ಪೊಲೀಸರ ಅಮಾನುಷ ವರ್ತನೆ
ಉತ್ತರಾಖಂಡ ರಾಜ್ಯದ ಡೆಹರಾಡೂನ್ನಲ್ಲಿ ಕೆಲಸ ಮಾಡುತ್ತಿದ್ದ ಹದಿನೇಳು ಮಂದಿ ಪೊಲೀಸ್ ಅಧಿಕಾರಿಗಳು...
ಉತ್ತರಾಖಂಡ ರಾಜ್ಯದ ಡೆಹರಾಡೂನ್ನಲ್ಲಿ ಕೆಲಸ ಮಾಡುತ್ತಿದ್ದ ಹದಿನೇಳು ಮಂದಿ ಪೊಲೀಸ್ ಅಧಿಕಾರಿಗಳು, ನೌಕರರನ್ನು ಒಂದು ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿ, ಅವರಿಗೆ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿದ ಸುದ್ದಿ ನಿಜಕ್ಕೂ ಆತಂಕವನ್ನು ಮೂಡಿಸುವಂತಹದ್ದು.
ಈ ಅಪರಾಧದ ಘಟನೆ ನಡೆದಿದ್ದು 2009 ರ ಜುಲೈನಲ್ಲಿ. ಘಜಿಯಾಬಾದ್ನ ಒಬ್ಬ ಯುವಕ, ಎಂ.ಬಿ.ಎ. ಪದವಿಧರ, ನೌಕರಿಯನ್ನು ಹುಡುಕುತ್ತ ಡೆಹರಾಡೂನ್ ತಲುಪಿ, ಒಂದು ಕಾರ್ಯಾಲಯಕ್ಕೆ ಭೇಟಿ ನೀಡಿದಾಗ, ಅವನನ್ನು ಪೊಲೀಸರು ವಿನಾಕಾರಣ ಬಂಧಿಸಿದರು. ಆ ಯುವಕನನ್ನು ಭಯೋತ್ಪಾದಕ ಎಂದು ಭಾವಿಸಿ, ಅವನಿಗೆ ಚಿತ್ರಹಿಂಸೆ ನೀಡಲಾಯಿತು. ಆ ವ್ಯಕ್ತಿ ಸತ್ತಾಗ ಅದನ್ನು ಪೊಲೀಸರು ಎನ್ಕೌಂಟರ್ ಸಾವು ಎಂದರು. ಮೃತ ಯುವಕನಿಗೆ ಹಲವಾರು ಗುಂಡುಗಳನ್ನು ತೀರ ಹತ್ತಿರದಿಂದ ಹೊಡೆಯಲಾಗಿತ್ತು.
ಈ ಅಂಶಗಳೆಲ್ಲವೂ ಅನಂತರದ ಪೊಲೀಸ್ ತನಿಖೆ, ನ್ಯಾಯಾಲಯಗಳ ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿವೆ. ನ್ಯಾಯಾಲಯವೂ ಲಭ್ಯವಿರುವ ಸಾಕ್ಷ್ಯ ಹಾಗೂ ಸಾಂದರ್ಭಿಕ ವಿದ್ಯಮಾನಗಳ ಆಧಾರವನ್ನು ಪುರಸ್ಕರಿಸಿ, ಈ ಪ್ರಕರಣದಲ್ಲಿ ಪಾಲುಗೊಂಡಿದ್ದ ಎಲ್ಲ ಹದಿನೇಳು ಮಂದಿ ಪೊಲೀಸರನ್ನು ಜೀವಾವಧಿಯ ಜೈಲು ಶಿಕ್ಷೆಗೆ ಗುರಿಪಡಿಸಿದ್ದಾರೆ. ಆದರೆ ಅಷ್ಟಕ್ಕೇ ಮೃತ ಯುವಕನ ಕುಟುಂಬದವರು ತೃಪ್ತರಾಗಿಲ್ಲ. ಅವರೆಲ್ಲರಿಗೂ ನೇಣುಗಂಬವನ್ನೇರುವ ಶಿಕ್ಷೆಯನ್ನು ವಿಧಿಸಬೇಕೆನ್ನುವುದು ಅವರ ವಾದ. ಇದು ಇಲ್ಲಿಗೇ ಮುಗಿಯುವುದಿಲ್ಲ.
ಆದರೆ ಇಂತಹ ಘಟನೆಗಳ ಅನಂತರವಾದರೂ (ಇದೇ ಮೊದಲನೆಯದಲ್ಲ) ಪೊಲೀಸ್ ಅಧಿಕಾರದ ಬಳಕೆಯನ್ನು ಕುರಿತು ಎಲ್ಲ ಹಂತಗಳ ಅಧಿಕಾರಿಗಳು, ನೌಕರರಿಗೂ ಸೂಕ್ತ ಸೂಚನೆಯನ್ನು ಕೊಡಬೇಕು.