ಸಭಾಧ್ಯಕ್ಷರ ಅವಹೇಳನ ಸಲ್ಲದು
ಇತ್ತೀಚಿನ ದಿನಗಳಲ್ಲಿ ಸಂಸದೀಯ ಸದನಗಳ ಅಧ್ಯಕ್ಷ ಪೀಠದಲ್ಲಿ ಕೂತವರನ್ನು ಸದಸ್ಯರು ಹಾಗೂ ಪಕ್ಷಗಳು ತರಾಟೆಗೆ ತೆಗೆದುಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಪ್ರವೃತ್ತಿಗೆ ಪ್ರಾಯಶಃ ಅನೇಕ ಸಭಾಪತಿಗಳು ಸದನದ ಕಾರ್ಯಕಲಾಪದ ವಿಚಾರದಲ್ಲೂ ರಾಜಕೀಯ ಮಾಡಲು ಹೊರಟಿದ್ದೂ ಕಾರಣ ಇರಲೂಬಹುದು.
ಸಭಾಪತಿಯಾಗಿದ್ದವರು ಮುಖ್ಯಮಂತ್ರಿ, ಮಂತ್ರಿಗಳಾದ ಉದಾಹರಣೆಗಳೂ ಇವೆ. ಹಿಂದಿನಂತೆ, ಈಗ ಸಭಾಧ್ಯಕ್ಷರ ಸ್ಥಾನ ನಿವೃತ್ತಿಯ ದಾರಿಯ ಮೊದಲ ಮೆಟ್ಟಿಲೇನೂ ಅಲ್ಲ. ಆದರೂ ಸಭಾಧ್ಯಕ್ಷರ ಪೀಠಕ್ಕೂ ಗೌರವ ಕೊಡದವರು ಸಂಸದೀಯ ಸಜ್ಜನಿಕೆಯನ್ನು ಗೌರವಿಸುತ್ತಾರೆ ಎನ್ನುವಂತಿಲ್ಲ. ಸಭಾಧ್ಯಕ್ಷರನ್ನು ಗೌರವದಿಂದ ಕಾಣುವುದು ಆರೋಗ್ಯಕರ ಜನತಾಂತ್ರಿಕ ಸಂಸದೀಯ ವ್ಯವಸ್ಥೆಯ ಒಂದು ಲಕ್ಷಣ.
ಈಗ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಸ್ಪೀಕರ್ ಸಮಿತ್ರಾ ಮಹಾಜನ್ ಅವರ ವಿರುದ್ಧ ಹೂಡಿರುವ ಸಮರವನ್ನೇ ಗಮನಿಸಿದರೆ, ಆ ಪಕ್ಷದ ಈಗಿನ ಮನೋಧರ್ಮ ಅರ್ಥವಾಗಬಹುದು. ಈಗ ಕಾಂಗ್ರೆಸ್ಸಿಗರು ಸುಮಿತ್ರಾ ಮಹಾಜನ್ ವಿರುದ್ಧ ಮಾಡುತ್ತಿರುವ ಆರೋಪವಾದರೂ ಏನು? ಅವರು ಕಾಂಗ್ರೆಸ್ಸಿಗೆ ಲೋಕಸಭೆಯಲ್ಲಿ ಪ್ರತಿಪಕ್ಷದ ಸ್ಥಾನ-ಮಾನ ನೀಡಿ, ಅದರ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತಿಪಕ್ಷದ ನಾಯಕರೆನ್ನುವ ಮನ್ನಣೆ ನೀಡದೇ ಇರುವ ವಿಚಾರದಲ್ಲಿ ಬರೆದಿರುವ ಪತ್ರವನ್ನು ಸರ್ಕಾರದ ಜತೆ ಸಮಾಲೋಚನೆ ನಡೆಸಿ, ಪರಿಶೀಲಿಸಿದ ಅನಂತರ ನಿರ್ಧಾರ ಪ್ರಕಟಿಸುವುದಾಗಿ ಹೇಳುವುದು ಸರ್ಕಾರದ ಇಂಗಿತವನ್ನು ಅನುಸರಿಸುವ ತಂತ್ರ ಎನ್ನುವುದೇ. ಕಾಂಗ್ರೆಸ್ ಸಂಸದೀಯ ಪಕ್ಷದ ಉಪನಾಯಕ ಅಮರೇಂದ್ರ ಸಿಂಗ್ ಅವರ ಪ್ರಕಾರ ಸರ್ಕಾರದೊಡನೆ ಸಮಾಲೋಚನೆಗೆ ಮುಂದಾಗುವುದು ಎಂದರೆ ಸರ್ಕಾರ ಹೇಳಿದ್ದನ್ನು ಕೇಳುವುದು ಎಂದೇ ಅರ್ಥ. ಈ ಮಾತನ್ನು ಅವರು ಸದನದ ಹೊರಗಡೆ ಆಡಿದ್ದಾರೆ. ಸದನದ ಒಳಗೇ ಇಂತಹ ಮಾತು ಪ್ರಕಟವಾಗಿದ್ದರೆ ಅದನ್ನು ನಿಭಾಯಿಸಲು ಸ್ಪೀಕರ್ಗೆ ನೆರವಾಗುವ ನಿಯಮಗಳಿವೆ. ಆದರೆ ಸದನದ ಹೊರಗಡೆ ಮಾಡಿದರೆ ಕ್ರಮ ಕೈಗೊಳ್ಳುವುದು ಕಷ್ಟ.
ಲೋಕಸಭೆಯ ಸದಸ್ಯರ ಸಂಖ್ಯೆಯ ಶೇಕಡಾ 10ರಷ್ಟು ಸ್ಥಾನಗಳನ್ನೂ ಪಡೆಯದಿರುವ ಪಕ್ಷಕ್ಕೆ ಪ್ರತಿಪಕ್ಷದ ಸ್ಥಾನ ಕೇಳುವ ಹಕ್ಕಿಲ್ಲ ಎಂದು ಸ್ಪೀಕರ್ ಮಾವಲಂಕರ್ ನೀಡಿರುವ ತೀರ್ಪೇ ಲೋಕಸಭೆಯ ಸಂಪ್ರದಾಯ- ಅದು ಸಂವಿಧಾನದಲ್ಲಿ ಇರುವ ಅಥವಾ ಇಲ್ಲದಿರುವುದು ಮುಖ್ಯವಲ್ಲ. 1952 ರಿಂದ 1967ರ ವರೆಗೂ ಈ ಕಾರಣಕ್ಕಾಗಿಯೇ ಯಾವ ಪಕ್ಷಕ್ಕೂ ವಿರೋಧ ಪಕ್ಷದ ಮನ್ನಣೆ ಇರಲಿಲ್ಲ. ಆಗೆಲ್ಲ ಇದ್ದಿದ್ದು ಕಾಂಗ್ರೆಸ್ ಸರ್ಕಾರವೇ. ಈಗ ಕಾಂಗ್ರೆಸ್ಸಿಗೆ, ಹಿಂದೆ ಇತರ ಪಕ್ಷಗಳಿಗೆ ಅನ್ವಯವಾದ ನಿಯಮವೇ ಅನ್ವಯವಾಗಬಾರದೇ? ಅಧಿಕೃತ ಮನ್ನಣೆ ಹಾಗೂ ವೇತನ-ಭತ್ಯೆ, ಇತರ ಸೌಲಭ್ಯಗಳನ್ನು ಬಿಟ್ಟು, ಸದನದ ಕಲಾಪದಲ್ಲಿ, ಈಗಲೂ ಅನಧಿಕೃತವಾಗಿ ಸಮಿತ್ರಾ ಮಹಾಜನ್ ಕಾಂಗ್ರೆಸ್ಸಿಗೆ ಆ ಸ್ಥಾನವನ್ನು ನೀಡಿರುವುದೂ ನಿಜ. ಆದರೂ ಕಾಂಗ್ರೆಸ್ ಸ್ಪೀಕರ್ ಮೇಲೆ ಎರಗುವುದೆಂದರೇನರ್ಥ?
ಅದೇ ರೀತಿ ಈಚೆಗೆ, ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಸಭಾಪತಿ ಶಂಕರಮೂರ್ತಿ ಅವರು ರಾಜಕೀಯ ಪಕ್ಷ ಆಧರಿತ ಪಕ್ಷಪಾತ ಮಾಡುತ್ತಿದ್ದಾರೆಂದು, ನಾಮಕರಣ ಸದಸ್ಯ ವಿ.ಎಸ್. ಉಗ್ರಪ್ಪ ಅವರು ಆರೋಪಿಸಿದ್ದೂ ಅಷ್ಟೆ. ಉಗ್ರಪ್ಪ ಅವರ ವರ್ತನೆಗೆ ಸದನದಲ್ಲಿ ಪಕ್ಷದ ನಾಯಕ ಎಸ್.ಆರ್. ಪಾಟೀಲರು ವಿಷಾದ ಸೂಚಿಸಿದ್ದು ಬೇರೆ ವಿಚಾರ.
ತುಂಬಾ ಹಿಂದೆ ವಿಧಾನ ಸಭೆಯ ಸ್ಪೀಕರ್ ವಿರುದ್ಧ ದೊಡ್ಡ ಪ್ರತಿಭಟನೆಗಳೇ ನಡೆದಿವೆ. ಉದಾಹರಣೆಗೆ ಡಿ.ಬಿ. ಚಂದ್ರೇಗೌಡರು ಸ್ಪೀಕರ್ ಆಗಿದ್ದಾಗ ಒಂದು ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಬಂಗಾರಪ್ಪ ಹಾಗೂ ಇತರರನೇಕರು ಸ್ಪೀಕರ್ ವೇದಿಕೆಯನ್ನೇರಿ ಕಾಗದದ ತುಂಡುಗಳನ್ನು ಅವರ ತಲೆಯ ಮೇಲೆ ಸುರಿದು ಅವಾಚ್ಯ ಶಬ್ದಗಳನ್ನು ಬಳಸಿದ್ದೂ ಆಗಿತ್ತು. ಅದು ತಪ್ಪೆಂದು ಅವರಿಗೇ ಅನಂತರ ಗೋಚರವಾಗಿರಬೇಕು. ಸದನಗಳ ಸಭಾಧ್ಯಕ್ಷಕರಿಗೆ ಸಲ್ಲಬೇಕಾದ ಮರ್ಯಾದೆಯನ್ನು ಸಲ್ಲಿಸದೇ ಅವಹೇಳನ ಮಾಡುತ್ತಲೇ ಇದ್ದರೆ ಕಾಲಕ್ರಮದಲ್ಲಿ ವ್ಯವಸ್ಥೆಯೇ ದುರ್ಬಲವಾಗುತ್ತದೆ. ಈ ಪ್ರವೃತ್ತಿ ನಿಲ್ಲಲೇಬೇಕು.