ಮೋರೋ ಪಂತ್ ಮರಾಠರ ಮೊದಲ ಪೇಶ್ವೆಯಾಗಿದ್ದವರು. 1647ರಲ್ಲಿ ಶಿವಾಜಿಯ ಜೊತೆ ಸೇರಿ ಮರಾಠ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮೊಗಲರ ವಿರುದ್ಧ ನಡೆದ ಅನೇಕ ಯುದ್ಧಗಳಲ್ಲಿ ಪಾಲ್ಗೊಂಡು ಜಯ ತಂದಿತ್ತ ಸ್ವಾಮಿನಿಷ್ಠ. ಸೂರತ್ ನಗರವನ್ನು ವಶಡಿಸಿಕೊಂಡಮೇಲೆ ಮೋರೋಪಂತನನ್ನು ಪ್ರತಾಪಘಡದ ಆಡಳಿತ ನೋಡಿಕೊಳ್ಳಲು ನೇಮಿಸಲಾಯಿತು. ಶಿವಾಜಿಯ ನಂತರವೂ ಸಹ ಸಾಂಬಾಜಿಯೊಡಗೂಡಿ ಕೆಲವು ಮಹತ್ವದ ಯುದ್ಧಗಳಲ್ಲಿ ಪಾಲ್ಗೊಂಡ ಕೀರ್ತಿ ಇವರಿಗೆ ಸಲ್ಲುತ್ತದೆ. ಜೀವನದ ಕೊನೆಯಲ್ಲಿ ನಡೆದ ಘಟನೆಗಳು ಮೋರೋಪಂತರಿಗೆ ತಮ್ಮ ಮನೆಯ ಮೇಲೆ ದೌಕೀಪಹರೆಯನ್ನು ನಿಯೋಜಿಸಿದ್ದು ಬೇಸರವನ್ನುಂಟು ಮಾಡಿದರೂ ಸಹ ಅವರ ರಾಜನಿಷ್ಠೆ ಸಡಿಲವಾಗಲಿಲ್ಲ. ಅವರ ಅಂತಿಮ ಕ್ಷಣಗಳಲ್ಲಿ ಅನಾರೋಗ್ಯದಿಂದ ಬಳಲಿ, ಬೆಂಡಾಗಿದ್ದರು. ಅವರನ್ನು ನೋಡಲು ಸಾಂಬಾಜಿ ಮತ್ತು ಅವನ ಪತ್ನಿ ಎಸೂಬಾಯಿ ಬಂದಿದ್ದರು. ರಾಜವೈದ್ಯರೂ ಸಹ ತಮ್ಮ ಶಕ್ತಿಮೀರಿ ಅವರ ಆರೋಗ್ಯ ಸುಧಾರಣೆಗೆ ಪ್ರಯತ್ನಿಸುತ್ತಿದ್ದರು. ರಾಜ-ರಾಣಿಯರನ್ನು ನೋಡಿದ ಮೋರೋ ಪಂತ್ ಎದ್ದು ಕುಳಿತು ಮಾತನಾಡಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಮಲಗಿದ್ದಲ್ಲಿಂದಲೇ ನಮಸ್ಕರಿಸಿ, ತಮ್ಮ ಸೇವೆಯಲ್ಲಿ ಹಾಜರಾಗಲು ಸಾಧ್ಯವಾಗುತ್ತಿಲ್ಲ. ತಾವು ಪ್ರಭುಗಳು ದಯಮಾಡಿ ಈ ಸೇವಕನ ಅಪರಾಧವನ್ನು ಮನ್ನಿಸಬೇಕು ಎಂದು ಕೈಮುಗಿದರು. ಪಂತರ ಪರಿಸ್ಥಿತಿ ಕಂಡು ಸಾಂಬಾಜಿ ಮಹಾರಾಜರಿಗೆ ಕಳವಳ ಮತ್ತು ದುಃಖ ಉಂಟಾಯಿತು. ಅವರು ಭಾವುಕರಾಗಿ ಪಂತರ ಕೈ ಹಿಡಿದು ಮೃದುವಾಗಿ ಸವರಿದರಲ್ಲದೆ, ಮರಾಠ ಸಾಮ್ರಾಜ್ಯಕ್ಕೆ ಪಂತರ ಸೇವೆಯನ್ನು ಕೊಂಡಾಡಿದರು. ಆಗ ಪಂತರು ತಮ್ಮ ತಲೆದಿಂಬಿನ ಕೆಳಗೆ ಕೈಯಾಡಿಸುತ್ತಾ, ಏನೋ ಹುಡುಕುತ್ತಿದ್ದರು. ಅದನ್ನು ಮನಗಂಡ ಪಂತರ ಮಗ ನೀಳೋಪಂತ್ ತಲೆದಿಂಬಿನ ಕೆಳಗೆ ಅಡಗಿಸಿಟ್ಟಿದ್ದ ಎರಡು ಸಂಪುಟಗಳನ್ನು ತೆಗೆದುಕೊಟ್ಟರು. ಅವುಗಳ ಮುಚ್ಚಳವನ್ನು ತೆಗೆದಾಗ, ಒಂದರಲ್ಲಿ ಪಂತಪ್ರಧಾನವಾದ ಸಾಮ್ರಾಜ್ಯದ ಮುದ್ರೆಗಳೂ, ಇನ್ನೊಂದರಲ್ಲಿ ಅವರಿಗೆ ನೀಡಿದ್ದ ಎರಡು ಬಾವಲಿಗಳು (ಕಿವಿಗೆ ಧರಿಸುವ ಒಡವೆ) ಇದ್ದವು. ಅದರಲ್ಲಿ ಒಂದು ಮಥುರಾದ ಬೀಗರು ನೀಡಿದ ಬಾವಲಿ, ಮತ್ತೊಂದು ಸ್ವತಃ ಮಹಾರಾಜರು ನೀಡಿದ್ದವುಗಳಾಗಿದ್ದವು. ಅವರಿಗೆ ಮರಾಠ ಸಾಮ್ರಾಜ್ಯ ಮತ್ತು ರಾಜರ ಬಗ್ಗೆ ಅದೆಷ್ಟು ಗೌರವವಿತ್ತೆಂದರೆ, ಅವುಗಳನ್ನು ತನ್ನ ಅಂತ್ಯ ಸಂಸ್ಕಾರದ ಸಮಯದಲ್ಲಿ ಚಿತೆಯಲ್ಲಿಟ್ಟು ಸುಡಬೇಕೆಂದು ಅರಿಕೆ ಮಾಡಿಕೊಂಡರು. ಅದರಂತೆ ಅವರು ಮರಣಿಸಿದಾಗ ಅವರ ಇಚ್ಛೆಯಂತೆ ಆ ಬಾವಲಿಗಳೂ ಸಹ ಅಗ್ನಿದೇವನಿಗೆ ಅರ್ಪಿತವಾದವು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com