ಸೂರ್ಯನಿಗೆ ಪ್ರಚಾರ ಬೇಕೆ?
ಹಾಳು ಬಾವಿಯಲ್ಲಿ ಬಿದ್ದವನು ಜೀವ ಭಯದಿಂದ, ಜನರ ಗಮನ ಸೆಳೆಯಲು ಶಕ್ತಿ ಮೀರಿ ಕಿರುಚಾಡುತ್ತಾನೆ...
ಹಾಳು ಬಾವಿಯಲ್ಲಿ ಬಿದ್ದವನು ಜೀವ ಭಯದಿಂದ, ಜನರ ಗಮನ ಸೆಳೆಯಲು ಶಕ್ತಿ ಮೀರಿ ಕಿರುಚಾಡುತ್ತಾನೆ. ನಮ್ಮ ರಾಜ್ಯದ ಘನ ಕಾಂಗ್ರೆಸ್ ಸರ್ಕಾರವೂ ಇದನ್ನೇ ಮಾಡುತ್ತಿದೆ. ಈಗ ಹತ್ತಾರು ದಿನಗಳಿಂದ ಎಲ್ಲ ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಪೂರ್ಣ ಪುಟ-ಅರ್ಧಪುಟ-ಕಾಲುಪುಟಗಳಲ್ಲಿ, ಪೂರ್ಣ ಕೃತ್ರಿಮ ನಗೆ ಬೀರುತ್ತ, ತಮ್ಮ ಸರ್ಕಾರದ ವರ್ಷ ತುಂಬಿದ 'ಸಾಧನೆ'ಗಳನ್ನು ಬಣ್ಣಬಣ್ಣದ ತುತ್ತೂರಿ ಮಾಡಿ, ಜಿಗುಪ್ಸೆ/ಸಂಶಯ ಹುಟ್ಟುವಂತೆ ಊದುತ್ತಿದ್ದಾರೆ, ಪ್ರತಿ ದಿನವೂ! ಪ್ರಚಾರವೇ ಸಾಧನೆ, ಬಂಡವಾಳ. ಜನರ ತೆರಿಗೆಯ ಕೋಟ್ಯಂತರ ಹಣವನ್ನು 'ಯಲ್ಲಮ್ಮನ ಜಾತ್ರೆ, ಮುಂಡೇ ಮದುವೇಲಿ ಉಂಡವನೇ ಜಾಣ' ಎಂಬಂತೆ ವ್ಯಯಿಸುತ್ತಿದ್ದಾರೆ. ಆಳುವವರು ಸೂರ್ಯನಾಗಿದ್ದರೆ, ಪ್ರಚಾರದ ಆವಶ್ಯಕತೆ ಇರುತ್ತದೆಯೇ? ನರೇಂದ್ರ ಮೋದಿಯವರನ್ನು ನೋಡಿರಿ! ಪ್ರಮಾಣ ವಚನ ಸ್ವೀಕರಿಸಿದ ದಿನವೇ ಕ್ಷಣ ಮಾತ್ರವೂ ವ್ಯರ್ಥ ಮಾಡದೇ, ಹನಿಮೂನ್/ಮನೀಹೂನ್ ಮಾಡದೆ, ಜೇನು ನೊಣದಂತೆ ಕೆಲಸ ಶುರು. ಕೆಲಸದ ರೀತಿ, ಯೋಗ್ಯತೆ, ತೂಕದ ಮಾತುಗಳು, ಎಲ್ಲವೂ ಆಕಾಶದ ಸೂರ್ಯನಂತೆ, ಪ್ರಚಾರವೇ ಬೇಡ. ಕೆಲವು ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ಮೋದಿ ಜೀವನ ಚರಿತ್ರೆ ಅಳವಡಿಸುತ್ತೇವೆಂದರೂ "ಬೇಡ, ಇತಿಹಾಸದಲ್ಲಿ ಅನೇಕ ಮಹಾನ್ ಸಾಧಕರು, ದೇಶಭಕ್ತರು, ಹೋರಾಟಗಾರರು ಇದ್ದಾರೆ. ಕಾಂಗ್ರೆಸ್, ಕಮ್ಯುನಿಸ್ಟ್, ಬು.ಜೀ.ಗಳು ಅನ್ಯಾಯವಾಗಿ 'ಮರೆಸಲ್ಪಟ್ಟವ'ರಿದ್ದಾರೆ, ಅವರ ಜೀವನ ಚರಿತ್ರೆ ಅಳವಡಿಸಿರಿ" ಎಂಬ ಸಾರ್ಥಕ ಮಾತುಗಳನ್ನಾಡಿದ್ದಾರೆ; ಇಂಥವರನ್ನು ಗುರುತಿಸಿ, ಭಾರತರತ್ನವೇ ಮುಂತಾದ ಸರ್ಕಾರಿ ಮಾನ-ಮರ್ಯಾದೆ ಕೊಡುವುದು; ಕಾಶ್ಮೀರಿ ಪಂಡಿತರ, ಪಾಕ್ ಹಿಂದೂ ನಿರಾಶ್ರಿತರ ಪುನರ್ವಸತಿ, ಬಾಂಗ್ಲಾ ನುಸುಳುಕೋರರ ತಡೆಗಟ್ಟುವಿಕೆ, ಗಡಿಭದ್ರತೆ, ಸೈನ್ಯ ಶಸ್ತ್ರಾಸ್ತ್ರ ಸಿದ್ಧತೆ... ಇತ್ಯಾದಿ ತೂಕದ ಕ್ರಮಗಳು ಅಂಬೆಗಾಲಿಕ್ಕುವಾಗಲೇ ಕೈಗೆತ್ತಿಕೊಳ್ಳುತ್ತಿದ್ದಾರೆ... ಹೋಲಿಸಿರಿ-ಜನರನ್ನು ಆಲಸಿ ಮಾಡುವ, ಅಗ್ಗದ ಪ್ರಚಾರ ಉದ್ದೇಶದ ಹೀನ ಕ್ರಮಗಳು: ಅನ್ನಭಾಗ್ಯ/ಕನ್ನಭಾಗ್ಯ/ಶಾದಿ ಭಾಗ್ಯ/ಗಾದಿ ಭಾಗ್ಯ/ ಕ್ಷೀರ... ಇತ್ಯಾದಿ! ನಮಗೆ ಬೇಕಾದದ್ದು ನರಿಯ ಕೂಗುಗಳಲ್ಲ, ಸಿಂಹದ ಘರ್ಜನೆ, ಆನೆಯ ಕೆಲಸ, ಪ್ರಚಾರ ಬೇರೆ ಬೇಕೆ?
-ಇಳಿಮನೆ ಸುಭಾಶ್ಚಂದ್ರ ಹೆಗಡೆ, ಹುಬ್ಬಳ್ಳಿ
ಕಂದಾಯ ಸಚಿವರೆ ಇತ್ತ ಗಮನ ಹರಿಸಿ
ರಾಜ್ಯದಲ್ಲಿ ಅಂಗವಿಕಲರ ಪಿಂಚಣಿ, ಸಂಧ್ಯಾ ಸುರಕ್ಷೆ ಮತ್ತು ವಿಧವಾ ಮಾಸಾಶನ ಮುಂತಾದಂತಹ ಪಿಂಚಣಿಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ಪ್ರತಿ ತಿಂಗಳೂ ತಪ್ಪದೇ ಒಂದು ನಿರ್ದಿಷ್ಟ ದಿನದಂದು ಅವರ ಖಾತೆಗಳಿಗೆ ಹಣವನ್ನು ತುಂಬುವಂತಹ ಕೆಲಸವನ್ನು ಮೊದಲು ಮಾಡಬೇಕಾಗಿದೆ. ಅನೇಕ ಹಿರಿಯ ನಾಗರೀಕರು ಮತ್ತು ಆರ್ಥಿಕ ದುರ್ಬಲರು ಇಂತಹ ಪಿಂಚಣಿಗಳಿಂದಲೇ ತಮ್ಮ ಆರೋಗ್ಯ ರಕ್ಷಣೆಗೆ ಬೇಕಾದ ಮಾತ್ರೆಗಳನ್ನು ಖರೀದಿಸಿ ಜೀವವನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಇವರಿಗೆ ತಿಂಗಳುಗಳ ಕಾಲ ಪಿಂಚಣಿ ಬರದಿದ್ದರೆ ಅಥವಾ ಒಂದು ನಿರ್ದಿಷ್ಟ ದಿನದಂದು ಹಣ ದೊರೆಯದಿದ್ದರೆ ತೊಂದರೆಯನ್ನು ಅನುಭವಿಸುತ್ತಾರೆ. ಇಂತಹ ಕೇಂದ್ರಗಳು ಬೆಂಗಳೂರು ನಗರದಲ್ಲಿ ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ 3ನೇ ಮಹಡಿಯಲ್ಲಿದೆ. ನಗರದ ಹಲವಾರು ಕಡೆ ಮಹಡಿಗಳ ಮೇಲೆಯೇ ಇದೆ. ಇಲ್ಲಿ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ದೈಹಿಕವಾಗಿ ದುರ್ಬಲರಾಗಿರುವ ಇಂತಹ ಪಿಂಚಣಿದಾರರು ಕಚೇರಿಗೆ ಬಂದ ಸಂದರ್ಭದಲ್ಲಿ ಕುಳಿತುಕೊಳ್ಳಲು ಖುರ್ಚಿಗಳೇ ಇರುವುದಿಲ್ಲ. ಮಾನ್ಯ ಕಂದಾಯ ಸಚಿವರು ಕೂಡಲೇ ಇಂತಹ ಕೇಂದ್ರಗಳಿಗೆ ಬೇಕಾದಂತಹ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ನೆಲಮಹಡಿ ಅಥವಾ ಮೊದಲ ಮಹಡಿಯಲ್ಲಿಯೇ ಇಂತಹ ಕಚೇರಿಗಳು ಇದ್ದರೆ ಅಂಗವಿಕಲರು, ಬುದ್ಧಿ ಮಾಂದ್ಯರು, ಹಿರಿಯ ನಾಗರೀಕರಿಗೆ ಅನುಕೂಲವಾಗುತ್ತದೆ. ಪಿಂಚಣಿದಾರರ ಸಮಸ್ಯೆಗಳನ್ನು ಪರಿಹರಿಸಲು ತಾಲ್ಲೂಕು ಕೇಂದ್ರಗಳಲ್ಲಿ ಹೆಲ್ಪ್ ಸಂಖ್ಯೆಯನ್ನು ನಿಗದಿಪಡಿಸಿ.
-ಕೆ.ಎಸ್. ನಾಗರಾಜ್
ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com