ರಿಸರ್ವ್ ಬ್ಯಾಂಕ್: ಸಾಮಯಿಕ ನೀತಿ
ಮಂಗಳವಾರ, ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ ರಾಜನ್ ಅವರು ಪ್ರಕಟಿಸಿದ ಹಣ ನೀತಿ. ನರೇಂದ್ರ ಮೋದಿ ಅವರು...
ಮಂಗಳವಾರ, ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ ರಾಜನ್ ಅವರು ಪ್ರಕಟಿಸಿದ ಹಣ ನೀತಿ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಅನಂತರದ ಮೊದಲ ನೀತಿ - ಚುನಾವಣೆ ಪ್ರಚಾರ ಕಾಲದಲ್ಲಿ ಅಭ್ಯುದಯ ಕುರಿತು ನರೇಂದ್ರ ಮೋದಿ ಅವರು ಸಾಕಷ್ಟು ಮಾತಾಡಿದ್ದಾರೆ. ಅಭ್ಯುದಯಕ್ಕೆ ಬೆಂಬಲ ಕೊಡುವ ನೀತಿಗೆ ಪೂರಕವಾಗಿ ಬಡ್ಡಿ ದರಗಳ ಇಳಿತದ ಸಂಭವವಿದೆ ಎಂದು ಕೆಲವರ ಅಭಿಪ್ರಾಯ.
ಆದರೆ ರಿಸರ್ವ್ ಬ್ಯಾಂಕಿನ ಮೊದಲ ಆದ್ಯತೆ ಹಣದ ಅತಿಪ್ರಸರಣದ ವೇಗದ ನಿಯಂತ್ರಣಕ್ಕೆ. ಆದ್ದರಿಂದ ಅವರು ಬಡ್ಡಿ ದರವನ್ನು ಬದಲಾಯಿಸಲಿಲ್ಲ. ಇದು ನೂತನ ಸರ್ಕಾರದ ಅವಧಿಯ ಮೊದಲ ಪ್ರಕಟಣೆಯಾದ್ದರಿಂದ ಅಭ್ಯುದಯ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡುವ ನಿರೀಕ್ಷೆ ಇತ್ತು. ಅದು ವಾಸ್ತವದಲ್ಲಿ ಪೇಟೆಯ ನಿರೀಕ್ಷೆ, ವಾಣಿಜ್ಯ ಉದ್ಯಮಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗುವ ಅಂಶಗಳು ಪ್ರಕಟವಾಗುವ ಭರವಸೆ ಇತ್ತು. ಅವರನ್ನು ರಘುರಾಮ ರಾಜನ್ ನಿರಾಶರನ್ನಾಗಿ ಮಾಡಲಿಲ್ಲ.
ಬ್ಯಾಂಕ್ಗಳು ರಿಸರ್ವ್ ಬ್ಯಾಂಕಿನಲ್ಲಿ ಕಡ್ಡಾಯವಾಗಿ ಇಡಲೇಬೇಕಾದ ಠೇವಣಿಯ ಪ್ರಮಾಣವನ್ನು ಕಡಿಮೆ ಮಾಡುವುದರ ಮೂಲಕ ರಿಸರ್ವ್ ಬ್ಯಾಂಕ್ ಈಗ ಸುಮಾರು 40,000 ಕೋಟಿ ರುಪಾಯಿಗಳನ್ನು ಬ್ಯಾಂಕ್ಗಳ ವಶದಲ್ಲೇ ಬಿಟ್ಟು ಸಾಲದ ವ್ಯವಹಾರದ ಹೆಚ್ಚಳಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಪ್ರಾಯಶಃ ಈ ಅಂಶವೇ ಪೇಟೆಯಲ್ಲಿ ಪ್ರಮುಖ ಸೂಚ್ಯಂಕಗಳು ಜಿಗಿಯಲು ಕಾರಣವಾಗಿರಬಹುದು. ಆದರೆ ಕೆಲವು ವರದಿಗಳ ಪ್ರಕಾರ, ಒಳ್ಳೆಯ ಭದ್ರ ಯೋಜನೆಗಳಿಗೆ ಸಾಲ ಕೇಳಿಕೊಂಡು ಬ್ಯಾಂಕ್ಗಳಿಗೆ ಬರುವ ಬೃಹತ್ ಉದ್ಯಮಿಗಳ ಸಂಖ್ಯೆ ಕಡಿಮೆಯಾಗಿದೆ. ಅಧಿಕ ಸಾಲ ಕೊಡಲಿಕ್ಕೆ ಬ್ಯಾಂಕ್ಗಳಲ್ಲಿ ಹಣವಿದೆ. ಆದರೆ ಈಗಿನ ಬಡ್ಡಿ ದರದಲ್ಲಿ ಅದಕ್ಕೆ ಹೆಚ್ಚು ಬೇಡಿಕೆ ಇದ್ದಂತಿಲ್ಲ. ಆದರೂ ರಿಸರ್ವ್ ಬ್ಯಾಂಕ್ ತನ್ನ ಕೆಲಸವನ್ನು ಮಾಡಿದೆ ಎನ್ನಬಹುದು. ಈಗ ಉಳಿದಿರುವುದು ಸರ್ಕಾರ ಮತ್ತು ವಾಣಿಜ್ಯೋದ್ಯಮಿಗಳು ಮಾಡಬೇಕಾದ ಕೆಲಸ. ಸದ್ಯಕ್ಕೆ ಅನಿಶ್ಚಿತ ಸ್ಥಿತಿಯಂತೂ ಕೊನೆಗೊಂಡಿದೆ.
ಹಣದ ಅತಿಪ್ರಸರಣದ ಏರಿಕೆಗೆ (ಇನ್ಫ್ಲೇಷನ್) ನೆರವು ನೀಡುವ ನೀತಿಯನ್ನು ಸರ್ಕಾರ ಕೈ ಬಿಡುವವರೆಗೂ ರಿಸರ್ವ್ ಬ್ಯಾಂಕಿನ ನೀತಿ ಬದಲಾಗಲಿಕ್ಕಿಲ್ಲ. ಇನ್ಫ್ಲೇಷನ್ - ಅಭ್ಯುದಯಗಳ ನಡುವೆ ಸಮತೋಲನ ಕಾಪಾಡುವ ಉದ್ದೇಶ ರಿಸರ್ವ್ ಬ್ಯಾಂಕ್ ಹಾಗೂ ಸರ್ಕಾರಗಳಿಂದ ಪ್ರಕಟವಾಗಿದೆ. ಮುಂದಿನದನ್ನು ನೋಡಬೇಕಷ್ಟೇ.