ಸಮಾನಾಂತರ ನ್ಯಾಯ ವ್ಯವಸ್ಥೆ ನ್ಯಾಯಮೂರ್ತಿ ಆತಂಕ
ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮಹತ್ವದ ವಿಷಯಕ್ಕೂ ಒಂದು ವಿಶೇಷ ಟ್ರಿಬ್ಯೂನಲ್ ಅಥವಾ ಪಂಚಾಯಿತಿಗಳನ್ನು ನೇಮಿಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿರುವಂತಿದೆ ಎನ್ನುವ ಅನಿಸಿಕೆ ಸುಪ್ರೀಮ್ ಕೋರ್ಟಿನಲ್ಲಿ ಗುರುವಾರ ಪ್ರಕಟವಾಗಿದ್ದ ಒಂದು ಒಳ್ಳೆಯ ವಿಚಾರವೇ.
ಈ ಪ್ರವೃತ್ತಿಯಿಂದ ದೇಶದಲ್ಲಿ ಕೇಂದ್ರ ಸರ್ಕಾರ ಒಂದು ರೀತಿಯಲ್ಲಿ ಪರ್ಯಾಯ ಅಥವಾ ಸಮಾನಾಂತರ ನ್ಯಾಯ ವಿತರಣೆಯ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಯತ್ನ ನಡೆಸಿದೆ ಎನ್ನುವ ಶಂಕೆಗೆ ಅವಕಾಶವಾಗುವುದಿಲ್ಲವೇ ಎನ್ನುವ ಪ್ರಶ್ನೆ ನ್ಯಾಯಪೀಠದಿಂದಲೇ ಮೂಡಿ ಬಂದಿತ್ತು.
ನಿಜ. ಸುಪ್ರೀಮ್ ಕೋರ್ಟಿನ ಮುಂದೆ ಇಂತಹ ಪ್ರಸ್ತಾಪ ನೇರವಾಗಿ ಮಂಡನೆಯಾಗಿಲ್ಲ, ಆದರೆ ಅನೇಕ ವಲಯಗಳಲ್ಲಿ ಟ್ರಿಬ್ಯೂನಲ್ ಮತ್ತು ವಿಶೇಷ ಪಂಚಾಯಿತಿಗಳ ನೇಮಕ ಕುರಿತ ಅಸಮಾಧಾನ ಇರುವುದಂತೂ ನಿಜ.
ದೊಡ್ಡ ಸಂಖ್ಯೆಯಲ್ಲಿ ಸರ್ಕಾರ ವಿಶೇಷ ಟ್ರಿಬ್ಯೂನಲ್ಗಳನ್ನು ನೇಮಿಸುವುದರಿಂದ ಸಂವಿಧಾನದಲ್ಲಿ ಅಳವಡಿಸಿರುವಂತೆ ನ್ಯಾಯದಾನ ಪದ್ಧತಿ ಕುರೂಪವಾಗುವುದನ್ನು ತಡೆಗಟ್ಟಬೇಕೆನ್ನುವ ಬೇಡಿಕೆ ಒಂದು ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯ ಮನವಿ ಮೂಲಕ ಪ್ರಸ್ತಾಪವಾಗಿದೆ. ಆ ಅರ್ಜಿಯ ವಿಚಾರಣೆಯ ಕಾಲದಲ್ಲಿ ನ್ಯಾಯಪೀಠ ಪ್ರಾಸಂಗಿಕವಾಗಿ ಆಡಿದ ಮಾತದು. ಸದ್ಯಕ್ಕೆ ಅದಕ್ಕೆ ಹೆಚ್ಚಿನ ಪ್ರಾಮುಖ್ಯ ಇಲ್ಲ.
ಕೇಂದ್ರ ಸರ್ಕಾರದ ಪರವಾಗಿ, ಸುಪ್ರೀಮ್ ಕೋರ್ಟಿನಲ್ಲಿ ಹಾಜರಾಗಿ, ನ್ಯಾಯಾಲಯ ಹಾಗೂ ನ್ಯಾಯಾಂಗದ ಪಾವಿತ್ರ್ಯ ಹಾಗೂ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದಕ್ಕೆ ಸರ್ಕಾರದ ಬದ್ಧತೆ ಕುರಿತು ಭರವಸೆ ನೀಡಿದ್ದು, ಆತಂಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದರೂ ಇಂತಹ ಚಿಂತನೆ ಕೆಲವರ ಮನಸ್ಸಿನಲ್ಲಿ ಮೂಡಿರುವ ಸಂಶಯ ಇದ್ದೇ ಇದೆ.
ಟ್ರಿಬ್ಯೂನಲ್ಗಳನ್ನು ನೇಮಿಸುವ ಸರ್ಕಾರ, ಅದಕ್ಕೆ ಒಬ್ಬ ಸೂಕ್ತ ನ್ಯಾಯಾಧೀಶರ ಹೆಸರನ್ನು ಸಲಹೆ ಮಾಡಲು ಸುಪ್ರೀಮ್ ಕೋರ್ಟನ್ನೇ ಕೇಳಿಕೊಳ್ಳುವುದು ಸಹಜ. ಸರ್ಕಾರ ಅಲ್ಲಿ ಬೇರೆ ಯಾವ ಮಾರ್ಗವನ್ನು ಅನುಸರಿಸಿದರೂ, ಅಲ್ಲಿ ಸ್ವಜನ ಪಕ್ಷಪಾತದ ಆರೋಪ ಬರಬಹುದು.
ಟ್ರಿಬ್ಯೂನಲ್ಗಳಿಗೆ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದಾದರೆ, ಸೂಕ್ತ ವ್ಯಕ್ತಿಗಳನ್ನು ಹುಡುಕುವುದು ಕಷ್ಟ. ಟ್ರಿಬ್ಯೂನಲ್ನ ಅಧ್ಯಕ್ಷರ ಕೆಲಸ ಎಂದರೆ ವಿಶೇಷ ಕಾಯಿದೆಗಳ ಪಾಂಡಿತ್ಯ ಹಾಗೂ ವಿವಾದಗಳ ಅರಿವಿರಬೇಕು. ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳ ನಿವೃತ್ತಿಯ ವಯಸ್ಸು 65. ಟ್ರಿಬ್ಯೂನಲ್ಗಳಲ್ಲಿ ಅವರು 68ನೇ ವಯಸ್ಸಿನವರೆಗೂ ಕೆಲಸ ಮಾಡಬಹುದಷ್ಟೇ. ಅದರಲ್ಲಿ ಪರಿಣತರಿಗೆ ಆಸಕ್ತಿ ಇರುವುದಿಲ್ಲ. ಆಸಕ್ತಿ ಇರುವವರಿಗೆ ಪರಿಣತಿ ಇರುವುದಿಲ್ಲ. ಹೀಗಾಗಿ ಸೂಕ್ತ ನ್ಯಾಯಾಧೀಶರು ಸಿಗುವುದು ಕಷ್ಟ. ನಿವೃತ್ತ ನ್ಯಾಯಾಧೀಶರಿಗೆ ಪಂಚಾಯಿತಿ ಕೆಲಸದಲ್ಲೇ ಆಸಕ್ತಿ ಹೆಚ್ಚು ಎನ್ನುವುದು ಮುಖ್ಯ ನ್ಯಾಯಮೂರ್ತಿ ಲೋಧಾ ಅವರ ಅಭಿಪ್ರಾಯ.
ನ್ಯಾಯಪೀಠದ ಮುಂದೆ ಸರ್ಕಾರವನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರ ಪ್ರಕಾರ ಸರ್ಕಾರದ ಉದ್ದೇಶ ಕ್ಷಿಪ್ರ ನ್ಯಾಯ ವಿತರಣೆ. ಸುಪ್ರೀಮ್ ಕೋರ್ಟಿನ ಕಾರ್ಯವ್ಯಾಪ್ತಿಯನ್ನಾಗಲಿ, ದಕ್ಷತೆಯನ್ನಾಗಲಿ ಪ್ರಶ್ನಿಸುವ ಪ್ರಶ್ನೆ ಇಲ್ಲವೇ ಇಲ್ಲ.
ಸುಪ್ರೀಮ್ ಕೋರ್ಟಿನ ಸಂವಿಧಾನ ಪೀಠಕ್ಕೆ ಅಟಾರ್ನಿ ಜನರಲ್ ರೋಹಟಗಿ ಅವರ ಭರವಸೆ ಎಷ್ಟರಮಟ್ಟಿದೆ ವಿಶ್ವಾಸವನ್ನು ಮೂಡಿಸಿತೋ ಗೊತ್ತಿಲ್ಲ. ಇದೊಂದು ಗಂಭೀರವಾದ ಪ್ರಶ್ನೆ. ಒಂದೆರಡು ದಿನಗಳಲ್ಲಿ ಇತ್ಯರ್ಥವಾಗುವುದಿಲ್ಲ.