ತಪ್ಪಾಯ್ತು ತಿದ್ಕೋತೀವಿ
ಚಾಮರಾಜನಗರದಿಂದ ಎಂ.ಬಿ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ಜೂ.29ರಂದು 'ಸಂಡೆಗೆ ಸಂಡಿ'ಗೆಯ ಪುಟ 4ರಲ್ಲಿ 'ಸುಳ್‌ಯಾ' ಅಂಕಣದಲ್ಲಿ 'ಮೋದಿಯಾಗಿ ಅಮೀರ್‌ಖಾನ್' ಶೀರ್ಷಿಕೆಯಲ್ಲಿ ಅಮೀರ್‌ಖಾನ್ ಭಾವಚಿತ್ರ ಇರುವ ಸುದ್ದಿಯ ಕಲಂ 8ರಲ್ಲಿ ಹೀಗಿದೆ. 'ಅಮೀರ್‌ಖಾನ್ ಅವರು ನರೇಂದ್ರ ಮೋದ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ' ಎಂದಿದೆ. ಇದು ನರೇಂದ್ರ ಮೋದಿ ಪಾತ್ರದಲ್ಲಿ ಎಂದಾಗಬೇಕಿತ್ತಲ್ಲವೇ?'
'ಜು.5ರಂದು 'ಬೈಟುಕಾಫಿ'ಯಲ್ಲಿ 'ಆಟ ನಂಬರ್-2' ಶೀರ್ಷಿಕೆಯ ಲೇಖನದಲ್ಲಿ ಆಸ್ಟ್ರೇಲಿಯಾದ ಬೆಂಕಿಯುಗುಳುವ ಚೆಂಡುಗಳ ಖ್ಯಾತಿಯ ಬ್ರೆಟ್‌ಲೀ ಹವ್ಯಾಸಗಳ ಬಗ್ಗೆ ಇರುವ ವರದಿಯ ಕಲಂ 6ರಲ್ಲಿ ಲೀ 2011ರಲ್ಲಿ ಸಂಗೀತದ ಧಮಾರ್ಥ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಭಾರತದ ಮಕ್ಕಳಿಗೆ ನೆರವಾಗುವ ಕಾಯಕದಲ್ಲೂ ತೊಡಗಿದ್ದಾರೆ ಎಂದಿದೆ. ಸಂಗೀತದ ಧರ್ಮಾರ್ಥ ಎಂದಿರಬೇಕಿತ್ತಲ್ಲವೇ?' ಎಂದಿದ್ದಾರೆ.
ಶಬ್ದಗಳನ್ನು ಆಚೀಚೆ ಮಾಡುವುದರಿಂದ ವಾಕ್ಯದ ಅರ್ಥವೇ ಬದಲಾಗುವುದರ ಅಥವಾ ಅಪಾರ್ಥ ಉಂಟಾಗುವ ಬಗ್ಗೆ ಈ ಹಿಂದೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ಆದರೂ ಕೆಲವರು ತಿದ್ದಿಕೊಳ್ಳುವುದಿಲ್ಲ ಅಥವಾ ರೂಢಿ ಬದಲಿಸಲು ಸಾಧ್ಯವಾಗುತ್ತಿಲ್ಲ ಅನಿಸುತ್ತದೆ. ಅದರಿಂದಾಗಿಯೇ ಇಂತಹ ಕ್ಷುಲ್ಲಕ ತಪ್ಪುಗಳನ್ನು ಮಾಡುತ್ತಾರೆ. ಹೊಸತನಕ್ಕೆ, ವಿಚಾರಕ್ಕೆ ತೆರೆದುಕೊಳ್ಳುವ, ಕಾಲಕಾಲಕ್ಕೆ ಅಪ್‌ಡೇಟ್ ಆಗುವ ಮನೋಭಾವ ಪತ್ರಕರ್ತರಿಗೆ ಇಲ್ಲದಿದ್ದರೆ ತಪ್ಪುಗಳೇ ಸರಿಯಾಗಿ ಉಳಿದುಬಿಡುತ್ತವೆ.
ರಾಯಚೂರು ಜಿಲ್ಲೆ ಮಾನ್ವಿಯಿಂದ ಅಂಬಮ್ಮ ಪ್ರತಾಪಸಿಂಗ್ ಅವರು ಬರೆಯುತ್ತಾರೆ- 'ಜೂ.26ರಂದು 'ಅನುಭವ ಮಂಟಪ'ದಲ್ಲಿ ಕೇಂದ್ರ ಸಚಿವರಾದ ಅರುಣ್‌ಜೇಟ್ಲಿ ಅವರು 'ಸ್ವಾತಂತ್ರ್ಯ ಹರಣವಾದ ಆ 19 ತಿಂಗಳುಗಳು' ಎಂಬ ಲೇಖನ ಬರೆದಿದ್ದಾರೆ. ಅದರಲ್ಲಿ ಮೊದಲನೇ ವಾಕ್ಯ ಜೂನ್ 26, 2014. ಅಂದರೆ ಈ ದಿನವು ತುರ್ತು ಪರಿಸ್ಥಿತಿಯ ಕರಾಳ ನೆನಪಿನ 39ನೇ ವಾರ್ಷಿಕ ದಿನವಾಗಿರುತ್ತದೆ.'
'ನಾನು ಓದಿದ ಪ್ರಕಾರ ಅಥವಾ ನಾನು ಓದಿದ್ದು ನೆನಪಿರುವ ಪ್ರಕಾರ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು ಜೂನ್ 25. ಪತ್ರಿಕೆಯ ಮುದ್ರಣ ದೋಷದಿಂದ ಜೂನ್ 26 ಆಯಿತೋ ಅಥವಾ ಸಚಿವರು ಬರೆದಿದ್ದೇ ಜೂನ್ 26 ಅಥವಾ ನಾನು ಓದಿದ್ದು ತಪ್ಪೋ? ಯಾವುದು ಸರಿಯಾಗಿದೆ ಅಂತ ಗೊತ್ತಾಗಲಿಲ್ಲ. ಅದೇ ಲೇಖನದಲ್ಲಿ 1975ರ ಜೂನ್ 25 ಸಂಜೆ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿಯೊಂದು ನಡೆದು ಜಯಪ್ರಕಾಶ ನಾರಾಯಣ್ ಹಾಗೂ ಇತರ ಮುಖಂಡರು 'ದನಸ್ತೋಮವನ್ನು' ಉದ್ದೇಶಿಸಿ ಭಾಷಣ ಮಾಡಿದರು. ಇದರಲ್ಲಿ ದನಸ್ತೋಮದ ಬದಲಾಗಿ 'ಜನಸ್ತೋಮ' ಆಗಬೇಕಾಗಿತ್ತು' ಎಂದಿದ್ದಾರೆ.
ಜೂ.25ರ ರಾತ್ರಿ ತುರ್ತುಪರಿಸ್ಥಿತಿ ಘೋಷಣೆಯಾಗಿದೆ. ಆದರೆ ಎಲ್ಲರಿಗೂ ಗೊತ್ತಾಗಿದ್ದು ಜೂ.26ಕ್ಕೆ ಮತ್ತು ಸಂಪೂರ್ಣವಾಗಿ ಜಾರಿಗೆ ಬಂದಿದ್ದು ಕೂಡ ಜೂ.26ರಂದು. ಆದ್ದರಿಂದ ಹಾಗೆ ಬರೆಯಲಾಗಿದೆ. ತುಂಬಾ ಸರಿಯಾಗಿ ಹೇಳಬೇಕು ಎಂದರೆ ಜೂ.25ನ್ನೇ ತುರ್ತುಪರಿಸ್ಥಿತಿ ಘೋಷಣೆ ಮಾಡಿದ ದಿನ ಎಂದು ಹೇಳಬೇಕಾಗುತ್ತದೆ. ಆದರೆ ಅರುಣ್ ಜೇಟ್ಲಿ ಅವರನ್ನು ಬಂಧಿಸಿದ್ದು ಜೂ.26ರಂದು. ಹಾಗಾಗಿ ಅವರ ಪಾಲಿಗೆ ಜೂ.26 ಪ್ರಮುಖ.
- ವಿಶ್ವೇಶ್ವರ ಭಟ್