ತಪ್ಪಾಯ್ತು ತಿದ್ಕೋತೀವಿ
ದೊಡ್ಡಬಳ್ಳಾಪುರದಿಂದ ರಾಘವೇಂದ್ರ ವಿಶ್ವಕರ್ಮ ಅವರು ಬರೆಯುತ್ತಾರೆ- 'ಮೇ 21ರ 'ಬೈಟುಕಾಫಿ'ಯಲ್ಲಿ 'ಕೆಲ್ಸದೋಳು ಕೈಯಲ್ಲಿ ಮಗೂನ ಕೊಟ್ರಾ?' ಶೀರ್ಷಿಕೆಯಲ್ಲಿ ಪ್ರಕಟವಾದ ಬರಹದಲ್ಲಿ ಖ್ಯಾತ ಪತ್ರಕರ್ತೆ ಮತ್ತು ಕಾದಂಬರಿಕಾರ್ತಿ '"I oD t K no w Rd DßéDdsÚIt'' ಎಂದಿದೆ. ಇದರರ್ಥವೇನು? ವಿಷಯದ ಪರವಾಗಿ ವಾದಿಸಿದರೆ ಎಂದು ಇದೆ. ಯಾವ ಕಾದಂಬರಿಕಾರ್ತಿ ಮತ್ತು ಯಾವ ವಿಷಯದ ಪರವಾಗಿ ವಾದಿಸುವುದು? ದಯವಿಟ್ಟು ತಿಳಿಸುವಿರಾ? ಮತ್ತು ಇದೇ ಬರಹದಲ್ಲಿ 'ವಾದ ಮಡಿಸಿದರು' ಎಂದಿದೆ. ಅದು ವಾದ ಮಂಡಿಸಿದರು ಎಂದಿರಬೇಕಲ್ಲವೇ?' ಎಂದಿದ್ದಾರೆ.
ಕಾದಂಬರಿ ಹೆಸರು 'ಐ ಡೋಂಟ್ ನೋ ಹೌ ಶೀ ಡಸ್ ಇಟ್' ((I don't know how she does it) ಎಂದು. ಲೇಖಕಿ ಹೆಸರು Allison Pearson. ಇಂಗ್ಲಿಷ್ನಲ್ಲಿಯೇ ಬರೆಯಲಾಗಿತ್ತು. ಅದನ್ನು ಪುಟಕ್ಕೆ ಅಳವಡಿಸುವಾಗ ಅದು ಕನ್ನಡ ಫಾಂಟ್ ಆಗಿ ಪರಿವರ್ತನೆಗೊಂಡಿದ್ದರಿಂದ ಅದೇನು ಎಂದು ಓದಲು ಸಾಧ್ಯವಾಗದಂತಾಗಿದೆ.
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಮೇ 21ರ 'ನಮೋಸ್ತುತೆ' ಪುಟ 7ರಲ್ಲಿ ರಾಜಸ್ಥಾನದ ವಸುಂಧರಾ ಅವರಿಂದ ಶುಭಾಷಯ ಹೇಳಲು ಪ್ರೇರೇಪಿಸಿದ್ದೀರಿ! ಬೇಡ, ಶುಭಾಶಯ ಹೇಳಿದರು ಎಂದು ತಿದ್ದಿಕೊಳ್ಳೋಣ!'
'ಶುಭಆಶಯ = ಶುಭಾಶಯ ಎಂದಾಗುತ್ತದೆ. 'ಶುಭಾಶಯ' ಪದಗುಚ್ಛದಲ್ಲಿ 'ಶುಭ' ಮತ್ತು 'ಆಶಯ' ಎಂಬ ಪದಗಳಿವೆ ಎಂಬುದರ ಪರಿಕಲ್ಪನೆ ಇಲ್ಲದೆ, 'ಶು' ಜೊತೆಗೆ 'ಭಾಷ್' (ಮಾತನಾಡು, ಸಂಭಾಷಣೆ) ಪದ ಸೇರಿದೆಯೇನೋ ಎಂಬ ತಪ್ಪು ಕಲ್ಪನೆಯಿಂದ 'ಶುಭಾಷಯ' ಎಂದು ತಪ್ಪಾಗಿ ಬಳಕೆಯಾಗುತ್ತದೆ. ಆದರೆ 'ಸಂಭಾಷಣ' ಸಂಭಾಷಣ ಎಂದಾಗುತ್ತದೆ. ಕನ್ನಡೀಕರಣದಿಂದ ಸಂಭಾಷಣೆ ಆಗುತ್ತದೆ.'
"ಸುಭಾಷಿತ' ಪದವನ್ನೂ ಗೊಂದಲದಿಂದ 'ಶುಭಾಷಿತ' ಎಂದು ತಪ್ಪಾಗಿ ಬಳಸುತ್ತಾರೆ. 'ಸುಭಾಷಿತ' 'ಸುಭಾಷಿತ'ಎಂಬುದೇ ಶುದ್ಧರೂಪ! ಜಾಹೀರಾತು ಬರಹಗಳಲ್ಲಿ, ಗೋಡೆ ಬರಹಗಳಲ್ಲಿ, ಬ್ಯಾನರ್ ಬರಹಗಳಲ್ಲಿ ತಪ್ಪುಗಳೇ ಮೊರೆಯುತ್ತವೆ. ಪತ್ರಿಕೆಯ ವರದಿಯು ಜಾಹೀರಾತು ಬರಹವಾಗದಿರಲಿ' ಎಂದಿದ್ದಾರೆ.
ಬೆಂಗಳೂರಿನಿಂದ ವಿ. ಹೇಮಂತಕುಮಾರ್ ಅವರು ಬರೆಯುತ್ತಾರೆ- 'ಮೇ 20ರ ಸಂಚಿಕೆಯ ಪುಟ 10ರಲ್ಲಿ ಅಪರಾಧ ಸುದ್ದಿಗಳು ಅಂಕಣದಲ್ಲಿ 'ಕಾರು ಬಡಿದು ವಿದ್ಯಾರ್ಥಿ ಸಾವು' ಎಂಬ ಶೀರ್ಷಿಕೆ ಪ್ರಕಟಗೊಂಡಿದೆ. ಸಿಡಿಲು ಬಡಿದು ಎಂಬಂತಿದೆ. ಕಾರು ಬಡಿದು ಎಂಬುದಕ್ಕಿಂತ 'ಕಾರು ಡಿಕ್ಕಿ ವಿದ್ಯಾರ್ಥಿ ಸಾವು' ಎಂಬ ಶೀರ್ಷಿಕೆಯೇ ಸೂಕ್ತವಲ್ಲವೇ? ಅದೇ ಪುಟದ 7ನೇ ಪ್ಯಾರಾದಲ್ಲಿ 'ಪದ್ಮಪ್ರಶಸ್ತಿ ಬಂದಿದ್ದಕ್ಕೆ ಪಂಡಿತನಾಗಲಿಲ್ಲ' ಎಂಬ ಶೀರ್ಷಿಕೆ ಇದೆ. 'ಪದ್ಮ ಪ್ರಶಸ್ತಿ' ಯಾವುದು ಅದು, 'ಪದ್ಮಶ್ರೀ' ಪ್ರಶಸ್ತಿ ಅಲ್ಲವೇ?' ಎಂದಿದ್ದಾರೆ.
'ಪದ್ಮಶ್ರೀ', 'ಪದ್ಮವಿಭೂಷಣ' ಪ್ರಶಸ್ತಿಗಳು ಬಂದಾಗ ಮುಂದೆ ಸಾಮಾನ್ಯ ಬಳಕೆಯಲ್ಲಿ ಅದನ್ನು 'ಪದ್ಮ ಪ್ರಶಸ್ತಿ' ಎಂದು ಕರೆಯುವ ರೂಢಿಯಿದೆ.
ವಿಶ್ವೇಶ್ವರ ಭಟ್