ಯುದ್ಧ ಕಾಲದ ಶಸ್ತ್ರಾಭ್ಯಾಸ
ಮುಕ್ತ ಪೇಟೆಯಲ್ಲಿ ಆಹಾರ ಧಾನ್ಯಗಳ ಬೆಲೆ ಭಾರಿ ಪ್ರಮಾಣದಲ್ಲೇ ಹೆಚ್ಚಿದೆ. ಮೇ ತಿಂಗಳ ಪೇಟೆ ದರಗಳ ಲೆಕ್ಕ ಹಿಡಿದರೆ ಹಣದ ಅತಿಪ್ರಸರಣ ದರದ ಏರಿಕೆ ಶೇಕಡಾ ಆರರಷ್ಟು. ಆಹಾರ ಪದಾರ್ಥಗಳ ಬೆಲೆಯ ಲೆಕ್ಕವನ್ನೇ ಹಿಡಿದರೆ, ಆ ಏರಿಕೆಯ ದರ ಶೇಕಡಾ 9 ರಷ್ಟು.
ಈಗ ತಾನೇ ಪ್ರಕಟವಾಗಿರುವ ಈ ಅಂಕಿ - ಅಂಶಗಳನ್ನು ತತ್‌ಕ್ಷಣದಲ್ಲೇ ಗಮನಿಸಿ, ಆಹಾರ ಮಂತ್ರಾಲಯ ಹಲವು ತುರ್ತು ಕ್ರಮಗಳನ್ನು ಕೈಗೊಳ್ಳುವ ನಿರ್ಧಾರವನ್ನು ಪ್ರಕಟಿಸಿರುವುದು ಸ್ವಾಗತಕ್ಕೆ ಅರ್ಹ. ಆದರೆ ಸರ್ಕಾರ ಇಂತಹ ಕ್ರಮ ಕೈಗೊಳ್ಳುವುದಕ್ಕೆ ಸೂಚ್ಯಂಕಗಳ ಪ್ರಕಟಣೆಗೇ ಕಾಯುವುದೇಕೆ ಎನ್ನುವುದು ಸಾಮಾನ್ಯರಿಗೆ ಅರ್ಥವಾಗುವ ವಿಚಾರವಲ್ಲ.
ಈಗ ಸರ್ಕಾರ ಪ್ರಕಟಿಸಿರುವ ಬೆಲೆ ಏರಿಕೆ ವಿರುದ್ಧದ ಸಮರ ನೀತಿಯಲ್ಲಿ ಒಂದು ಪ್ರಮುಖವಾದ ಅಂಶ ಎಂದರೆ ಆಹಾರ ನಿಗಮದಲ್ಲಿನ ದಾಸ್ತಾನಿನಿಂದ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲೇ ಮುಕ್ತ ಪೇಟೆಗೆ ಕಾಳು ಒದಗಿಸುವುದು. ಇದರ ಜತೆಯಲ್ಲೇ ಇನ್ನೂ ಹಲವಾರು ಕ್ರಮಗಳೂ ಪ್ರಕಟವಾಗಿವೆ. ಸರ್ಕಾರದ ಪ್ರತಿಕ್ರಿಯೆ ಕ್ಷಿಪ್ರವಾಗಿ ಪ್ರಕಟವಾಗಿದ್ದು ಒಳ್ಳೆಯದೇ. ಆದರೆ ಇಂತಹ ಕ್ರಮಗಳು ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸುವುದಿಲ್ಲ. ಏನಿದ್ದರೂ ಈಗ ಲಭ್ಯವಾಗುವ ಪರಿಹಾರ ತಾತ್ಕಾಲಿಕವಾದದ್ದು.
ಸದ್ಯಕ್ಕೆ ಮುಕ್ತ ಪೇಟೆಯಲ್ಲಿ ಆಹಾರ ನಿಗಮದಲ್ಲಿ ದಾಸ್ತಾನಿನ ಕೊರತೆ ಇಲ್ಲ. ಪೇಟೆಗೆ ಅಗತ್ಯವಾದಷ್ಟು ಧಾನ್ಯ ಪೂರೈಕೆ ಈಗ ಸಾಧ್ಯ. ಆದರೆ, ಈಗಿನ ಸ್ಥಿತಿಯೇ ಮುಂದುವರಿದರೆ, ಸೆಪ್ಟೆಂಬರ್ ವೇಳೆಗೆ ಆಹಾರ ಧಾನ್ಯಗಳ ದಾಸ್ತಾನು ಕಡಿಮೆಯಾದಾಗ, ಮುಕ್ತ ಪೇಟೆಯಲ್ಲಿ ಕೊರತೆ ಕಂಡುಬರಬಹುದು. ಆ ಪರಿಸ್ಥಿತಿಯನ್ನು ಎದುರಿಸಲೂ ಸರ್ಕಾರ ಸಿದ್ಧವಾಗುತ್ತಿದೆ. ಬೇಳೆ ಕಾಳುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಆದೇಶ ನೀಡಲಾಗಿದೆ.
ಭಾರತದಂತಹ ದೊಡ್ಡ ದೇಶ ವಿಶ್ವದ ಆಹಾರದ ಮಾರುಕಟ್ಟೆಯನ್ನು ದಿಢೀರನೇ ಪ್ರವೇಶಿಸಿದರೆ ಪೇಟೆಯಲ್ಲಿ ಏರುಪೇರಾಗಬಹುದು. ಅದು ಮುಂದಿನ ಮಾತು. ಪ್ರತಿಬಾರಿ ಆಹಾರ ಧಾನ್ಯಗಳ ಪೂರೈಕೆಯ ಸಮಸ್ಯೆ ಕಂಡು ಬಂದಾಗಲೆಲ್ಲ ಸರ್ಕಾರದ ವಕ್ತಾರರು ದೀರ್ಘಾವಧಿಯ ದೂರಗಾಮಿ ನೀತಿಯ ಪ್ರಸ್ತಾಪ ಮಾಡುವುದುಂಟು. ಆದರೆ ಇದುವರೆಗಿನ ಅನುಭವದಲ್ಲಿ ಸರ್ಕಾರ ಅಂತಹ ಯೋಜನೆಗಳನ್ನು ಪ್ರಕಟಿಸಿಲ್ಲ.
ಸುಗ್ಗಿಯ ಕಾಲದಲ್ಲಿ ಮೊದಲು ಪೇಟೆಗೆ ಬರುವ ಧಾನ್ಯವನ್ನು ಅಂದಿನ ನ್ಯಾಯ ಬೆಲೆಯಲ್ಲಿ ಸಂಗ್ರಹಿಸುವುದು ಆಹಾರ ನಿಗಮದ ಹಕ್ಕು. ರಾಜಕೀಯ ಒತ್ತಡಗಳಿಗೆ ಒಳಗಾಗಿ, ಆಹಾರ ನಿಗಮದ ಚಟುವಟಿಕೆ ಆಗಿಂದ್ದಾಗ್ಗೆ ಬದಲಾಗುತ್ತಲೇ ಹೋಗುತ್ತದೆ. ದೇಶದಲ್ಲಿ ನಿಜವಾದ ಧಾನ್ಯ ವ್ಯಾಪಾರ ಆರಂಭವಾಗುವುದು ತಡವಾಗಿ, ಆ ವೇಳೆಗೆ ಧಾನ್ಯದ ದಾಸ್ತಾನೂ ಕಡಿಮೆಯಾಗುತ್ತದೆ. ಆದ್ದರಿಂದ ಬೆಲೆ ಏರಿಕೆ ಸಹಜ.
ಈ ಸಂಬಂಧದಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಸಹಕಾರ ಸಂಘಗಳ ಕಾಯಿದೆಯ ಬದಲಾವಣೆಯ ಮಾತು ಕೇಳಿ ಬರುವುದೂ ತೀರ ಸಹಜ.
ಅಕ್ಕಿ - ಗೋದಿಯಂತಹ ಧಾನ್ಯಗಳನ್ನೇ ಗಮನದಲ್ಲಿಟ್ಟುಕೊಂಡು ಆಹಾರ ಭದ್ರತೆ, ಆಹಾರ ಪೂರೈಕೆ ಹಾಗೂ ಕೃಷಿ ವಲಯದ ಯೋಜನೆಗಳನ್ನು ರೂಪಿಸುವುದು, ಎಲ್ಲ ಬಗೆಯ ಏರುಪೇರುಗಳಿಗೂ ವಾಯಿದಾ ಪೇಟೆಯ ವ್ಯವಹಾರ - ಅವ್ಯವಹಾರಗಳನ್ನು ಟೀಕಿಸುವುದನ್ನು ಬಿಟ್ಟು ಸರ್ಕಾರ ತಾನು ಮಾಡಬೇಕಾದ ಕೆಲಸವನ್ನು ಕ್ಷಿಪ್ರವಾಗಿ ಮಾಡಬೇಕು.
ಈಗ ಈ ವಿಷಯದ ಪರಿಶೀಲನೆಗೆ ಮತ್ತೊಂದು ತಜ್ಞರ ಸಮಿತಿಯ ನೇಮಕ ಅನಗತ್ಯ. ಈಗಾಗಲೇ ವಾಸ್ತವ ಸ್ಥಿತಿಗತಿ ಹಾಗೂ ಸಮಸ್ಯೆಗಳ ಪರಿಹಾರ ಕುರಿತಂತೆ ಬೇಕಾದಷ್ಟು ಸಮಿತಿಗಳ ವರದಿಗಳಿವೆ. ಆ ವರದಿಗಳಲ್ಲಿ ಅಡಕವಾಗಿರುವ ಅಂಶಗಳ ಆಧಾರದ ಮೇಲೇ ಒಂದು ಉತ್ತಮ ಕಾರ್ಯಕ್ರಮವನ್ನು ರೂಪಿಸಬಹುದು. ಅದಕ್ಕೆ ಬೇಕಾದ ರಾಜಕೀಯ ಸಂಕಲ್ಪ ಶಕ್ತಿಯನ್ನು ಸರ್ಕಾರ ಈಗ ಪ್ರದರ್ಶಿಸ ಬೇಕಷ್ಟೇ.