ಒಮ್ಮೆ ಹಳ್ಳಿಯ ಒಂದು ಅಂಗಡಿಯಲ್ಲಿ ಮೊಟ್ಟೆಗಳನ್ನು ಮಾರಾಟಕ್ಕಿಟ್ಟಿದ್ದರು. ಆದರೆ ಬೇರೆ ಅಂಗಡಿಗಳಲ್ಲಿ ಮಾರಾಟವಾಗುವಷ್ಟು ಸಂಖ್ಯೆಯಲ್ಲಿ ಆ ಅಂಗಡಿಯಲ್ಲಿ ಮೊಟ್ಟೆಗಳು ಮಾರಾಟವಾಗುತ್ತಿರಲಿಲ್ಲ. ಏಕೆ ಹೀಗೆಂದು ಅಂಗಡಿ ಮಾಲೀಕ ಕೆಲಬಾರಿ ತಲೆಕೆಡಿಸಿಕೊಳ್ಳುತ್ತಿದ್ದ. ಅದನ್ನು ಗಮನಿಸುತ್ತಿದ್ದ ಚಿಕ್ಕವಯಸ್ಸಿನ ಅವನ ಮಗ, ಒಂದು ದಿನ, "ನೀನು ಕೊಡಬೇಡ, ಅಮ್ಮ ಕೊಡಲಿ" ಎಂದು ತಂದೆಗೆ ಸಲಹೆ ನೀಡಿದ. ಏಕೆಂದರೆ ತಂದೆಯ ದೊಡ್ಡ ಕೈಯಲ್ಲಿ ಮೊಟ್ಟೆ ಚಿಕ್ಕದಾಗಿ ಕಾಣುತ್ತಿತ್ತು, ತಾಯಿಯ ಪುಟ್ಟ ಕೈಯಲ್ಲಿ ದೊಡ್ಡದಾಗಿ ಕಾಣುತ್ತಿತ್ತು. ಇದರಿಂದ ಮೊಟ್ಟೆಗಳ ವ್ಯಾಪಾರ ವೃದ್ಧಿಯಾಯಿತು. ಚಿಕ್ಕವಯಸ್ಸಿನಲ್ಲಿಯೇ ಇಂತಹ ಅದ್ಭುತ ಮಾರಾಟಕಲೆಯನ್ನು ಹೊಂದಿದ್ದ ಆ ಬಾಲಕ ಬೇರೆ ಯಾರೂ ಅಲ್ಲ ಅದು ಸರ್ ಥಾಮಸ್ ಲಿಪ್ಟನ್. ವಿಶ್ವಾದ್ಯಂತ ಟೀ ಉದ್ದಿಮೆಯಲ್ಲಿ ಹೆಸರು ಪಡೆದ ಲಿಪ್ಟನ್ ಟೀ ಕಂಪನಿಯ ಮಾಲೀಕ. ಕೃಷಿ ಕಾರ್ಮಿಕನಾಗಿ, ದಿನಸಿ ಅಂಗಡಿಯಲ್ಲಿ ಕೆಲಸಗಾರನಾಗಿ ದುಡಿದು ಅನುಭವ ಗಳಿಸಿದ. ಆಗ ಮಾರುತ್ತಿದ್ದ ಚಹಾ ಬೆಲೆ ಜಾಸ್ತಿ ಇದ್ದುದನ್ನು ಗಮನಿಸಿ, ಚಹಾವನ್ನು ನೇರವಾಗಿ ಗ್ರಾಹಕರಿಗೆ ಮಾರುವುದರಿಂದ ಹೆಚ್ಚಿನ ಲಾಭಗಳಿಸಬಹುದೆಂದು ಮನಗಂಡ. ಶ್ರೀಲಂಕಾದಲ್ಲಿ ಟೀ ತೋಟಗಳನ್ನು ಖರೀದಿಸಿ, ಮೊದಲಬಾರಿಗೆ ಟೀ ಡಬ್ಬಿಗಳಲ್ಲಿ ತುಂಬಿ ದೇಶವಿದೇಶಗಳಿಗೆ ರಫ್ತು ಮಾಡಿ ಜನಪ್ರಿಯಗೊಳಿಸಿದ ವ್ಯಕ್ತಿ. ನೇರವಾಗಿ ಗ್ರಾಹಕರಿಗೆ ಮಾರಾಟಮಾಡುವುದರಿಂದ ಕಡಿಮೆ ಬೆಲೆಗೆ ಟೀಯನ್ನು ಮಾರಾಟಮಾಡಬಹುದೆಂದು ಭಾವಿಸಿ, ಹೊಸ ಪ್ರಯೋಗವೊಂದನ್ನು ಮಾಡಿ ಯಶಸ್ವಿಯಾದ ಉದ್ಯಮಿ. ಉದ್ಯಮ ಪ್ರಾರಂಭಿಸಿದ ಕೇವಲ ಹತ್ತು ವರ್ಷಗಳಲ್ಲಿ ಮಿಲಿಯಾಧಿಪತಿಯಾದ ಲಿಪ್ಟನ್ ತಾನು ಗಳಿಸಿದ ಹಣದಲ್ಲಿ ಒಂದು ಭಾಗವನ್ನು ಸಮಾಜ ಸೇವೆಗೆ ಮತ್ತು ಅಗತ್ಯವಿರುವ ಸಂಘಸಂಸ್ಥೆಗಳಿಗೆ ನೀಡಿ ತನ್ನ ಸಾಮಾಜಿಕ ಕಾಳಜಿಯನ್ನು ಮೆರೆದ. 1931ರಲ್ಲಿ ಬ್ರಿಟನ್ ರಾಣಿ, ಲಿಪ್ಟನ್‌ಗೆ ಸರ್ ಪದವಿ ನೀಡಿ ಗೌರವಿಸಿದಳು. 1952ರಲ್ಲಿ ಲಿಪ್ಟನ್ ಕಂಪನಿ ಸುಧಾರಿತ ಟೀ ಬ್ಯಾಗ್‌ಗಳನ್ನು ತಯಾರಿಸಿ ಹೊಸ ಶಕೆಯನ್ನು ಪ್ರಾರಂಭಿಸಿತು. ಇಂದೂ ಸಹ ಲಿಪ್ಟನ್, ಶ್ರೀಲಂಕಾ, ಭಾರತ, ಚೀನಾ, ಪೂರ್ವ ಆಫ್ರಿಕಾದಲ್ಲಿ ತನ್ನದೇ ಆದ ಟೀ ತೋಟಗಳನ್ನು ಹೊಂದಿದ್ದು ವಿಶ್ವದ 110 ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿದೆ. 2015ರ ವೇಳೆಗೆ ವಿಶ್ದದ ಮೂಲೆ ಮೂಲೆಗೂ ತನ್ನ ಉತ್ಪನ್ನವನ್ನು ಸರಬರಾಜು ಮಾಡುವ ಗುರಿಯನ್ನು ಹೊಂದಿದೆ ಈ ಕಂಪನಿ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ