ಪಾದಚಾರಿಗಳ ಹಕ್ಕು ರಕ್ಷಿಸಿ
ಬೆಂಗಳೂರಿನಲ್ಲಿನ ಎಲ್ಲ ಪಾದಚಾರಿಗಳ ಪಥಗಳಲ್ಲೂ ಇರುವ ಅಡೆ-ತಡೆಗಳನ್ನೆಲ್ಲ ನಿವಾರಿಸಿ ರಸ್ತೆಗಳಲ್ಲಿ ಪಾದಚಾರಿಗಳ ಹಕ್ಕನ್ನು ರಕ್ಷಿಸಬೇಕೆಂದು ರಾಜ್ಯ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೀಡಿರುವ ಆದೇಶ ಒಂದು ರೀತಿಯಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಆದೇಶದ ರೂಪದಲ್ಲೇ ಇದೆ.
ಆ ಆದೇಶವನ್ನು ಜಾರಿಗೊಳಿಸಲು ಹೈಕೋರ್ಟ್ ಮೂರು ತಿಂಗಳ ಅವಧಿ ನೀಡಿದೆ. ಈ ವಿಚಾರದಲ್ಲಿ ಇನ್ನು ಮುಂದೆ ಯಾರಿಗೂ ಯಾವ ರೀತಿಯ ನೋಟೀಸನ್ನೂ ಕೊಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿರುವುದು ಸೂಕ್ತವಾದ ರಕ್ಷಣೆಯ ಮಾತು. ಆಗಲೇ ಬೇಕಾದ ಕೆಲಸ ಇದು.
ಈ ಸಮಯದಲ್ಲೇ ದೆಹಲಿ ಮೂಲದಿಂದ ಪ್ರಕಟವಾಗಿರುವ ಇನ್ನೊಂದು ವರದಿಯಂತೆ, ಸರ್ಕಾರವೇ ಈ ವಿಚಾರದಲ್ಲಿ ಮುಂದಾಗಿದೆ. ಆ ಕಾಯಿದೆಯ ಪ್ರಮುಖ ಉದ್ದೇಶ ರಸ್ತೆಗಳಲ್ಲಿ ಪಾದಚಾರಿಗಳ ಪ್ರಾಥಮಿಕ ಹಾಗೂ ಆದ್ಯತೆ ಆಧಾರದ ಹಕ್ಕನ್ನು ಮಾನ್ಯ ಮಾಡಲಾಗುವುದೆಂದೂ ಹೇಳಲಾಗಿದೆ. ಹಿಂದೆ, ಯುಪಿಎ ಸರ್ಕಾರ ಇದೇ ರೀತಿ ಬೀದಿ ಬದಿಯ ವ್ಯಾಪಾರಿಗಳ ಹಕ್ಕಿನ ರಕ್ಷಣೆಯನ್ನು ಕುರಿತು ವೀರಾವೇಶದಿಂದ ಮಾತಾಡಿತ್ತು. ಸರ್ಕಾರದ ಕಡತಗಳಲ್ಲಿ ಆ ಸಲಹೆಯೂ ಎಲ್ಲೋ ಒಂದು ಕಡೆ ಇರಲೇಬೇಕು.
ಕೊನೆಗೂ ರಾಜ್ಯಾಧಿಕಾರದ ದಂಡ ಹಿಡಿದವರು ಪಾದಚಾರಿಗಳ ಹಕ್ಕಿನ ವಿಚಾರವನ್ನು ಕಡೆಗಾಣಿಸಲಾಗದ ಸ್ಥಿತಿ ನಿರ್ಮಾಣವಾಗುತ್ತಿರುವುದು ನಿಜಕ್ಕೂ ಕ್ರಾಂತಿಕಾರಿ ವಿಚಾರವೇ. ಆದರೆ ಅದು ಕೆಲಸದಲ್ಲಿ ಪ್ರದರ್ಶನವಾದಾಗಲೇ ಅಭಿನಂದನೆಗೆ ಸಂಬಂಧಪಟ್ಟವರು ಅರ್ಹರಾಗುತ್ತಾರೆ.