ಉಡುಪಿ-ಕುಂದಾಪುರದಿಂದ ಶೃಂಗೇರಿಗೇಕೆ ಬಸ್ಸಿಲ್ಲ?
ಕರ್ನಾಟಕ ಕರಾವಳಿಯ ಉಡುಪಿ ಒಂದು ಪೌರಾಣಿಕ, ಐತಿಹಾಸಿಕ ಕ್ಷೇತ್ರ. ಪ್ರಸಿದ್ಧ ಕೃಷ್ಣ ದೇವಸ್ಥಾನ ಹಾಗೂ ಮಣಿಪಾಲದಂತಹ ಶೈಕ್ಷಣಿಕ ಕೇಂದ್ರಗಳೊಂದಿಗೆ ಆನೆಗುಡ್ಡೆ, ಕೊಲ್ಲೂರುಗಳಂತಹ ದೊಡ್ಡ ದೇವಾಲಯಗಳಿರುವ ಈ ಜಿಲ್ಲೆಗೆ ನೆರೆಯ ಚಿಕ್ಕಮಗಳೂರಿನ ಪ್ರಸಿದ್ಧ ಯಾತ್ರಸ್ಥಳ ಶೃಂಗೇರಿಯಿಂದ ಇಂದಿನವರೆಗೂ ನೇರ ಬಸ್ ಸೌಕರ್ಯ ಇಲ್ಲವೆನ್ನುವುದು ನಿಜಕ್ಕೂ ಖೇದಕರ ಸಂಗತಿ.
ಉಡುಪಿ ಜಿಲ್ಲಾಕೇಂದ್ರದಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿಯೂ, ಮಹತ್ವದ ತಾಲೂಕು ಕೇಂದ್ರವಾದ ಕುಂದಾಪುರದಿಂದ 80 ಕಿಲೋಮೀಟರ್ ದೂರದಲ್ಲಿಯೂ ಇರುವ ಶೃಂಗೇರಿಗೆ ಕುಂದಾಪುರವಾಸಿಗಳು ಹೋಗಬೇಕಾದಲ್ಲಿ ಹೆಬ್ರಿಗೆ ಹೋಗಿ ಅಲ್ಲಿಂದ ಮತ್ತೊಂದು ಬಸ್ ಹಿಡಿದು ಬಿದರ್ ರೋಡಿಗೋ, ಕೈಮರಕ್ಕೋ ಹೋಗಿ ಅಲ್ಲಿಂದ ಶೃಂಗೇರಿ ತಲುಪಬೇಕು. ಅದೂ ಸಹ ಎಲ್ಲವೂ ಖಾಸಗಿ ಬಸ್ಗಳಾಗಿದ್ದು ಕಿರಿದಾದ ಆಗುಂಬೆ ಘಟ್ಟದ ದಾರಿಯಲ್ಲಿ ಅವರು ಓಡಿಸುವ ಮಿನಿ ಟೆಂಪೋದಂಥ ಬಸ್ಗಳಲ್ಲಿ ನೇತಾಡಿಕೊಂಡು, ಹೋಗಬೇಕಾದ ಅನಿವಾರ್ಯತೆಯಿದೆ.
ಶೃಂಗೇರಿ ವಾಸಿಗಳು ಸಹ ಕಾರ್ಯನಿಮಿತ್ತ ಮಣಿಪಾಲ, ಉಡುಪಿಗೆ ಬರಬೇಕಾದಲ್ಲಿ, ಇದೇ ರೀತಿ ಎರಡು-ಮೂರು ಬಸ್ ಹತ್ತಿಕೊಂಡು ಬರಬೇಕು. ದುಡ್ಡಿದ್ದವರೇನೋ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಬರುತ್ತಾರೆ, ಆದರೆ ಸಾಮಾನ್ಯ ಜನರ ಗತಿಯೇನು?
ಪ್ರತಿದಿನವೂ ನೂರಾರು ಮಂದಿ ಓಡಾಡುವ ಈ ಮಾರ್ಗದಲ್ಲಿ ಇದುವರೆಗೆ ನೇರ ಸಂಪರ್ಕ ಕಲ್ಪಿಸುವ ಒಂದೇ ಒಂದು ಬಸ್ ಇದ್ದು, ಅದನ್ನು ಸಹಕಾರ ಸಾರಿಗೆಯವರು ನಡೆಸುತ್ತಿದ್ದಾರೆ. ಆದರೆ ಅದೂ ಸಹ ಜನರಿಗೆ ಉಪಯೋಗವಾಗುವಂಥ ಸಮಯದಲ್ಲಲ್ಲ. ಕೊಲ್ಲೂರಿನಿಂದ ಶೃಂಗೇರಿಗೆ ತೆರಳುವ ಈ ಬಸ್ ಕೊಲ್ಲೂರಿನಿಂದ ಹೊರಡುವುದು ಮದ್ಯಾಹ್ನ 2 ಕ್ಕೆ. ಸಂಜೆ 6.30 ಇಲ್ಲವೇ 6.45ಕ್ಕೆ ಶೃಂಗೇರಿ ತಲುಪುವ ಈ ಬಸ್ನಲ್ಲಿ ಪ್ರಯಾಣಿಸಿದವರು ಆ ದಿನ ರಾತ್ರಿ ಶೃಂಗೇರಿಯಲ್ಲಿಯೇ ಕಳೆಯಬೇಕು. ಮತ್ತೆ ಆ ಬಸ್ ಕೊಲ್ಲೂರಿಗೆ ಹೊರಡುವುದು ಮಾರನೇ ದಿನ ಬೆಳೆಗ್ಗೆ 8 ಕ್ಕೆ! ಆದರೆ ಈ ಬಸ್ ಬಿಟ್ಟು ಬೇರಾವ ಬಸ್ಗಳೂ ಉಡುಪಿ, ಕುಂದಾಪುರಗಳಿಂದ ಶೃಂಗೇರಿಗೆ ನೇರ ಸಂಪರ್ಕವನ್ನು ಒದಗಿಸಲಾರವು. (ಈ ಮೇಲಿನ ಬಸ್ ಸಹ ಉಡುಪಿಗೆ ತೆರಳುವುದಿಲ್ಲ) ಸಾರಿಗೆ ಸಚಿವರು, ಆಯುಕ್ತರು ಇನ್ನಾದರೂ ಎಚ್ಚೆತ್ತುಕೊಂಡು ಈ ಮಾರ್ಗದಲ್ಲಿ ಸಾಕಷ್ಟು ಸಂಖ್ಯೆಯ ಬಸ್ ಓಡಿಸಿ ಜನರಿಗೆ ಅನುಕೂಲ ಮಾಡಿಕೊಡಲಿ ಎನ್ನುವ ಅಭಿಲಾಷೆಯಿದೆ.
-ರಾಘವೇಂದ್ರ ಅಡಿಗ ಎಚ್ಚೆನ್.
ನೀರಿನ ಸಂಗ್ರಹಣೆಗೆ ಆದ್ಯತೆ ನೀಡಲಿ
ಪ್ರಸಕ್ತ ವರ್ಷ ಸಾಧಾರಣಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇರುವುದಾಗಿ ರಾಜ್ಯದ ಹವಾಮಾನ ಇಲಾಖೆಯು ಈ ಹಿಂದೆ ಮಾಹಿತಿ ನೀಡಿದ್ದರೂ, ಹಲವಾರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿರುವುದು ಸಂತಸದ ಸಂಗತಿ. ಪ್ರಕೃತಿಯ ಕೊಡುಗೆಯಾದ ಈ ಸಂಪತ್ತು ವ್ಯರ್ಥವಾಗದಂತೆ, ಮುಂದಿನ ಕಷ್ಟಕಾಲಕ್ಕಾಗಿ ಸಂರಕ್ಷಿಸದಿದ್ದಲ್ಲಿ, ಕುಡಿಯುವ ನೀರಿಗೂ ಸಹ ಕಠಿಣ ದಿನಗಳನ್ನು ಎದುರಿಸಬೇಕಾದೀತು. ರಾಜ್ಯದ ರೈಲು ಮಾರ್ಗಗಳಿರುವೆಡೆ ಪ್ರತಿ 8-10 ಕಿ.ಮೀಗೆ ಒಂದು ರೈಲು ನಿಲ್ದಾಣವಿದ್ದು, ಇವುಗಳ ಬಳಿ ಸಾಕಷ್ಟು ಖಾಲಿ ಜಾಗ ಇರುವ ಸಾಧ್ಯತೆಗಳಿವೆ. ಕೇಂದ್ರ ರೈಲ್ವೆ ಇಲಾಖೆಯೊಂದಿಗೆ ಅಗತ್ಯ ಸಮನ್ವಯ ವಹಿಸಿ, ಈ ಸ್ಥಳಗಳಲ್ಲಿ ದೊಡ್ಡದಾದ ನೆಲಮಟ್ಟದ ಸಂಪ್ಗಳನ್ನೂ ಹಾಗೂ ನೀರಿನ ಟ್ಯಾಂಕ್ಗಳನ್ನು ಕಟ್ಟಬಹುದು. ಇದರಲ್ಲಿ ನೀರಿನ ಸಂಗ್ರಹಣೆಗೆ ಹಾಗೂ ಟ್ಯಾಂಕ್ನಿಂದ ಊರಿಗೆ ನೀರು ಸರಬರಾಜಿಗೆ ವ್ಯವಸ್ಥೆ ಮಾಡಬಹುದು. ಮುಂದೆ ರೈಲು ಗಾಡಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾದ ಅನಿವಾರ್ಯ ಸನ್ನಿವೇಶಗಳಲ್ಲಿ ಇದು ಸಹಕಾರಿಯಾಗುತ್ತದೆ. ಪರ್ಯಾಯವಾಗಿ ಊರಿನಲ್ಲಿ ಕೆರೆ ಇದ್ದರೆ, ಕೆರೆಯ ಹೂಳನ್ನು ತೆಗೆಸಿ, ಇದನ್ನೇ ಸಂಸ್ಕರಿಸಿ, ಕಟ್ಟೆಗಳನ್ನು ಕಟ್ಟಿ, ಹೆಚ್ಚಿನ ನೀರಿನ ಸಂಗ್ರಹಣೆಗೆ ವ್ಯವಸ್ಥೆ ಮಾಡಬಹುದು. ಇದು ತುರ್ತಾಗಿ ಆಗಬೇಕಾದ ಕಾರ್ಯ. ಜನರ ತೆರಿಗೆ ಹಣ ಪೋಲಾಗದಂತೆ, ಈ ಕೆಲಸಗಳ ಉಸ್ತುವಾರಿಯನ್ನು ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿಗೆ ವಹಿಸುವುದೂ ಅಷ್ಟೇ ಅಗತ್ಯ.
-ಕೆ.ಟಿ. ಕಣ್ಣನ್, ಬೆಂಗಳೂರು