ಡಾ.ಸರ್.ಸಿ.ಪಿ.ರಾಮಸ್ವಾಮಿ ಐಯ್ಯರ್ ಉತ್ತಮ ವಕೀಲರಾಗಿ, ಶಿಕ್ಷಣತಜ್ಞರಾಗಿ, ಆಡಳಿತಗಾರರಾಗಿ ಪ್ರಸಿದ್ಧಿ ಪಡೆದಿದ್ದರು. ತಿರುವನಂತಪುರದ ದಿವಾನರಾಗಿದ್ದಾಗ ಹರಿಜನರಿಗೆ ದೇವಾಲಯ ಪ್ರವೇಶಿಸಲು ಕಾನೂನು ಮೂಲಕ ನ್ಯಾಯ ಒದಗಿಸಿಕೊಟ್ಟಿದ್ದರು. ಅನೇಕ ಸಾಮಾಜ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಜನರ ಜೀವನವನ್ನು ಹಸನುಗೊಳಿಸಿದವರು. ಅವೆಲ್ಲಾ ಭಗವಂತ ತಮಗೆ ನೀಡಿದ ಅವಕಾಶವೆಂದೇ ತಿಳಿದಿದ್ದರು. ಅವರು ವಕೀಲರಾಗಿದ್ದಾಗ ಒಂದು ರೋಚಕ ಘಟನೆ ನಡೆಯಿತು. ಜಗತ್ಪ್ರಸಿದ್ಧ ಚಿಂತಕ ಜಿಡ್ಡು ಕೃಷ್ಣಮೂರ್ತಿಯವರನ್ನು ಮತ್ತು ಅವರ ಸೋದರನಿಗೆ ಅನಿಬೆಸೆಂಟ್ ಶಿಕ್ಷಣ ನೀಡಲು ಏರ್ಪಾಡು ಮಾಡಿದರು. ಕೆಲ ಕಾಲಾನಂತರ ಜಿಡ್ಡು ಕೃಷ್ಣ ಮೂರ್ತಿಗಳ ತಂದೆ ನಾರಾಯಣಯ್ಯ 1914ರಲ್ಲಿ ಅನಿಬೆಸಂಟರ ವಿರುದ್ಧ ದಾವೆ ಹೂಡಿ, ಮಕ್ಕಳನ್ನು ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಆಗ ಅವರ ವಕೀಲರಾಗಿದ್ದವರು ರಾಮಸ್ವಾಮಿ ಅಯ್ಯರರು. ಅನಿಬೆಸಂಟ್ ಸ್ವತಃ ತಮ್ಮ ಪರವಾಗಿ ತಾವೇ ನ್ಯಾಯಾಲಯದಲ್ಲಿ ವಾದ ಮಾಡಿದರು. ಈ ಮೊಕದ್ದಮೆಯಲ್ಲಿ ಮದರಾಸ್ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಡಾ.ಎಸ್.ಸುಬ್ರಹ್ಮಣ್ಯ ಅಯ್ಯರ್ ಮತ್ತು ಬನಾರಸ್‌ನ ಪ್ರಸಿದ್ಧ ತತ್ವಜ್ಞಾನಿ ಡಾ.ಭಗವಾನ್ ದಾಸರನ್ನು ಸರ್.ಸಿ.ಪಿ.ಆರ್. ಪಾಟೀ ಸವಾಲು ಮಾಡಿದ್ದು ವಿಶೇಷ. ಈ ಮೊಕದ್ದಮೆಯಲ್ಲಿ ಸರ್.ಸಿ.ಪಿ.ಯವರು ಗೆದ್ದರೂ ಪ್ರೀವೀ ಕೌನ್ಸಿಲ್‌ನಲ್ಲಿ ಅನಿಬೆಸಂಟ್ ಗೆದ್ದರು. ಈ ಸಂದರ್ಭದಲ್ಲಿ ಅನಿಬೆಸೆಂಟ್ ಬೇಕೆಂದೇ ಈ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಒಂದು ಆಜ್ಞೆಯನ್ನು ಉಲ್ಲಂಘಿಸಿದರು. ನಾರಾಯಣಯ್ಯನವರು ನ್ಯಾಯಾಲಯಕ್ಕೆ ಮನವಿ ಮಾಡಿ ಅನಿಬೆಸೆಂಟರನ್ನು ಬಂಧಿಸಿ ಸೆರೆಮನೆಗೆ ಕಳುಹಿಸಲು ಕೋರಿದರು. ಆದರೆ, ಸಿ.ಪಿ.ಆರ್. ಪ್ರತೀಕಾರದ ಮನೋಭಾವ ಒಳ್ಳೆಯದಲ್ಲವೆಂದು ತಮ್ಮ ಕಕ್ಷಿದಾರನಿಗೆ ಎಚ್ಚರಿಸಿದರು. ಅನಿಬೆಸೆಂಟರಿಗೆ ವಿಷಯ ತಿಳಿದು ತಮ್ಮ ಕಕ್ಷಿದಾರನ ಮಾತಿನಂತೆ ನಡೆಯುವುದು ನ್ಯಾಯವಾದಿಗಳ ಕರ್ತವ್ಯವೆಂದು ತಿಳಿಸಿ, ರಾಮಸ್ವಾಮಿಯವರ ಆದರ್ಶ ನಡವಳಿಕೆಯನ್ನು ಶ್ಲಾಘಿಸಿದರು. ದಾವೆ ಮುಗಿದಾದ ಮೇಲೆ ಅವರಿಬ್ಬರೂ ರಾಷ್ಟ್ರೀಯ ಶಿಕ್ಷಣ ಮತ್ತು ಹೋಂರೂಲ್ ಚಳವಳಿಯಲ್ಲಿ ಒಟ್ಟಿಗೆ ಕೆಲಸ ಮಾಡಿ ಉತ್ತಮ ಗೆಳೆಯರೂ ಆದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ