ಸಂಪಾದಕೀಯ

ನಾಟಕವಾಡಿಸಿ ಸಹಾಯ ಮಾಡಿದ ಅನಂತಸ್ವಾಮಿ

ಮೈಸೂರು ಅನಂತಸ್ವಾಮಿ ಸುಪ್ರಸಿದ್ಧ ಗಾಯಕರೂ ಮತ್ತು ರಾಗಸಂಯೋಜಕರೂ ಆಗಿದ್ದರು. ಭಾವಗೀತೆಗಳಿಗೆ ದನಿಯಾಗಿ, ತಮ್ಮ ಮಧುರ ಕಂಠದಿಂದ ರಸಿಕರ ಮನ ಗೆದ್ದವರು. ಬಡತನದಲ್ಲಿಯೇ ಜೀವನ ನಡೆಸಿದರೂ ಇತರರಿಗೆ ಸಹಾಯ ಮಾಡುವುದರಲ್ಲಿ ಸದಾ ಮುಂದಿದ್ದವರು. ಸುಗಮ ಸಂಗೀತದ ಪ್ರಮುಖ ಗಾಯಕರಾಗಿ ಕನ್ನಡದ ಎಲ್ಲ ಕವಿಗಳ ಹಾಡುಗಳನ್ನೂ ಹಾಡಿದ್ದಾರೆ. ಇವರ ಮಗ ರಾಜು ಅನಂತಸ್ವಾಮಿ ಸಹ ಪ್ರಸಿದ್ಧ ಸುಗಮ ಸಂಗೀತ ಗಾಯಕರಾಗಿದ್ದರು. ಒಮ್ಮೆ ಅನಂತಸ್ವಾಮಿಯವರು ಮನೆಯಲ್ಲಿ ಕುಳಿತು ಯಾವುದೋ ಹಾಡಿಗೆ ರಾಗ ಸಂಯೋಜಿಸುತ್ತಿದ್ದರು. ಆಗ ಅಲ್ಲಿಗೆ ಬಂದ ಒಬ್ಬ ವ್ಯಕ್ತಿ ತಾನು ಕೃಷ್ಣಮೂರ್ತಿಪುರಂನಿಂದ ಬಂದಿರುವುದಾಗಿಯೂ ತನ್ನೆರಡು ಹೆಣ್ಣಮಕ್ಕಳಿಗೂ ಮದುವೆ ಗೊತ್ತಾಗಿದೆಯೆಂದು ಹೇಳಿಕೊಂಡ. ಅದನ್ನು ಕೇಳಿ ಅನಂತಸ್ವಾಮಿಯವರಿಗೆ ಸಂತೋಷವಾಯಿತು. ಆದರೆ ಬಂದಿದ್ದಾತ ಕಣ್ತುಂಬಾ ನೀರು ತುಂಬಿಕೊಂಡು, "ಮದುವೆಯೇನೋ ಗೊತ್ತಾಗಿದೆ. ನಿಶ್ಚಿತಾರ್ಥ ಸಹ ಮುಗಿದಿದೆ. ಆದರೆ ಮದುವೆಗೆ ಖರ್ಚು ಮಾಡಲು ನನ್ನಲ್ಲಿ ಹಣವಿಲ್ಲ. ಎಲ್ಲಿ ಮದುವೆ ನಿಂತುಹೋಗುವುದೋ ಎಂದು ಯೋಚನೆಯಾಗಿದೆ" ಎಂದ. ಮದುವೆಗಾಗಿ ಎಷ್ಟು ಖರ್ಚಾಗಬಹುದು ಎಂದು ಅನಂತಸ್ವಾಮಿ ಕೇಳಿದ್ದಕ್ಕೆ ಕನಿಷ್ಠ ಮೂರೂವರೆ ಸಾವಿರ ರುಪಾಯಿಗಳ ಅವಶ್ಯಕತೆಯಿರುವುದಾಗಿ ತಿಳಿಸಿದ. ಮೊದಲೇ ಕಷ್ಟದಲ್ಲಿದ್ದ ಅನಂತಸ್ವಾಮಿ ಹಣವೆಲ್ಲಿಂದ ತರಬೇಕು? ಆದರೂ ಅವರು ಆ ಬಡ ಬ್ರಾಹ್ಮಣನಿಗೆ ಸಹಾಯಮಾಡಲು ನಿರ್ಧರಿಸಿದರು. ವಿವಾಹಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕೆಂದೂ, ತಾವು ಹೇಗಾದರೂ ಹಣ ಹೊಂದಿಸಿಕೊಡುವುದಾಗಿ ಮಾತುಕೊಟ್ಟು ಆ ವ್ಯಕ್ತಿಯನ್ನು ಕಳುಹಿಸಿಕೊಟ್ಟರು. ಅವರ ಮಿತ್ರ ಹೆಚ್.ಜಿ. ಸೋಮಶೇಖರರಾವ್ ಜೊತೆಗೆ ಸಮಾಲೋಚಿಸಿ, ಆ ಬಡ ವ್ಯಕ್ತಿಯ ಸಹಾಯಾರ್ಥ ಒಂದು ನಾಟಕವನ್ನಾಡಬೇಕೆಂದು ತೀರ್ಮಾನಿಸಿದರು. ಅದರಂತೆ ಮೈಸೂರಿನ ಪುರಭವನದಲ್ಲಿ 'ಅಂಗುಲಿಮಾಲ' ನಾಟಕವನ್ನೇರ್ಪಡಿಸಿದರು. ಟಿಕೇಟು ಮಾರಿ ಅಂತೂ 5000 ರು.ಗಳನ್ನು ಸಂಗ್ರಹಿಸಿದರು. ಅದರಲ್ಲಿ ನಾಟಕ ಪ್ರದರ್ಶನಕ್ಕಾಗಿ ಖರ್ಚಾದ ಹಣವನ್ನು ಮುರಿದು ಉಳಿದ 4100 ರುಪಾಯಿಗಳನ್ನು ಆ ಬ್ರಾಹ್ಮಣನನ್ನು ವೇದಿಕೆಗೆ ಕರೆತಂದು ಅದನ್ನು ಮಗಳ ಮದುವೆಗೆ ವಿನಿಯೋಗಿಸಲು ನೀಡಿದರು. ತಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಹಣ ದೊರೆತುದರಿಂದ ಆ ವ್ಯಕ್ತಿಗೆ ತುಂಬಾ ಸಂತೋಷವಾಯಿತು. ಅನಂತಸ್ವಾಮಿಗೆ ಕೃತಜ್ಞತೆಗಳನ್ನು ಅರ್ಪಿಸಿ, ತನ್ನ ಇಬ್ಬರು ಮಕ್ಕಳಿಗೂ ಅದ್ಧೂರಿಯಿಂದಲೇ ಮದುವೆ ಮಾಡಿದ. ತಮ್ಮ ಕೈಲಾದ ಸಹಾಯ ಮಾಡಿದ ತೃಪ್ತಿ ಅನಂತಸ್ವಾಮಿಯವರಿಗಾಯಿತು.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ