ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮೆಚ್ಚಬೇಕಾದ ಮೋದಿ ಮಾತು

ಲೋಕಸಭೆಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿಗೆ ವಂದನೆಯನ್ನು ಅರ್ಪಿಸುವ ನಿರ್ಣಯದ ಮೇಲಿನ...

Rashmi Kasaragodu
Updated On : 13 Jun 2014, 12:54 pm

ಲೋಕಸಭೆಯಲ್ಲಿ ಬುಧವಾರ  ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿಗೆ ವಂದನೆಯನ್ನು ಅರ್ಪಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲುಗೊಂಡು, ಸರ್ಕಾರದ ಪರವಾಗಿ ಮಾಡಿದ ಭಾಷಣ ಮೆಚ್ಚಬೇಕಾದ್ದೇ. ಇದು ಪ್ರಧಾನಿಯಾಗಿ ಸಂಸತ್ತಿನಲ್ಲಿ ಅವರ ಚೊಚ್ಚಲ ಭಾಷಣ.
ಸಾಲದ್ದಕ್ಕೆ, ಲೋಕಸಭೆಗೆ ಆಯ್ಕೆಯಾದವರ ಪಾಲಿಗೆ, ಇನ್ನೂ ಮೋದಿ ಅವರ ಚುನಾವಣೆ ಪ್ರಚಾರ ಸಮರದಲ್ಲಿನ ಭಾಷಣಗಳು ಪ್ರಸ್ತುತವಾಗಿಯೇ ಕಂಡುಬರುತ್ತಿದೆ. ವಂದನಾ ನಿರ್ಣಯದ ಮೇಲಿನ ಚರ್ಚೆಯ ಕಾಲದಲ್ಲಿ ಅನೇಕರು ಮೋದಿ ಅವರನ್ನು ಚುಚ್ಚಿದ್ದೂ ಉಂಟು.
ಪ್ರಚೋದನೆ ಇದ್ದರೂ ಮೋದಿಯವರು ವಿಚಲಿತರಾಗಲಿಲ್ಲ. ಅವರಿಗೆ ಹೇಳಬೇಕೆನಿಸಿದ್ದನ್ನು ನೇರವಾಗಿ, ಸರಳವಾಗಿ ಹಿಂದಿಯಲ್ಲಿ ಕೇಳುವವರ ಮನಮುಟ್ಟುವಂತೆಯೇ ಹೇಳಿದರು. ಅವರು ನೀಡಿದ ಮೊದಲ ಭರವಸೆ: ಯಾರ ವಿರುದ್ಧವೂ ದ್ವೇಷ ಸಾಧಿಸುವುದಿಲ್ಲ. ಚುನಾವಣೆಯ ಪ್ರಚಾರ ಕಾಲದಲ್ಲಿ ಕಾಂಗ್ರೆಸ್ ಎಲ್ಲಾ ಜನವರ್ಗಗಳನ್ನೂ ಒಳಗೊಳ್ಳುವ ರೀತಿಯ ಆಂದೋಳನದ ಪ್ರಸ್ತಾಪ ಮಾಡಿತ್ತು. ಬುಧವಾರ ಮೋದಿಯವರೂ ಅದೇ ಪದವನ್ನು ಬಳಸಿ, ಅಭ್ಯುದಯ ಸಾಧನೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಮಾತನ್ನೇ ಆಡಿದ್ದರ ಜತೆಯಲ್ಲೇ ಮುಸ್ಲಿಮರೂ ಹೆಚ್ಚು ಅಭಿವೃದ್ಧಿ ಹೊಂದಬೇಕೆನ್ನುವುದೇ ತಮ್ಮ ಆಸೆ ಎಂದರು.
ಹಿಂದಿನದ್ದೆಲ್ಲವನ್ನು ಮರೆತು ಬನ್ನಿ. ನಾವೆಲ್ಲರೂ ಸೇರಿ ಅಭ್ಯುದಯದ ತೇರನ್ನು ಎಳೆಯೋಣ. ಯಾರೂ ಹಿಂದುಳಿಯುವುದು ಬೇಡ ಎನ್ನುವ ಮೊರೆ. ಒಂದು ರೀತಿಯಲ್ಲಿ ಇದು ಕಾಂಗ್ರೆಸ್ಸಿಗೆ ಬಹಿರಂಗ ಆಹ್ವಾನವೇ.
ಕೇಂದ್ರ- ರಾಜ್ಯಗಳ ನಡುವಣ ಬಾಂಧವ್ಯದ ಪ್ರಸ್ತಾಪ ಮಾಡಲು ಪ್ರಧಾನಿ ಸಿದ್ಧರಾಗಿಯೇ ಬಂದಿದ್ದರು. ಕೇಂದ್ರ-ರಾಜ್ಯಗಳು ಒಟ್ಟಾಗಿ ಸೇರಿ ಪರಸ್ಪರ ಸಹಕಾರ ಮನೋಧರ್ಮವನ್ನು ಪ್ರದರ್ಶಿಸಿದರೆ ಭಾರತ ಒಂದು ಸಹಕಾರ ಸಿದ್ಧಾಂತ ಆಧರಿತ ಕೂಟ ರಾಷ್ಟ್ರವಾದೀತು. ಹಾಗಾಗಬೇಕೆನ್ನುವುದೇ ತಮ್ಮ ಆಸೆ ಎಂದು ಸಾರಿದ ಮರುಕ್ಷಣದಲ್ಲೇ ಅವರು ಹಿಂದೆ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಒಂದು ಹಂತದಲ್ಲಿ 40 ಪತ್ರಗಳನ್ನು ಬರೆದರೂ ಒಂದಕ್ಕೂ ಪತ್ರ ಸ್ವೀಕಾರವಾದ ವಿಚಾರ ತಿಳಿಸುವ ಉತ್ತರ ಹೋಗಿರಲಿಲ್ಲವೆಂದು ಕುಟುಕಿದರು.
ಉಳಿದಂತೆ ಮೋದಿಯವರ ಭಾಷಣ ದೇಶದ ಭವ್ಯ ಭವಿಷ್ಯದ ಚಿಂತನೆಗೆ ಮೀಸಲು. ಭಾರತಕ್ಕೆ ಹಗರಣಗಳ ನಾಡು ಎನ್ನುವ ಅಪಖ್ಯಾತಿ ಅಂಟಿರುವುದನ್ನು ತೊಳೆದು ಹಾಕಬೇಕಾದ ಅಗತ್ಯ, ನಾಡನ್ನು ಕೌಶಲಗಳ ಬೀಡಾಗಿ ಪರಿವರ್ತಿಸುವ ಮಾತು, ಸರ್ಕಾರದ ಪರವಾಗಿ ರಾಷ್ಟ್ರಪತಿ ಮಾಡಿದ ಭಾಷಣ ಕೇವಲ ಸಂಪ್ರದಾಯದ ಪಾಲನೆಯಲ್ಲ, ಅದರಲ್ಲಿ ಅಡಕವಾಗಿರುವ ಎಲ್ಲಾ ವಿಷಯಗಳೂ ಪವಿತ್ರವಾದದ್ದೇ ಎನ್ನುವ ಭರವಸೆಗಳೊಡನೆ ಮಾತು ಮುಕ್ತಾಯವಾಯಿತು.
ಸದನದ ಸದಸ್ಯರೆಲ್ಲರ ಪ್ರತಿಕ್ರಿಯೆಯೂ ಸೂಕ್ತ ರೀತಿಯಲ್ಲೇ ಇದ್ದದ್ದು ಬುಧವಾರದ ಲೋಕಸಭೆ ಕಾರ್ಯಕಲಾಪದ ವಿಶೇಷ.  ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪಾಂಡವ- ಕೌರವರ ಮಾತಿಗೆ ಪ್ರತಿಕ್ರಿಯೆಯ ರೂಪದಲ್ಲಿ ಮೋದಿಯವರು ಆ ಕಾಲ ಈಗ ಮುಗಿದು ಹೋಗಿದೆ ಬಿಡಿ ಎಂದು ಹೇಳಿದ್ದು, ಸಮಯೋಚಿತ. ಜಗಳವಾಡಲಿಲ್ಲ. ಕೊನೆಗೆ ರಾಷ್ಟ್ರಪತಿ ಸಂಸತ್ತಿನ ಉಭಯ ಸದನಗಳ ಎಲ್ಲಾ ಸದಸ್ಯರನ್ನೂ ಉದ್ಧೇಶಿಸಿ ಮಾಡಿದ ಭಾಷಣಕ್ಕೆ ವಂದನೆಯನ್ನು ಅರ್ಪಿಸುವ ನಿರ್ಣಯಕ್ಕೆ ಸೂಚನೆಯಾಗಿದ್ದ ಎಲ್ಲಾ ತಿದ್ದುಪಡಿಗಳನ್ನು ತಿರಸ್ಕರಿಸಿದ ಆನಂತರ ನಿರ್ಣಯವನ್ನು ಸದನ ಸರ್ವಾನುಮತದಿಂದ ಅಂಗೀಕರಿಸಿತು. ದೀರ್ಘಕಾಲದ ಅನಂತರದ ಇಂತಹ ಅನುಭವ ಮತ್ತೆ ಕಂಡು ಬಂದಿದೆ. ಅದು ಹೀಗೇ ಮುಂದುವರಿಯಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement