ಕ್ಷಮಾದಾನಕ್ಕೆ ಅನರ್ಹ
ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ತಪಸ್ ಪಾಲ್ ಆಗಿಂದಾಗ್ಗೆ ಕೆಟ್ಟ ಕಾರಣಗಳಿಂದಾಗಿ ಸುದ್ದಿ ಮಾಡುವುದನ್ನು...
ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ತಪಸ್ ಪಾಲ್ ಆಗಿಂದಾಗ್ಗೆ ಕೆಟ್ಟ ಕಾರಣಗಳಿಂದಾಗಿ ಸುದ್ದಿ ಮಾಡುವುದನ್ನು ತಮ್ಮ ಸಹಜ ಗುಣ ಎಂದು ಭಾವಿಸಿರುವಂತಿದೆ. ಈ ಸಂಸದರ ಬಹಿರಂಗ ವರ್ತನೆಯನ್ನು ಪ್ರತಿಭಟಿಸಿ, ಅನೇಕ ಪ್ರದರ್ಶನಗಳು ಹಿಂದೆಯೂ ನಡೆದಿವೆ.
ಈಗ ಅವರು ತಮ್ಮ ರಾಜಕೀಯ ಎದುರಾಳಿಗಳಾದ ಕಮ್ಯುನಿಸ್ಟರು, ಪ್ರಧಾನವಾಗಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟರ ಮೇಲೆ ತಮ್ಮ ಕೆಂಗಣ್ಣನ್ನು ಬೀರಿದ್ದಾರೆ. ಯಾವುದೋ ಒಂದು ಜಗಳಕ್ಕೆ ಸಂಬಂಧಿಸಿದಂತೆ ತಪಸ್‌ಪಾಲ್, ಅವರ ಪ್ರದೇಶದಲ್ಲಿ ಸಿಪಿಎಂ ಜನರ ಮನೆಯ ಹೆಣ್ಣುಮಕ್ಕಳ ಮಾನಭಂಗಕ್ಕೆ ತಮ್ಮ "ಹುಡುಗರನ್ನು ಕಳಿಸುವ" ಕೆಟ್ಟ ಬೆದರಿಕೆಯನ್ನು ಹಾಕಿ, ಸಜ್ಜನ ಸಮುದಾಯಗಳಿಂದ ಖಂಡನೆಗೆ ಗುರಿಯಾಗಿದ್ದಾರೆ.
ಪ್ರತಿಭಟನೆ ಜೋರಾದಾಗ, ಅವರು ತಾವು ಹಾಗೆ ಹೇಳೇ ಇಲ್ಲ ಎಂದು ಜಾರಿಕೊಳ್ಳಲು ಪ್ರಯತ್ನಿಸಿದರು. ಆದರೆ ಅವರ ವರ್ತನೆಯ ವಿಡಿಯೋಗಳನ್ನು ಪ್ರದರ್ಶಿಸಿದಾಗ ಸ್ವಲ್ಪ ಕೆಳಗಿಳಿದು, ಅಂತಿಮ ಹಂತದಲ್ಲಿ ಜನರ ಕ್ಷಮೆಯನ್ನು ಕೇಳಲು ಮುಂದಾಗಿದ್ದಾರೆ. ಇದು ಯಾವ ದೃಷ್ಟಿಕೋನದಿಂದ ನೋಡಿದರೂ ಕ್ಷಮೆಗೆ ಅರ್ಹವಾದ ಪ್ರಕರಣವಲ್ಲ.
ಕ್ಷಮೆ ಕೇಳಿದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಗುವುದಿಲ್ಲ. ಸಿಪಿಐ-ಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಸಂಸತ್ತೇ ಈ ವಿಚಾರದಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸುವುದು ಸೂಕ್ತ ಎಂದಿದ್ದಾರೆ. ಅದು ಸಾಧ್ಯವಾಗದೇ ಹೋಗಬಹುದು. ಆ ವಿಚಾರ ಬೇರೆ.
ಸಹಜವಾಗಿಯೇ ತೃಣಮೂಲ ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಈಗ ತನ್ನ ಸಂಸದರನ್ನು ಬಚ್ಚಿಟ್ಟುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ, ಪಕ್ಷ ಅವರ ಹೇಳಿಕೆಯನ್ನು ಖಂಡಿಸಿದೆ. ಇನ್ನೇನು ಮಾಡಲಿಕ್ಕೆ ಸಾಧ್ಯ? ಅವರನ್ನು ಕೊಲ್ಲಬೇಕೇನು ಎಂದು ಕೇಳಿರುವುದು ಖಂಡಿತವಾಗಲೂ ಸದ್ವರ್ತನೆಯಿಲ್ಲ. ಇದು ಶಿಸ್ತಿನ ಪ್ರಶ್ನೆ ಅಲ್ಲ. ನಾಗರಿಕತೆಯ ಪ್ರಶ್ನೆ.