ಅಧ್ಯಕ್ಷೀಯ ಮಾದರಿ ಚರ್ಚೆಗೆ ಸಕಾಲ
ಜವಾಹರ್ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಚಂದ್ರಶೇಖರ್ ಹಾಗೂ ಮುರಾರ್ಜಿ ದೇಸಾಯಿಯವರನ್ನು...
ಜವಾಹರ್ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಚಂದ್ರಶೇಖರ್ ಹಾಗೂ ಮುರಾರ್ಜಿ ದೇಸಾಯಿಯವರನ್ನು ಹೊರತುಪಡಿಸಿದ ಹಾಗೆ ಅನೇಕ ಪ್ರಧಾನಿಗಳು ಅಧಿಕಾರಕ್ಕೆ ಬರುವ ಮುನ್ನ ಎಂದೂ ದೇಶವನ್ನು ಸುತ್ತಾಡಿರಲಿಲ್ಲ. ದೇಶದ ಎಲ್ಲ ರಾಜ್ಯಗಳ ಸಮಸ್ಯೆಗಳು ಅಲ್ಲಿನ ಸಂಸ್ಕೃತಿ ಅಲ್ಲಿ ಜನರ ಬದುಕಿನ ಪರಿಚಯವೇ ಇರಲಿಲ್ಲ. ಆಕಸ್ಮಿಕವಾಗಿ ಅಥವಾ ಸಂದರ್ಭಕ್ಕೆ ಅನುಗುಣವಾಗಿ ಅನೇಕರು ಪ್ರಧಾನಿ ಪಟ್ಟವನ್ನು ಅಲಂಕರಿಸಿದ ಮೇಲೆ ತಮಗಿದ್ದ ಅಲ್ಪಕಾಲದಲ್ಲಿ ದೇಶವನ್ನು ಅರಿಯುವ ಪ್ರಯತ್ನವನ್ನು ಮಾಡಿದರು. 2014ರ ಚುನಾವಣೆ ನಿಜಕ್ಕೂ ಒಂದು ಹೊಸ ಅನುಭವವನ್ನು ದೇಶದ ಮತದಾರರಿಗೆ ನೀಡಿರುತ್ತದೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ರಾಮಕೃಷ್ಣ ಹೆಗಡೆಯವರು ಹಲವಾರು ದಶಕಗಳ ಹಿಂದೆ ಪ್ರಸ್ತಾಪಿಸಿದಂತಹ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವದ ವ್ಯವಸ್ಥೆಯ ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ಮೋದಿ ಹಾಗೂ ರಾಹುಲ್ ನಡುವೆ ರಾಷ್ಟ್ರಾದ್ಯಂತ ನಾಯಕತ್ವಕ್ಕೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾದದ್ದು ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿರುತ್ತದೆ.
ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿಯವರು ಸುಮಾರು 6 ತಿಂಗಳುಗಳ ಕಾಲ ದೇಶದ ಎಲ್ಲ ರಾಜ್ಯಗಳು, ಮತ್ತು ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಭಾಷಣ ಮಾಡಿದ್ದರ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದ ನಂತರ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟವಾದಂತಹ ಮಾಹಿತಿ ದೊರೆತಿರುತ್ತದೆ. ಭಾರತ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವವಿದ್ದರೂ ಸಹ ಚುನಾವಣೆಯ ಪ್ರಚಾರದ ವೈಖರಿ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆದು ಜನರ ಮಾತಿಗೆ ಇದು ಹಿತವೆನಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ದೇಶದಲ್ಲಿ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಚರ್ಚೆಗಳು ಆರಂಭವಾಗಲು ಇದು ಸಕಾಲವಾಗಿರುತ್ತದೆ. ದೇಶವನ್ನಾಳುವ ವ್ಯಕ್ತಿಗೆ ದೇಶದ ಎಲ್ಲ ಭಾಷೆಗಳ ಜನರ ಬದುಕಿನ ಪರಿಚಯವಿರಬೇಕು. ಅದೇ ರೀತಿಯಲ್ಲಿ ಮುಖ್ಯಮಂತ್ರಿಯಾಗುವವರಿಗೆ ಆ ರಾಜ್ಯದ ಎಲ್ಲ ವಿಚಾರಗಳ ಆಳವಾದ ಜ್ಞಾನ ಸಮಸ್ಯೆಗಳ ಗಾತ್ರ ಅದಕ್ಕೆ ಪರಿಹಾರದ ಮಾರ್ಗ ಇವು ತಿಳಿದಿರಬೇಕು. ಹಾಲಿ ನಮ್ಮಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವೊಂದು ಸಂದರ್ಭಗಳಲ್ಲಿ ದೇಶದ ಸಮಸ್ಯೆಯ ಅರಿವಿರದ ವ್ಯಕ್ತಿಗಳು, ರಾಜ್ಯದ ಚಿತ್ರಣದ ಅರಿವಿರದ ನಾಯಕರುಗಳು ಅಧಿಕಾರಕ್ಕೆ ಬಂದು ಅಧಿಕಾರಿಗಳ ಮಾಹಿತಿ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಿ ಅವುಗಳನ್ನು ಜನತೆಗೆ ಮೆಚ್ಚಿಸುವಲ್ಲಿ ವಿಫಲರಾಗಿರುತ್ತಾರೆ. 125 ಕೋಟಿ ಜನಸಂಖ್ಯೆಯುಳ್ಳ ಈ ದೇಶದಲ್ಲಿ ತನ್ನನ್ನು ಮುಂದೆ ಆಳುವ ವ್ಯಕ್ತಿ ಯಾರು ಎನ್ನುವುದು ಮುಂಚಿತವಾಗಿಯೇ ತಿಳಿಯುವುದು ನಿಜಕ್ಕೂ ಅವನಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಟ್ಟಂತಾಗುತ್ತದೆ.
ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಚರ್ಚಿಸಲ್ಪಟ್ಟಿದೆ. 2014ರ ಚುನಾವಣೆ ಮೇಲ್ನೋಟಕ್ಕೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬ ಅಭಿಪ್ರಾಯವಾದರೂ ಸಹ ನಿಜವಾಗಿ ನಡೆದಿರುವುದು ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ರೀತಿಯಲ್ಲಿ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. 1989ರಲ್ಲಿ ಆರಂಭವಾದಂತಹ ಬಹುಪಕ್ಷೀಯ ಸರ್ಕಾರಗಳು ಹೋಗಿ ಎರಡೂವರೆ ದಶಕಗಳ ನಂತರ ಏಕಪಕ್ಷೀಯ ಸರ್ಕಾರ ಬಂದಿರುತ್ತದೆ. ಭಾರತ ದೇಶದಲ್ಲಿ ಒಕ್ಕೂಟ ಸರ್ಕಾರಗಳು ಮತ್ತು ಬಹುಪಕ್ಷದ ಬೆಂಬಲಿತ ಸರ್ಕಾರದ ವ್ಯವಸ್ಥೆಗಳ ಬಗ್ಗೆ ಜನತೆ ವಿಶ್ವಾಸವನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಏಕಪಕ್ಷದ ಸರ್ಕಾರಕ್ಕೆ ಬಹುಮತವನ್ನು ನೀಡಿರುವುದು ಸಹ ಜನರ ಮತ್ತೊಂದು ಆಶಯವಾಗಿರುತ್ತದೆ.
-ಕೆ.ಎಸ್. ನಾಗರಾಜ್, ಬೆಂಗಳೂರು.
ಸಮಾಜ ಪರಿವರ್ತನೆ ಕೆಳಸ್ತರದಿಂದಲೂ ಆಗಲಿ
ಆರ್.ಕೆ. ಗೌಡ ಮಧುಗಿರಿಯವರು ಬರೆದ 14 ಸೂತ್ರದಂತೆ (ಕ.ಪ್ರ. 30/5) ಶುದ್ಧ ಸಮಾಜ ನಿರ್ಮಾಣ ಕಾರ್ಯ ಮೇಲ್ಸ್ತರದಿಂದ ನಡೆದು ಬರಬೇಕೆಂಬ ಅಪೇಕ್ಷೆ ತರವಲ್ಲ. ಆ ಮಹಾನ್ ಕಾರ್ಯದಲ್ಲಿ, ಯಜ್ಞದಲ್ಲಿ ಜನಸಾಮಾನ್ಯರೆಲ್ಲರ ಪಾಲ್ಗೊಳ್ಳುವಿಕೆ ಮುಖ್ಯ. ತಾನೊಬ್ಬ ಬಿಟ್ಟು ಮಿಕ್ಕುಳಿದವರೆಲ್ಲ ಮಾಡಲಿ ಎಂಬ ಮನೋಭಾವ, ಪಲಾಯನ ಪ್ರವೃತ್ತಿ ಬಿಟ್ಟು ಎಲ್ಲರೂ ಒಂದಾಗಿ, ಎಲ್ಲರೊಳಗೊಂದಾಗಿ ತಂತಮ್ಮ ನಾಗರಿಕ ಕರ್ತವ್ಯಗಳನ್ನು ನಿಭಾಯಿಸಿದಾಗಲಷ್ಟೇ ಭಾರತದ ಏಳ್ಗೆ ಸಾಧ್ಯ. ಮೋದಿಯವರ ಕನಸಿನ ಭಾರತ ನಿರ್ಮಾಣಕ್ಕೆ ಪ್ರತಿಪ್ರಜೆಯ ಕಾಣಿಕೆ ಬೇಕೇ ಬೇಕು. ಪ್ರತಿಯೋರ್ವ ನಾಗರಿಕನೂ ತಾನೀಗ ಓರ್ವ ಮೋದಿ ಅನ್ನುವ ಮನಃಸ್ಥಿತಿಯನ್ನು ಹೊಂದಿದರೆ ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿ ಸಾಗಿಯೇ ಸಾಗುತ್ತದೆ. ಮೋದಿಯವರಿಗೆ ಮಾಂತ್ರಿಕ ಸಂಖ್ಯೆ 282 ಬಹುಮತವನ್ನಿತ್ತು ಅವರ ಕೈ ಬಲಪಡಿಸಿದುದೇನೋ ಸರಿ. "ಯಥಾರಾಜಾ ತಥಾ ಪ್ರಜಾ" ಅನ್ನುವುದನ್ನು ನಾವೀಗ ಸಾದೃಶಪಡಿಸಬೇಕಾದ ಕಾಲ ಒದಗಿ ಬಂದಿದೆ.
-ಎನ್.ಡಿ. ಕಾರಂತ, ಮೈಸೂರು
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com