ಪ್ರಧಾನಿಯ ಹೊಸ ಪ್ರಯೋಗ
ಹಿಂದಿನ ಯಾವ ಪ್ರಧಾನಿಯೂ ಮಾಡದೇ ಇದ್ದ ಪ್ರಯೋಗವನ್ನು ಬುಧವಾರ ನರೇಂದ್ರ ಮೋದಿ ಅವರು ಯಶಸ್ವಿಯಾಗಿ..
ಹಿಂದಿನ ಯಾವ ಪ್ರಧಾನಿಯೂ ಮಾಡದೇ ಇದ್ದ ಪ್ರಯೋಗವನ್ನು ಬುಧವಾರ ನರೇಂದ್ರ ಮೋದಿ ಅವರು ಯಶಸ್ವಿಯಾಗಿ ಮಾಡಿದ್ದಾರೆ. ಮಂತ್ರಿಗಳನ್ನು ದೂರವಿಟ್ಟು, ನೇರವಾಗಿ ಸರ್ಕಾರದ ಎಪ್ಪತ್ತೇಳು ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಹೊಸ ಪ್ರಯೋಗವನ್ನು ಜಾರಿಗೆ ತಂದಿದ್ದಾರೆ.
ಅವರ ದೀರ್ಘ ಕಾಲದ ಆಡಳಿತದ ಅನುಭವದ ಆಧಾರದ ಮೇಲೆ, ಅವರಿಗೆ ಸ್ಪಷ್ಟವಾಗಿ ಗೋಚರವಾಗಿರುವ ಅಂಶ ಎಂದರೆ ಸಂಸತ್ತು, ಸರ್ಕಾರ ಯಾವುದೇ ನೀತಿಯನ್ನು ರೂಪಿಸಿದರೂ, ಅದನ್ನು ಅಂತಿಮ ಹಂತದಲ್ಲಿ ಜಾರಿಗೆ ತರಬೇಕಾದವರು ಅಧಿಕಾರಿಗಳೇ. ಆದ್ದರಿಂದ ಬೇರೆ ಯಾರ ಮಧ್ಯಸ್ಥಿಕೆಗೂ ಅವಕಾಶವಿಲ್ಲದಂತೆ ಹಿರಿಯ ಅಧಿಕಾರಿಗಳನ್ನೇ ನೇರವಾಗಿ ಪ್ರಧಾನಿ ಭೇಟಿ ಮಾಡಿದ್ದಾರೆ. ಇದು ಅಧಿಕಾರಿಗಳಿಗೆ ಹೊಸ ಅನುಭವ. ಒಂದು ರೀತಿಯಲ್ಲಿ ಆಡಳಿತದಲ್ಲಿ ಇತಿಹಾಸದ ನಿರ್ಮಾಣ ಎನ್ನಬಹುದು.
ನರೇಂದ್ರ ಮೋದಿ ಎಪ್ಪತ್ತೇಳು ಮಂದಿ ಕಾರ್ಯದರ್ಶಿಗಳನ್ನು ಮುಖಾಮುಖಿಯಾಗಿ ಭೇಟಿ ಮಾಡಿ ಸರ್ಕಾರದ ನೀತಿ ಜಾರಿಗೆ ತರುವ ವಿಚಾರದಲ್ಲಿ ನೇರವಾದ ಸಂವಾದವನ್ನು ನಡೆಸಿದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ಆ ಸಂವಾದದ ಸಮಯದಲ್ಲಿ, ಹಿರಿಯ ಅಧಿಕಾರಿಗಳು ಆರಂಭದಲ್ಲಿ ಸ್ವಲ್ಪ ಹಿಂದೆ-ಮುಂದೆ ನೋಡಿದರೂ ಕೊನೆ ಕೊನೆಯಲ್ಲಿ ತಮ್ಮ ಅಭಿಪ್ರಾಯವನ್ನು ಬಿಚ್ಚು ಮಾತುಗಳಲ್ಲೇ ಪ್ರಕಟಿಸಿದರೆಂದು ವರದಿಗಳು ತಿಳಿಸಿವೆ.
ಅಧಿಕಾರಿಗಳಿಗೆ ಈ ಅನುಭವ ಹೊಸದು. ಅವರಿಗೆ ಮೋದಿ ನೀಡಿದ ಸಂದೇಶ: ಕೆಂಪು ಪಟ್ಟಿಯನ್ನು ಆದಷ್ಟು ಮಟ್ಟಿಗೆ ಕತ್ತರಿಸಿ. ಆಧುನಿಕ ಸಂವಹನ- ಸಂಪರ್ಕ ಸಾಧನಗಳನ್ನು ಬಳಸಿಕೊಳ್ಳಿ. ಸರ್ಕಾರದ ಉದ್ದೇಶ ಈಡೇರುವುದು ಮುಖ್ಯ. ಕಡತಗಳ ಸೃಷ್ಟಿಯಲ್ಲ. ತುಂಬಾ ಅಗತ್ಯವೆನಿಸಿದರೆ ನೇರವಾಗಿ ಸೆಲ್ಫೋನ್ ಬಳಸಿ. ಇಲ್ಲವೇ ಮಿಂಚಂಚೆ ಕಳಿಸಿ. ಅದನ್ನು ಸ್ವೀಕರಿಸುವ ವ್ಯವಸ್ಥೆಯಾಗಲಿದೆ ಎಂದಿದ್ದಾರೆ.
ನರೇಂದ್ರ ಮೋದಿ ಅವರು ಈಗಾಗಲೇ ಸಾಮಾಜಿಕ ಮಾಧ್ಯಮದ ಸಾಧನಗಳನ್ನು ಸಾಕಷ್ಟು ಉಪಯೋಗಿಸುತ್ತಿದ್ದಾರೆ. ಎಲ್ಲಿಂದಲೋ ಯಾರೋ ಟ್ವೀಟ್ ಸಂದೇಶ ರವಾನಿಸಿದರೆ, ಅದನ್ನು ಸೂಕ್ತ ರೀತಿಯಲ್ಲಿ ಪರಿಗಣಿಸುವ ವ್ಯವಸ್ಥೆಯೂ ಆಗುತ್ತಿದೆ.
ನಿಜ. ಇದು ಹೇಳಿದಷ್ಟು ಸುಲಭವಲ್ಲ. ಕೇಂದ್ರದ ಎಪ್ಪತ್ತೇಳು ಕಾರ್ಯದರ್ಶಿಗಳು, ಮಂತ್ರಿಗಳ ಪಡೆ, ರಾಜ್ಯಗಳ ಸರ್ಕಾರದ ಹಿರಿಯ ಅಧಿಕಾರಿಗಳು, ಸರ್ಕಾರದ ನಾನಾ ಆಯೋಗಗಳು, ನಿಗಮಗಳ ಪ್ರಮುಖರು ಪ್ರತಿನಿತ್ಯ ರವಾನಿಸಬಹುದಾದ ಸಂದೇಶಗಳನ್ನೆಲ್ಲ ಪ್ರಧಾನಿಯೇ ವೈಯಕ್ತಿಕವಾಗಿ ಪರಿಶೀಲಿಸುವುದು ಸಾಧ್ಯವಿಲ್ಲ. ಆದರೆ ಅದರಲ್ಲಿ ಪ್ರಮುಖವಾದ ಅಂಶಗಳೇನಾದರೂ ಇದ್ದರೆ ಅದನ್ನು 'ಶೀಘ್ರದಲ್ಲೇ' ಪರಿಗಣಿಸುವ ವ್ಯವಸ್ಥೆಯನ್ನು ರೂಪಿಸುವುದು ಕಷ್ಟವೇನೂ ಅಲ್ಲ.
ಬುಧವಾರ ಕಾರ್ಯದರ್ಶಿಗಳ ಸಭೆಯ ಕೊನೆಯ ಹಂತದಲ್ಲಿ ಅಧಿಕಾರಿಗಳ ಕಡೆಯಿಂದ ಬಂದ ಮೊರೆ: ಆಡಳಿತ ಸಿಬ್ಬಂದಿಯಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕೆಲಸವೂ ಆಗಬೇಕು. ಯಾವುದೋ ಸನ್ನಿವೇಶದಲ್ಲಿ ಸಿದ್ಧಪಡಿಸಿದ ಟಿಪ್ಪಣಿಯ ಅಂಶಗಳನ್ನು ಬೇರೆ ಯಾವುದೋ ಸನ್ನಿವೇಶದಲ್ಲಿ ಪರಿಗಣನೆಗೆ ತೆಗೆದುಕೊಂಡು ಅಧಿಕಾರಿಗಳನ್ನು ಗೋಳುಗುಟ್ಟಿಸುವ ಪ್ರಕ್ರಿಯೆ ಒಳ್ಳೆಯದಲ್ಲ. ಅದರಿಂದ ಆಡಳಿತ ನಿರ್ವಹಿಸಬೇಕಾದ ಸಿಬ್ಬಂದಿಯ ಆತ್ಮಸ್ಥೈರ್ಯವೇ ಉಡುಗಿ ಹೋಗುತ್ತದೆ. ಆ ಪ್ರವೃತ್ತಿಯನ್ನು ಇತಿ-ಮಿತಿಯಲ್ಲಿಡಬೇಕು. ಈ ವಿಚಾರ ನರೇಂದ್ರ ಮೋದಿ ಅವರಿಗೂ ಅರ್ಥವಾಗಿರುವಂತಿದೆ. ಮುಂದೇನು ಮಾಡ್ತಾರೋ ನೋಡಬೇಕು.