ತಪ್ಪಾಯ್ತು ತಿದ್ಕೋತೀವಿ
ಮೈಸೂರಿನಿಂದ ಪ್ರೊ. ಎಚ್. ಸಿದ್ದಲಿಂಗಯ್ಯ ಅವರು ಬರೆಯುತ್ತಾರೆ- "ಮರೆ' 'ಮೊರೆ' ಎಂಬ ಶಬ್ದಗಳು ಕ.ಪ್ರ.ದಲ್ಲಿ ಸರಿಯಾಗಿ ಬಳಕೆಯಾಗುತ್ತಿಲ್ಲ. ಅವುಗಳಲ್ಲಿ ಒಂದರ ಅಶುದ್ಧ ಪ್ರಯೋಗ ಮೇ7ನೇ ಪತ್ರಿಕೆಯ 4ನೇ ಪುಟದಲ್ಲಿದೆ. 'ಬೇಹು ಬಂಧನ ಬೇಡ: ಗೂಢಚರ್ಯೆ ತನಿಖೆ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋದ ಅಪ್ಪ-ಮಗಳು. ಸುದ್ದಿ ತಲೆಬರಹದಲ್ಲಿ 'ಮರೆ' ಬಳಕೆಯಾಗಬೇಕಿತ್ತು.'
'ಏಕೆಂದರೆ ಮರೆಹೋಗು ಎಂಬುದು ಶುದ್ಧ ಪ್ರಯೋಗವೇ ಹೊರತು 'ಮೊರೆ ಹೋಗು' ಎಂಬುದು ಶುದ್ಧ ಪ್ರಯೋಗವಲ್ಲ. ಮೊರೆಯಿಡು ಶುದ್ಧ ಪ್ರಯೋಗ. ಅದನ್ನು ಮೊಟಕುಗೊಳಿಸಿ ಪ್ರಯೋಗಿಸುವಾಗ ಮೊರೆ ಎಂದಷ್ಟೇ ಬಳಸಬೇಕು. ಆದ್ದರಿಂದ ಮೇಲ್ಕಂಡ ಸುದ್ದಿ ತಲೆಬರಹ ಗೂಢಚರ್ಯೆ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಮರೆ ಹೋದ ಅಪ್ಪ-ಮಗಳು ಎಂದಿರ ಬೇಕಾಗಿತ್ತು. ಅಥವಾ ಗೂಢಚರ್ಯೆ ನಿಲ್ಲಿಸುವಂತೆ ಅಪ್ಪ-ಮಗಳು ಸುಪ್ರೀಂ ಕೋರ್ಟ್ಗೆ ಮೊರೆ ಎಂದಿರಬೇಕಾಗಿತ್ತು' ಎಂದಿ ದ್ದಾರೆ.
ಚಾಮರಾಜನಗರದಿಂದ ಎಂ.ಬಿ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ಮೇ 15ರಂದು 'ಬೈಟುಕಾಫಿ' ಪುಟ 2ರಲ್ಲಿ ಎರಡು ಕಡೆ ತಪ್ಪುಗಳು ಗೋಚರಿಸಿವೆ. 'ಬನ್ನಿಮಂಟಪ ಹೆಣ್ಣಲ್ಲವೇ!' ನಾಟಕ ಲೇಖನದ ಕಲಂ 21ರಲ್ಲಿ ಜತೆಗೆ 'ಹೆಣ್ಣು ಈ ಸೋಷಣೆಯ ವಿರುದ್ಧ ನಡೆಸುತ್ತಾ ಬಂದಿರುವ ಹೋರಾಟದ ಪರಿಚಯವನ್ನೂ ಮಾಡಿಕೊಡುತ್ತದೆ' ಎಂದಿದೆ. ಈ ಶೋಷಣೆಯ ಆಗಬೇಕಿತ್ತಲ್ಲವೇ?'
'ಸಲ್ಲಾಪ -ಸವತಿಯಾದ ಉಷ್' ಲೇಖನದಲ್ಲಿ 'ಅದರಲ್ಲೇ ಅರ್ಧರಾತ್ರಿ ಕಲೆಯಿತು' ಎಂದಿದೆ. ಅದು ಅರ್ಧರಾತ್ರಿ ಕಳೆಯಿತು ಎಂದಾಗಬೇಕಿತ್ತು ಅಲ್ಲವೇ?' ಎಂದಿದ್ದಾರೆ.
ಬಾಗಲಕೋಟೆಯ ಇಳಕಲ್ಲದಿಂದ ಶ್ರೀಕಾಂತ ಮುದಗಲ್ಲ ಅವರು ಬರೆಯುತ್ತಾರೆ- 'ಮೇ 14ರ ಸಂಚಿಕೆಯ ಪುಟ 2ರಲ್ಲಿ 'ವಾಲ್ಮೀಕಿ ಯಾರು ಮುಟ್ಟುಗೋಲು ಹಾಕಿ' ಶೀರ್ಷಿಕೆಯ ಸುದ್ದಿ ಪ್ರಕಟವಾಗಿದೆ. ಆ ಫೋಟೋ ಕೆಳಗೆ 'ರಸ್ತೆ ಮಧ್ಯದಲ್ಲಿ ಟೈರ್ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದ ದೃಶ್ಯ' ಎಂದಿದೆ. ಫೋಟೋದಲ್ಲಿ ಟೈರ್ಗೆ ಬೆಂಕಿ ಹಚ್ಚಿದ ಅಥವಾ ರಸ್ತೆ ತಡೆ ನಡೆಸಿದ್ದು ಕಾಣುವುದಿಲ್ಲ. ಆದರೆ ಅಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯುತ್ತಿರುವ ಫೋಟೋ ಇದೆ. ಫೋಟೋ ಮತ್ತು ಅದಕ್ಕೆ ಸಂಬಂಧಿಸಿದ ವಿವರ ಒಂದಕ್ಕೊಂದು ಹೊಂದಿಕೆ ಇರಬೇಕಲ್ಲವೇ?' ಎಂದಿದ್ದಾರೆ.
ಸಾಮಾನ್ಯವಾಗಿ 2-3 ಫೋಟೊಗಳನ್ನು ಪುಟಕ್ಕೆ ಕಳುಹಿಸಲಾಗಿರುತ್ತದೆ. ಅದರ ಜತೆಗೆ ಫೋಟೊ ಅಡಿಬರಹವನ್ನೂ ನೀಡಿರುತ್ತಾರೆ. ಅದರಲ್ಲಿ ಯಾವುದನ್ನು ಪ್ರಕಟಿಸಬೇಕೆಂದು ಪುಟ ನಿರ್ವಹಿಸುವ ಉಪಸಂಪಾದಕರು ನಿರ್ಧರಿಸಬಹುದು. ಅಂತಹ ಸಂದರ್ಭದಲ್ಲಿ ಫೋಟೊ ಮತ್ತು ಅಡಿಬರಹ ಅದಲುಬದಲಾಗಿರಬೇಕು.
ವಿಶ್ವೇಶ್ವರ ಭಟ್