ಉತ್ತಮ ಸಾಹಿತ್ಯದ ಲಕ್ಷಣವೇ ಹಾಗೆ. ಕೆಲವೊಮ್ಮೆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತವೆ ಅಥವಾ ಬದಲಿಸುತ್ತವೆ. ಸಾಹಿತ್ಯ ನಮಗೇಕೆ ಬೇಕು ಎಂದು ಮೂಗುಮುರಿಯುವವರಿಗೆ ಜೀವನದ ದಿಕ್ಕನ್ನು ಬದಲಿಸಿದ ಒಂದು ನೈಜ ಘಟನೆ ಇಲ್ಲಿದೆ. ಬಂಗಾಳಿ ಸಾಹಿತ್ಯದ ಮಹಾನ್ ಕಾದಂಬರಿಕಾರ ಶರಶ್ಚಂದ್ರ ಚಟರ್ಜಿಯವರು ಬರೆದ ಕಾದಂಬರಿಗಳು ಕೇವಲ ಕಥೆಗಳಾಗಿರದೆ, ಉತ್ತಮ ಜೀವನ ನಡೆಸುವ ದಾರಿದೀಪಗಳಾಗಿವೆ. ಶರಶ್ಚಂದ್ರರು ಒಬ್ಬ ಶ್ರೇಷ್ಠ ಕಾದಂಬರಿಕಾರರಾಗಿ, ಬಂಗಾಳಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಬಡತನದ ಬೇಗೆಯಲ್ಲಿ ಬೆಂದು, ಜೀವನದಲ್ಲಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಸಹ ತಮ್ಮ ಸಾಹಿತ್ಯ ಕೃಷಿಯನ್ನು ಸಮೃದ್ಧಗೊಳಿಸಿದರು. ಅವರ ದೇವದಾಸ್ ಕಾದಂಬರಿ ಚಲನಚಿತ್ರವಾಗಿ ಒಂದು ದಾಖಲೆಯನ್ನೇ ಸ್ಥಾಪಿಸಿತು. ಶರಶ್ಚಂದ್ರ ಚರಿತ್ರಹೀನ ಕಾದಂಬರಿ ಬಹಳಷ್ಟು ಜನರ ಟೀಕೆಗೆ ಒಳಗಾದ ಕಾದಂಬರಿ. ಏಕೆಂದರೆ ಅದರಲ್ಲಿ ಒಬ್ಬ ಮಧ್ಯಮ ವರ್ಗದ ಬುದ್ಧಿವಂತ ಮಹಿಳೆ ಕ್ರಮೇಣ ನೈತಿಕ ಅಧಃಪತನ ಹೊಂದುವುದನ್ನು ಮನೋಜ್ಞವಾಗಿ ಚಿತ್ರಿಸಲಾಗಿತ್ತು. ಮೊದಲು ಅದನ್ನು ಧಾರವಾಹಿಯಾಗಿ ಪ್ರಕಟಿಸಲು ನಿರಾಕರಿಸಿದ ಪತ್ತಿಕೆಯೊಂದರ ಮಾಲೀಕರೇ ಆ ಕಾದಂಬರಿಯನ್ನು ಪ್ರಕಟಿಸಿದಾಗ ಅದ್ಭುತ ಪ್ರತಿಕ್ರಿಯೆ ಬಂದು ಹಲವಾರು ಆವೃತ್ತಿಗಳನ್ನು ಕಂಡಿತು. ಒಮ್ಮೆ ಒಬ್ಬ ತರುಣಿ ತನ್ನ ತಂದೆ ತಾಯಿಯರಿಗೆ ತಿಳಿಸದೆ, ಪ್ರಿಯಕರನೊಂದಿಗೆ ಮಧ್ಯರಾತ್ರಿಯಲ್ಲಿ ಓಡಿ ಹೋಗಲು ನಿರ್ಧರಿಸಿದಳು. ಅಲ್ಲಿಯವರೆಗೆ ಕಾಲಕಳೆಯುವುದು ಹೇಗೆಂದು ಯೋಚಿಸಿ, ಶರಶ್ಚಂದ್ರರ ಚರಿತ್ರಹೀನ ಕಾದಂಬರಿಯನ್ನು ಓದತೊಡಗಿದಳು ಅದರಲ್ಲಿಯ ಕಥಾನಾಯಕಿಯ ದುರಂತ ಕಥೆಯನ್ನು ಓದಿ ಕೊನೆಗೆ ಪಶ್ಚಾತ್ತಾಪದಿಂದ ಬೆಂದುಹೋಗುವ ತನ್ನ ಬಾಳೂ ಹೀಗಾಗಬಹುದೆಂದು ಭಾವಿಸಿ, ತಾನು ಓಡಿಹೋಗುವ ಆಸೆಯನ್ನು ಬಿಟ್ಟು ಮುಂದೆ ಉತ್ತಮ ಜೀವನ ನಡೆಸಿದಳು. ಆ ತರುಣಿ ಒಮ್ಮೆ ಶರಶ್ಚಂದ್ರರನ್ನು ಭೇಟಿಯಾಗಿ ತಮ್ಮಿಂದ ಮಹದುಪಕಾರವಾಯಿತು ಎಂದಾಗ ಅವರಿಗೆ ತುಂಬಾ ಅಚ್ಚರಿಯಾಯಿತು. ತಾನು ಯಾವಾಗ ಈಕೆಗೆ ಸಹಾಯ ಮಾಡಿದೆ ಎಂದು. ಆಗ ಆ ತರುಣಿ ಮೇಲಿನ ಘಟನೆಯನ್ನು ಹೇಳಿ, ತಮ್ಮ ಕಾದಂಬರಿ ನನ್ನ ಜೀವನವನ್ನು ಸರಿಪಡಿಸಿಕೊಳ್ಳಲು ನೆರವಾಯಿತು. ಈಗ ತಂದೆ ತಾಯಿಯ ಇಚ್ಛೆಯಂತೆ ವಿವಾಹವಾಗಿ ಸುಖವಾಗಿದ್ದೇನೆ ಎಂದಾಗ ತಮ್ಮ ಒಂದು ಕಾದಂಬರಿ ಒಬ್ಬರ ಬಾಳಿಗಾದರೂ ನೆರವಾಯಿತಲ್ಲಾ ಎಂಬ ಧನ್ಯತಾ ಭಾವ ಅವರಲ್ಲಿ ಮೂಡಿತು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com