅಂತಹ ಆಂದೋಲನ ನಡೆಯಲಿಕ್ಕಿಲ್ಲ.
ಭಾರತ ದೊಡ್ಡ ದೇಶ. ಇಲ್ಲಿನ ಜನಸಂಖ್ಯೆಯೂ ಹೆಚ್ಚು. ಎಲ್ಲರಿಗೂ ಅನ್ವಯವಾಗುವಂತಹ, ಜನರಿಗೆ ಹಕ್ಕುಗಳನ್ನು ನೀಡುವಂತಹ ಜನಪ್ರಿಯ ಯೋಜನೆಗಳ ಜಾರಿಗೆ ಬೇಕಾದ ಆಡಳಿತ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಎಲ್ಲವನ್ನೂ ಸ್ಥಳೀಯ ಸಂಸ್ಥೆಗಳ ತಲೆಗೇ ಕಟ್ಟಿದರೆ ಗೊಂದಲ ಖಚಿತ. ಮುಂದೆ ಈ ಗೊಂದಲ ಇಲ್ಲದಂತೆ ನೋಡಿಕೊಳ್ಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement