ತಪ್ಪಾಯ್ತು ತಿದ್ಕೋತೀವಿ
ಸಂಪದಿಂದ ಮ.ರಾ. ಹೆಗಡೆ ಅವರು ಬರೆಯುತ್ತಾರೆ- 'ಮೇ 15ರ 'ಬೈಟುಕಾಫಿ'ಯ ಬೆಳ್ಳಿತಟ್ಟೆಯಲ್ಲಿ ...
ಸಂಪದಿಂದ ಮ.ರಾ. ಹೆಗಡೆ ಅವರು ಬರೆಯುತ್ತಾರೆ- 'ಮೇ 15ರ 'ಬೈಟುಕಾಫಿ'ಯ ಬೆಳ್ಳಿತಟ್ಟೆಯಲ್ಲಿ ಮೂಳೆಗಳನ್ನು ಬಲಗೊಳ್ಳುವುದರ 'ಮೂಳೆಗಳು ಬಲಗೊಳ್ಳುವುದರ', 'ಜಗುಲಿ'ಯಲ್ಲಿ ಅವಲಂಭಿತ(ತಪ್ಪು)
ಅವಲಂಬಿತ(ಸರಿ), ವೈಶಾಖ ಹೆಚ್ಚಿಸುವ ಮೈಶಾಖದಲ್ಲಿ ಮಾಧನ(ತಪ್ಪು) ಮಾಧವ(ಸರಿ), ಜಾಢ್ಯ(ತಪ್ಪು) ಜಾಡ್ಯ(ಸರಿ). 'ಶಾಕ್ ಆಗ್ಬೇಡಿ'ಯಲ್ಲಿ ಉತ್ಪಾಧಿಸಿ(ತಪ್ಪು) ಉತ್ಪಾದಿಸಿ(ಸರಿ), ಗೊಬ್ಬಿರಿಯುವ(ತಪ್ಪು) ಬೊಬ್ಬಿರಿಯುವ(ಸರಿ). 'ಜಗುಲಿ'ಯಲ್ಲಿ ಮೂಲಸೌಕರ್ಯ ಒದಗಿಸುವನೇ(ತಪ್ಪು) ಮೂಲ ಸೌಕರ್ಯ ಒದಗಿಸುವವನೇ(ಸರಿ) ಇಷ್ಟೆಲ್ಲ ತಪ್ಪಾಗಿದೆ' ಎಂದಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದಿಂದ ಎಚ್. ಆನಂದರಾಮ ಶಾಸ್ತ್ರಿ ಅವರು ಬರೆಯುತ್ತಾರೆ- 'ಚುನಾವಣೆ ಫಲಿತಾಂಶದ ನಂತರ ಸಂಚಿಕೆಗಳ ಹಲವು ಶೀರ್ಷಿಕೆಗಳನ್ನು ಮೆಚ್ಚಿ ಕೊಂಡಾಡುತ್ತಿರುವವರ ಪತ್ರಗಳನ್ನು ಪ್ರಕಟಿಸುತ್ತಿದ್ದೀರಿ. ಸಂತೋಷ. ಆದರೆ ಈ ಪೈಕಿ 'ಯುಗಾದಿ', 'ಭಾರತ ಸಾರಥಿ' ಮತ್ತು 'ನಮೋಸ್ಕಾರ' ಈ ತಲೆಬರಹಗಳ ಹೊಳಹುಗಳನ್ನು ನಾನು ಎಸ್ಎಂಎಸ್ ಮುಖಾಂತರ ತಮಗೆ ನೀಡಿದ್ದು, ಇದನ್ನು ಓದುಗರಿಗೆ ಈಗ ಈ ಅಂಕಣದ ಮೂಲಕವಾದರೂ ತಿಳಿಸುವ ದೊಡ್ಡತನವನ್ನು ತೋರಬಹುದಲ್ಲಾ?'
"ನಮೋಸ್ತುತೆ' ಎಂಬ ಶೀರ್ಷಿಕೆಯು 'ನಮೋಸ್ತು ತೇ' ಎಂದಾಗಬೇಕೆಂದೂ (ನಮಃ ಅಸ್ತು ತೇನಿನಗೆ (ನಮ್ಮ) ನಮಸ್ಕಾರ ಇರಲಿ) ತಮಗೆ ಎಸ್ಎಂಎಸ್ ಮಾಡಿದ್ದೆ. 'ಸ್ತುತೆ' ಎಂಬುದನ್ನು 'ಹೊಗಳಲ್ಪಟ್ಟವಳು' (ಭಾರತಮಾತೆ) ಎಂದು ಅರ್ಥೈಸಿ ತಮ್ಮ ಆ ಶೀರ್ಷಿಕೆಯನ್ನು ಅರ್ಥಪೂರ್ಣಗೊಳಿಸಿ ತಮಗೆ ತಿಳಿಸಿದ್ದೆ ಕೂಡ.'
'ಜೂ.5ರ 'ನೂರೆಂಟು ನೋಟ'ದಲ್ಲಿ ತಾವು 'ಮೊರೆ ಹೋಗಿಲ್ಲ', 'ಸಹಪಾಠಿಗಳು' ಎಂದು ಬರೆದಿರುವ ಪದಗಳು ಕ್ರಮವಾಗಿ 'ಮೊರೆಹೊಕ್ಕಿಲ್ಲ', 'ಸಹವರ್ತಿಗಳು' ಎಂದಾಗಬೇಕೆಂದೂ ತಮಗೆ ತಿಳಿಸಿದ್ದೆ.'
'ಜೂ.4ರ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ರವೀಂದ್ರನಾಥ್ ಅವರು 'ಪೂರ್ವಾಗ್ರಹ' ಎಂಬ ಬಳಕೆಯನ್ನು ಸೂಚಿಸಿರುವುದು ತಪ್ಪು. 'ಪೂರ್ವಗ್ರಹ' ಎಂಬ ತಮ್ಮ ಬಳಕೆಯೇ ಸರಿ ಎಂದೂ ತಮಗೆ ಎಸ್ಎಂಎಸ್ ಕಳಿಹಿಸಿದ್ದೆ' ಎಂದಿದ್ದಾರೆ.
ಸಾಕಷ್ಟು ಓದುಗರು ಎಸ್ಎಂಎಸ್ ಕಳುಹಿಸುತ್ತಾರೆ. ಓದುಗರು ಕಳುಹಿಸಿದ್ದನ್ನೇ ನಾವು ಮೊದಲೇ ಯೋಚನೆ ಮಾಡಿರುವ ಸಾಧ್ಯತೆ ಇದೆ. ಓದುಗರ ಶೀರ್ಷಿಕೆಗಳನ್ನು ಬಳಸಿಕೊಂಡಾಗ ಅವರ ಹೆಸರನ್ನೂ ಮುಖಪುಟದಲ್ಲಿ ಪ್ರಕಟಿಸಿದ ಸಂಪ್ರದಾಯ ಆರಂಭಿಸಿದ್ದೇ ನಮ್ಮ ಪತ್ರಿಕೆ. ಹೀಗಿರುವಾಗ 'ದೊಡ್ಡತನ' ತೋರುವ ಬಗ್ಗೆ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ.
ಎಚ್. ಆನಂದರಾಮ ಶಾಸ್ತ್ರಿ ಅವರು ಫಲಿತಾಂಶದ ನಂತರ ಶೀರ್ಷಿಕೆಗಳನ್ನು ಕಳುಹಿಸಿದ್ದರೆ ಫಲಿತಾಂಶದ ದಿನಕ್ಕಿಂತ ನಾಲ್ಕು ದಿನ ಮೊದಲು ಪುಟ ವಿನ್ಯಾಸ, ಶೀರ್ಷಿಕೆ ಕುರಿತು ಚರ್ಚೆ ನಡೆದು, ಒಂದು ತೀರ್ಮಾನಕ್ಕೆ ಬರಲಾಗಿತ್ತು. ಎಚ್. ಆನಂದರಾಮ ಶಾಸ್ತ್ರಿ ಅವರು ಕಳುಹಿಸಿದ್ದ ಶೀರ್ಷಿಕೆಗಳನ್ನು ಬಳಸಿದ್ದರೆ ಅವರ ಹೆಸರು ಹಾಕಲು ಅಥವಾ ಅದನ್ನು ಬಹಿರಂಗಪಡಿಸಲು ಯಾವ ಅಭ್ಯಂತರವೂ ಇರಲಿಲ್ಲ.
-ವಿಶ್ವೇಶ್ವರ ಭಟ್