ಸಂಪಾದಕೀಯ

ಕಣ್ಣಿಲ್ಲದ ಹುಡುಗಿ ಊರಿಗೇ ಕಣ್ಣಾದಳು

ಗುಜರಾತಿನ ಒಂದು ಪುಟ್ಟಗ್ರಾಮ ಚಂಗಾ. ಅಲ್ಲಿನ ಒಬ್ಬ ದೃಷ್ಟಿಹೀನ ಬಾಲಕಿ ಸುಧಾಳನ್ನು ಶಾಲೆಗೆ ಸೇರಿಸಲು ಅವಳ ಪೋಷಕರು ಹೋದಾಗ ಆ ಬಾಲಕಿಗೆ ಪ್ರವೇಶ ನೀಡಲು ಶಾಲಾ ಮುಖ್ಯಸ್ಥರು ನಿರಾಕರಿಸಿದರು. ಆದರೆ ಆಕೆಯಲ್ಲಿ ಹುದುಗಿದ್ದ ಅದಮ್ಯ ಉತ್ಸಾಹ, ಕಲಿಯಲೇಬೇಕೆಂಬ ಉತ್ಕಟ ಇಚ್ಛೆಯಿಂದಾಗಿ ಅವಳ ಪೋಷಕರು ಅಹಮದಾಬಾದಿನ ಒಂದು ಅಂಧರ ಶಾಲೆಗೆ ದಾಖಲು ಮಾಡಿದರು. ಅಲ್ಲಿ ಓದಿದ ಸುಧಾ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಮೊದಲಿನ ಸ್ಥಾನವನ್ನೆಂದೂ ಬಿಟ್ಟುಕೊಡಲಿಲ್ಲ. ಕಲೆ, ಸಾಹಿತ್ಯ, ಚಾರಣ, ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿ ಆ ಕ್ಷೇತ್ರಗಳಲ್ಲಿಯೂ ಪರಿಣಿತಳಾದಳು ಸುಧಾ. ಸರ್ಕಾರಿ ನೌಕರಿಗೆ ಹೋಗುವ ಬದಲಾಗಿ ಸಮಾಜಸೇವೆ ಮಾಡಬೇಕೆಂದು ನಿರ್ಧರಿಸಿದಳು. ಆಕೆಗೆ ಸದಾ ಬೆಂಬಲವಾಗಿ ನಿಂತವರು ರಮೇಶ್ ಹಾಗೂ ಉಷಾ ಪಟೇಲ್ ಎಂಬ ದಂಪತಿಗಳು. ಆಕೆಯನ್ನು ತಮ್ಮ ಮಗಳಂತೆಯೇ ಭಾವಿಸಿ ಎಲ್ಲ ಹಂತಗಳಲ್ಲಿಯೂ ಪ್ರೋತ್ಸಾಹಿಸುತ್ತಿದ್ದಾರೆ. ಚಂಗಾ ಗ್ರಾಮಪಂಚಾಯಿತಿಯ ಚುನಾವಣೆಯಲ್ಲಿ ಸ್ಪರ್ಧಿಸಿದ ಸುಧಾ ಚುನಾವಣೆಗಾಗಿ ಒಂದು ಪೈಸೆ ಸಹ ವೆಚ್ಚಮಾಡದೆ, ತನಗಿರುವ ಸಾಮಾಜಿಕ ಕಳಕಳಿಯನ್ನು ಎಲ್ಲರಿಗೂ ಮನಮುಟ್ಟುವಂತೆ ತಿಳಿಸಿ ಹೆಚ್ಚು ಮತಗಳಿಸಿ ಚುನಾಯಿತಳಾದಳು. ನಂತರ ಸರಪಂಚಳಾಗಿ ಅವಿರೋಧವಾಗಿ ಚುನಾಯಿತಳಾಗಿ ಭಾರತದ ಮೊದಲ ಅಂಧ ಸರಪಂಚ್ ಎಂಬ ಅಭಿದಾನಕ್ಕೆ ಪಾತ್ರರಾದಳು. ಸರಪಂಚಳಾಗಿ ಚುನಾಯಿತಳಾದಾಗ ಆಕೆಯ ವಯಸ್ಸು ಕೇವಲ 21. ತನ್ನ ಅಧಿಕಾರಾವಧಿಯಲ್ಲಿ ಜನಹಿತ ಕಾರ್ಯವನ್ನು ಅತ್ಯಂತ ಸಮರ್ಥವಾಗಿ ಮತ್ತು ಪ್ರಾಮಾಣಿಕವಾಗಿ ಮಾಡಿ ಜನಪ್ರೀತಿಯನ್ನು ಗಳಿಸಿದಳು. ಗ್ರಾಮಾಭಿವೃದ್ಧಿಗೆ ಸರ್ಕಾರದಿಂದ ಮಂಜೂರಾದ ಹಣವಲ್ಲದೆ, ಅನಿವಾಸಿ ಭಾರತೀಯರಿಂದಲೂ ಹಣ ಪಡೆದು ಸ್ವಚ್ಛ ನೀರು, ಗುಣಮಟ್ಟದ ರಸ್ತೆಗಳು, ಸುಸಜ್ಜಿತ ಆಸ್ಪತ್ರೆ, ಶಾಲೆ, ಶೌಚಾಲಯಗಳು, ಬಡವರಿಗೆಲ್ಲಾ ಮನೆ, ಹೀಗೆ ಹತ್ತು ಹಲವಾರು ಕಾರ್ಯಗಳನ್ನು ದಕ್ಷತೆಯಿಂದ ಮಾಡಿ ತನ್ನ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿದ್ದಾಳೆ. ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡುವ ಅಂತಾರಾಷ್ಟ್ರೀಯ ಸಾಧನಾ ಪ್ರಶಸ್ತಿಯನ್ನು ಸಹ ಇತ್ತೀಚೆಗೆ ಹವಾಯಿ ದ್ವೀಪದಲ್ಲಿ ಸುಧಾಗೆ ನೀಡಲಾಗಿದೆ. ಪ್ರಸ್ತುತ ಜಲರಾಂ ಜನಸೇವಾ ಟ್ರಸ್ಟಿನ ಮೂಲಕ ವಿಕಲಾಂಗರಿಗೆ ಮತ್ತು ದೃಷ್ಟಿಹೀನರಿಗೆ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ ಅನೇಕ ಯೋಜನೆಗಳನ್ನು ಹಾಕಿಕೊಂಡು ಯಶಸ್ವಿಯಾಗಿ ಮುನ್ನಡೆದಿದ್ದಾಳೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!