ಡೊನೇಷನ್ ನಿಯಂತ್ರಣ ಪ್ರಾಧಿಕಾರ ರಚನೆಯಾಗಲಿ
ಚಿಕ್ಕಮಗಳೂರಿನ ಪೈಂಟರ್ ರುದ್ರೇಶ್ ಎಂಬುವರು ತಮ್ಮ ಮಕ್ಕಳ ಶಾಲಾ ಶುಲ್ಕವನ್ನು ಭರಿಸಲಾಗದೆ ನೇಣಿಗೆ ಶರಣಾದ ಸಂಗತಿಯನ್ನು ಮಾಧ್ಯಮಗಳಲ್ಲಿ ಓದಿ ಖೇದವಾಯಿತು. ಆರ್ಟಿಐ ಸಮರ್ಪಕವಾಗಿ ಜಾರಿಗೊಂಡಿದ್ದರೆ ಈ ಸಾವು ತಪ್ಪಿಸಬಹುದಿತ್ತು. ಇತ್ತ ಬೆಂಗಳೂರಿನಲ್ಲಿ ಕೆಲವು ಬಾಲವಿದ್ಯಾರ್ಥಿಗಳು ತಮ್ಮ ಆರ್ಟಿಐನ ಕೋಟಾಗಾಗಿ ಕೋರ್ಟಿನ ಮೆಟ್ಟಿಲೇರಿರುವುದು ದಾಖಲಾಗಿದೆ. ಈ ಪ್ರಕರಣಗಳ ನಂತರವಾದರೂ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಯುಪಿಎ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳು ವಿದ್ಯಾವಂತರಾಗಬೇಕೆಂದು ಬಯಸಿ ಕಡ್ಡಾಯ ಶಿಕ್ಷಣದ ಹಕ್ಕು (ಆರ್ಟಿಐ) ಜಾರಿಗೆ ತಂದಿತ್ತು. ಇದರಂತೆ ಎಲ್ಲ ವರ್ಗದ ಮಕ್ಕಳು ಮನೆ ಸಮೀಪದ ಖಾಸಗಿ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯಬಹುದಾಗಿದೆ. ಪ್ರತಿ ಮಗುವಿಗೆ ತಗಲುವ ವೆಚ್ಚವನ್ನು ಸರ್ಕಾರ ಭರಿಸುತ್ತಿದೆ.
ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ವರ್ಷವೂ ಡೊನೇಷನ್ ಏರಿಕೆಯಾಗುತ್ತಲೇ ಇದೆ. ಬೋಧನಾ ಶುಲ್ಕ, ಶಾಲಾ ಶುಲ್ಕಗಳ ಸಂಗ್ರಹಣೆಗೂ ಗೊತ್ತುಗುರಿ ಇಲ್ಲ. ಸಂಗ್ರಹಿಸುತ್ತಿರುವ ಬೋಧನಾ ಶುಲ್ಕ ಮಿತಿ ಮೀರಿದೆ. ತಾಳೆ ನೋಡಿದರೆ ವಂತಿಗೆಗೂ ಮೀರಿ ಬೆಳೆಯುತ್ತ್ತಿದೆ! ಎಲ್ಲೆ ಮೀರಿದ ಶುಲ್ಕವು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವುದು ಸತ್ಯ.
ಸರ್ಕಾರ ಪಾವತಿಸುವ ಶುಲ್ಕ ತಡವಾಗುತ್ತದೆ. ಅವರು ಕೊಡುವ ಮೊತ್ತ ವಂತಿಗೆ ರಹಿತ, ಅಭಿವೃದ್ಧಿ ಶುಲ್ಕ ರಹಿತವಾಗಿದೆ ಎಂಬ ಕಾರಣಕ್ಕೆ ಖಾಸಗಿ ಶಾಲೆಗಳವರು ಎಲ್ಲ ವಿದ್ಯಾರ್ಥಿಗಳಿಗೂ ವಂತಿಗೆಯನ್ನು ದುಪ್ಪಟ್ಟು ಮಾಡಿವೆ. ಅಧಿಕ ಡೊನೇಷನ್/ಕಟ್ಟಡ ನಿಧಿ/ಬೋಧನಾ ಶುಲ್ಕ ಸಂಗ್ರಹಿಸುತ್ತಿರುವ ಖಾಸಗಿ ಶಾಲೆಗಳ ಮೇಲೆ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ದಾಳಿ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲೇಬೇಕಾಗಿದೆ. ಕೂಡಲೇ ಗಮನ ಹರಿಸಿ, ಶಾಲಾ ಶುಲ್ಕ ಹೊಡೆತದಿಂದ ವಿದ್ಯಾರ್ಥಿಗಳನ್ನು ರಕ್ಷಿಸಬೇಕಿದೆ. ತುರ್ತಾಗಿ ಡೊನೇಷನ್, ಶಾಲಾ ಶುಲ್ಕ ನಿಯಂತ್ರಣ ಪ್ರಾಧಿಕಾರ ಸ್ಥಾಪನೆಯಾಗಬೇಕಿದೆ. ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಲ್ಲಿ ಅವುಗಳನ್ನು ರಾಷ್ಟ್ರೀಕರಣ ಮಾಡಬೇಕಾಗಿದೆ.
ವಿದ್ಯಾರ್ಥಿಗಳು/ಪೋಷಕರು ಪ್ರತಿಯೊಂದು ಶಿಕ್ಷಣ ಸಂಸ್ಥೆಯಿಂದಲೂ ಅರ್ಜಿಯನ್ನು ತರುವುದರಿಂದ ಹಣ, ಸಮಯ ವ್ಯರ್ಥವಾಗುತ್ತಿದೆ. ಪ್ರತಿ ತಾಲೂಕು ಅಥವಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ಬೆಸೆಯಬೇಕಿದೆ. ಈ ಪರಿಧಿಯಲ್ಲಿ ಏಕ ಗವಾಕ್ಷಿ ಪದ್ಧತಿಯ ಮೂಲಕ ದಾಖಲಾತಿಗಳು ಆರಂಭವಾದರೆ ಪೋಷಕರಿಗಾಗುತ್ತಿರುವ ಆರ್ಥಿಕ ಹೊಡೆತವನ್ನು ಎಷ್ಟೋ ತಗ್ಗಿಸಬಹುದು.
-ನೆ.ಲ. ನರೇಂದ್ರಬಾಬು, ಬೆಂಗಳೂರು
ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com