ತಪ್ಪಾಯ್ತು ತಿದ್ಕೋತೀವಿ
ಸತ್ಯನಾರಾಯಣ ಭಟ್ ಪತ್ರ ಕಳುಹಿಸಿದ್ದಾರೆ, "ಪ್ರತ್ಯೇಕ ಅಪಘಾತದಲ್ಲಿ 7 ಜನರ ಸಾವು' ಈ ರೀತಿಯ ವಾಕ್ಯ ರಚನೆಯನ್ನು ಪತ್ರಿಕೆಯಲ್ಲಿ ಕಾಣುತ್ತೇವೆ. 'ಪ್ರತಿ' 'ಏಕ' ಪ್ರತ್ಯೇಕ ಅಂದರೆ ಪ್ರತಿ ಒಂದು. ಅಂದರೆ ಪ್ರತಿ ಒಂದು ಅಪಘಾತದಲ್ಲಿ 7 ಜನರ ಸಾವು ಎಂದಾಯ್ತು. ಬಹುಷಃ ವರದಿ ಹೇಳ ಹೊರಟಿರುವುದು, 'ಅಪಘಾತದಲ್ಲಿ ಒಟ್ಟು ಏಳು ಸಾವು' ಎಂದಿರಬೇಕು. ಸಾಮಾನ್ಯವಾಗಿ 'ಪ್ರತ್ಯೇಕ' ಶಬ್ದವನ್ನು 'ಬೇರೆ' ಎಂಬ ಅರ್ಥದಲ್ಲಿ ಉಪಯೋಗಿಸುವುದು ವಾಡಿಕೆ. 'ಬೇರೆ ಬೇರೆ' ಎಂಬ ಅರ್ಥ ಬರಬೇಕಾದರೆ 'ಪ್ರತ್ಯೇಕ ಪ್ರತ್ಯೇಕ' ಎಂದು ಹೇಳುತ್ತಾರೆ. ಹಾಗಾಗಿ 'ಪ್ರತ್ಯೇಕ ಅಪಘಾತದಲ್ಲಿ ಸಾವು' ಎನ್ನುವ ಬದಲು 'ಏಳು ಅಪಘಾತದಲ್ಲಿ(ಅಪಘಾತಗಳಲ್ಲಿ) ಒಟ್ಟು ಏಳು ಸಾವು' ಎಂದು ಬರೆಯುವುದು ಸೂಕ್ತ ಎಂದು ನನ್ನ ಅನಿಸಿಕೆ' ಎಂದಿದ್ದಾರೆ.
'ಪ್ರತ್ಯೇಕ ಅಪಘಾತದಲ್ಲಿ 7 ಸಾವು' ಎನ್ನುವುದನ್ನು ಯಾರೂ 'ಪ್ರತಿ ಒಂದು ಅಪಘಾತದಲ್ಲಿ 7 ಸಾವು' ಎಂದು ಅರ್ಥೈಸುವುದಿಲ್ಲ. ನಾಲ್ಕೈದು ಅಪಘಾತಗಳ ವರದಿಯನ್ನು ಸೇರಿಸಿ ಒಂದೇ ಸುದ್ದಿ ಮಾಡುವಾಗ 'ಪ್ರತ್ಯೇಕ ಅಪಘಾತಗಳಲ್ಲಿ....' ಎಂಬ ಪ್ರಯೋಗ ಮಾಡುತ್ತಾರೆ, ಇದು ಸರಿಯಾಗಿದೆ.
ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್.ರಾಘವೇಂದ್ರ ಮಿಂಚಂಚೆ ಕಳುಹಿಸಿದ್ದಾರೆ. 'ಪ್ರೀತಿ ಮಾ(ತನಾ)ಡಬಾರದು ಮಾ(ತನಾ)ಡಿದರೆ ಜಗಕೆ ಹೆದರಬಾರದು....' ಎನ್ನುವ ಪ್ರೇಮಲೋಕದ ಮಾತು ಪ್ರಸ್ತುತವಾದ್ದರಿಂದ ಮತ್ತು ಈ ಅಂಕಣಕ್ಕೆ ಹಿಂದಿ ಚಿತ್ರತಾರೆ, ಮಾಯಾಂಗನೆ ಪ್ರೀತಿ ಜಿಂಟಾ ಮೊದಲ ಎಂಟ್ರಿ ಕೊಡುತ್ತಿರುವುದರಿಂದ ಭಟ್ಟರು ಖಂಡಿತವಾಗಿಯೂ ಬರಮಾಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸದಿಂದ ಈ ಮಿಂಚಂಚೆ. ಜೂ.15 ರ 'ಕನ್ನಡಪ್ರಭ'ದಲ್ಲಿ ಪ್ರೀತಿಯದ್ದೇ ಕಲರವ. 'ಸಂಡೆ ಸಂಡಿಗೆ'ಯ 'ಕರಂ ಕುರಂ' ಜತೆಗೆ ಪ್ರೀತಿ ಕುರಿತಾದ ಸುದ್ದಿ ಈ ಮಿಂಚಂಚೆ ಮೂಲ. ಪ್ರೀತಿ ಜಿಂಟಾ ಮೇಲೆ ಲೈಂಗಿಕ ಕಿರುಕುಳ ಸಂಬಂಧಿಸಿದ್ದಂತೆ ಒಂದು ಸುದ್ದಿ ಪ್ರಕಟವಾಗಿದ್ದು, ಸುದ್ದಿಯಲ್ಲಿ ಅವರನ್ನು 'ಮಾಲಕಿ' ಎಂದು ಕರೆಯಲಾಗಿದೆ. ಈ ಶಬ್ದವನ್ನು ಸಾಮಾನ್ಯ ಓದುಗ ಜೀರ್ಣಿಸಿಕೊಳ್ಳುವುದು ಬಹಳ ಕಷ್ಟ. ಕಿಂಗ್ಸ್ ಇಲೆವೆನ್ ಪಂಂಜಾಬ್ ತಂಡದ ಮಾಲೀಕತ್ವವನ್ನು ಇವರು ಹೊಂದಿದ್ದರೆಂಬುದು ನಿಜ. 'ಕನ್ನಡಪ್ರಭ' ಹೊಸ ಹೊಸ ಪದಗಳನ್ನು ಆವಿಷ್ಕಾರ ಮಾಡಿದಾಗಲೆಲ್ಲ ಉದಾ. ಹತ್ಯಾಚಾರ, ತುಣುಕು ಕ್ರಿಕೆಟ್, ... ಇತ್ಯಾದಿ ಬೆನ್ನು ತಟ್ಟುತ್ತಾ ಬಂದಿರುವ ಓದುಗರಿಗೆ ಮಾಲಕಿ ಪದದ ತಲೆ ಬುಡವೇ ಅರ್ಥವಾಗುತ್ತಿಲ್ಲ. ನಮ್ಮ ಕನ್ನಡ ಶಬ್ದ ಭಂಡಾರ ಅತ್ಯಂತ ಶ್ರೀಮಂತ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಯಜಮಾಂತಿ, ಒಡತಿ ... ಈ ಪದಗಳ ಸರಕು ಬಳಸಿದ್ದರೆ ಚೆನ್ನಾಗಿತ್ತು. ಹೊಸ ಪದಗಳ ಆವಿಷ್ಕಾರಕ್ಕೆ ಓದುಗರ ಅಭ್ಯಂತರ ಖಂಡಿತ ಇಲ್ಲ. ಆದರೆ ಪದ ಬಳಸುವಾಗ ಜಾಣ್ಮೆ ಮೆರೆಯಬೇಕು. ಆಗ ಓದುಗರು ಫುಲ್ಖುಷ್' ಎಂದಿದ್ದಾರೆ.
ವಿಶ್ವೇಶ್ವರ ಭಟ್