ರೈಲ್ವೆ ದರ ಏರಿಕೆ ಅನಿವಾರ್ಯ ಸಮಯದ ಆಯ್ಕೆ ತಪ್ಪು
ಲೋಕಸಭೆಯ ಚುನಾವಣೆಗೆ ಮುನ್ನವೇ ಚುನಾವಣೆಯ ಅನಂತರ ಆಗಲೇಬೇಕಾಗಿದ್ದ ಕೆಲಸದ ಅರಿವು ಕಾಂಗ್ರೆಸ್ಸಿಗೆ ಇತ್ತು. ರೈಲ್ವೆಯ ದರಗಳ ಏರಿಕೆ ಅನಿವಾರ್ಯ ಎನ್ನುವುದೂ ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿತ್ತು.
ಆಗಿನ ರೈಲ್ವೆ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಯಾಣಿಕರ ಹಾಗೂ ವಸ್ತುಗಳ ಸಾಗಣೆಯ ದರಗಳ ಏರಿಕೆಯ ಪ್ರಕಟಣೆಯ ವಿವರಗಳನ್ನು ಸಿದ್ಧಪಡಿಸಿಕೊಂಡಿದ್ದರು. ಅದಕ್ಕೆ ಕಾರಣ ಈಗ ರೈಲ್ವೆಯ ಆದಾಯವನ್ನು ಹೆಚ್ಚಿಸದೇ ಹೋದರೆ ಇಡೀ ವ್ಯವಸ್ಥೆಯೇ ಕುಸಿದು ಬೀಳುವ ಅಪಾಯದ ಕರೆಗಂಟೆ ಬಾರಿಸಿದ್ದೇ.
ಆದರೆ ಕಾಂಗ್ರೆಸ್ ಗೆಲ್ಲಲಿಲ್ಲ. ರೈಲ್ವೆ ಮಂತ್ರಾಲಯದ ಆಧಿಪತ್ಯ, ರಾಜ್ಯದವರೇ ಆದ ಡಿ.ವಿ. ಸದಾನಂದಗೌಡರ ಹೆಗಲಿಗೆ ಏರಿತ್ತು. ಅವರ ಕೈಗೆ ಖರ್ಗೆ ಅವರು ಸಿದ್ಧಪಡಿಸಿದ ದಾಖಲೆ ಸಿಕ್ಕಿತ್ತು. ಆ ಆದೇಶವನ್ನು ಈಗ ಪ್ರಕಟಿಸುವುದು ಬೇಡ ಎನ್ನುವ ಅಪ್ಪಣೆಯೂ ಸಿಕ್ಕಿತ್ತು. ಗೌಡರು ಆ ಟಿಪ್ಪಣಿಯನ್ನು ತೆಗೆದು ಮೂಲ ಆದೇಶದ ಒಕ್ಕಣಿಯನ್ನು ಅಲ್ಲಿ ಇಲ್ಲಿ ಸ್ವಲ್ಪ ಬದಲಾಯಿಸಿ, ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡುವಂತೆ, ಸರ್ಕಾರದ ಪ್ರಮುಖರ ಅನುಮತಿ ಪಡೆದು, ಅಂತಿಮ ಪ್ರಕಟಣೆಯನ್ನು ಶುಕ್ರವಾರ ಪ್ರಕಟಿಸಿದರು.
ರೈಲ್ವೆಯ ಆರ್ಥಿಕ ವ್ಯವಸ್ಥೆಯ ಕೆಟ್ಟ ಸ್ಥಿತಿಯ ಪರಿಚಯ ಇದ್ದವರಿಗೆಲ್ಲ ರೈಲ್ವೆ ಪ್ರಯಾಣ ಹಾಗೂ ಸರಂಜಾಮು ಸಾಗಣೆ ದರಗಳ ಏರಿಕೆ ಅನಿವಾರ್ಯವೆನ್ನುವುದು ಗೊತ್ತಿತ್ತು. ಆದರೆ ಚುನಾವಣೆಯಲ್ಲಿ ಗೆದ್ದು ಇನ್ನೂ ನೂರು ದಿನಗಳೂ ಕಳೆಯದೇ ಇರುವ ಸನ್ನಿವೇಶದಲ್ಲಿ ದರಗಳ ಬದಲಾವಣೆ ತುರ್ತು ಪ್ರಕಟಣೆಯ ಅಗತ್ಯವಿತ್ತೇ? ಅದೂ ಅನಿವಾರ್ಯ ಆಗಿತ್ತೇ?
ಸಂಸತ್ತಿನ ಬಜೆಟ್ ಅಧಿವೇಶನ ತಿಂಗಳೊಪ್ಪತ್ತಿನಲ್ಲೇ ಸೇರಬೇಕಾಗಿತ್ತು. ಇದೇ ನಿಜವಾದ ಬಜೆಟ್ ಅಧಿವೇಶನ.
ರೈಲ್ವೆ ಬಜೆಟ್‌ನ ಮಂಡನೆಯೂ ಸಂಸತ್ತಿನಲ್ಲಿ ಆಗಬೇಕಾಗಿತ್ತು. ಅದಕ್ಕೆ ಒಂದೇ ತಿಂಗಳ ಮುಂಚೆ ದರಗಳ ಬದಲಾವಣೆ ಯಾಕೆ? ಬಜೆಟ್‌ನಲ್ಲೇ ಅದನ್ನು ಅಳವಡಿಸುವುದು ಸಾಧ್ಯವಾಗುತ್ತಿರಲಿಲ್ಲವೇ?
ಹಿಂದೆ ಹತ್ತು ವರ್ಷಗಳಲ್ಲಿ ರೈಲ್ವೆ ದರಗಳ ಬದಲಾವಣೆ ಆಗಿರಲಿಲ್ಲ. ಆದರೆ ಕಳೆದ ಎರಡೇ ವರ್ಷಗಳಲ್ಲಿ ಮೂರು ಬಾರಿ ವಿಮರ್ಶೆಯಾಗಿದೆ. ರೈಲ್ವೆಗೆ ದರಗಳ ಪರಿಷ್ಕರಣೆಯ ಅಧಿಕಾರವಿದೆ.
ಪ್ರಾಯಶಃ ಬಿಜೆಪಿ ನಾಯಕರಿಗೆ, ಮಂತ್ರಿಗಳಿಗೆ ಜನರಿಗೆ ರೈಲ್ವೆ ದರಗಳ ವಿಮರ್ಶೆಯ ತುರ್ತು ಅಗತ್ಯವನ್ನು ಮನವರಿಗೆ ಮಾಡಿಕೊಡುವ ಉದ್ದೇಶವಿರಬೇಕು. ಅದಕ್ಕೇ ಬಜೆಟ್‌ಗೆ ಮುಂಚೆಯೇ ಪ್ರಕಟಣೆಯಾಗಿದ್ದು. ಈಗಾಗಲೇ ರೈಲ್ವೆ ದರಗಳ ವಿಮರ್ಶೆ ಕುರಿತ ಚರ್ಚೆ ಆರಂಭವಾಗಿರುವುದರಿಂದ ಬಜೆಟ್ ಸಮಯದಲ್ಲಿನ ಎದುರಾಳಿಗಳನ್ನು ಎದುರಿಸಲು, ಅವರ ಕೂರಂಬುಗಳ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನವೂ ಇಲ್ಲಿ ಇರಬಹುದು. ರೈಲ್ವೆ ದರಗಳ ವಿಮರ್ಶೆ ಅನಿವಾರ್ಯವಾಗಿರುವುದನ್ನು ಒಪ್ಪುವವರೆಲ್ಲ ಸಂಸತ್ತಿನ ಹೊರಗಡೆ ಅದರ ಪ್ರಕಟಣೆಯನ್ನು ಒಪ್ಪುವುದಿಲ್ಲ.
ದರಗಳ ಏರಿಕೆಯ ಪ್ರಮಾಣ ಪ್ರಯಾಣ ದರದಲ್ಲಿ ಶೇಕಡಾ 14.2ರಷ್ಟು, ಸಾಮಾನು ಸರಂಜಾಮು ಸಾಗಣೆಯ ದರದಲ್ಲಿ ಶೇಕಡಾ 6.5ರಷ್ಟು ಏರಿಕೆಯಿಂದ ಹಣದ ಅತಿಪ್ರಸರಣದ ಏರುಪೇರಿನಲ್ಲಿ ವೈಪರೀತ್ಯಗಳೇನೂ ಕಂಡು ಬರಲಿಕ್ಕಿಲ್ಲ. ಪ್ರಯಾಣ ದರದ ಏರಿಕೆಯ ಪರಿಣಾಮ ವೈಯಕ್ತಿಕ ಸಾಮಾನು ಸರಂಜಾಮು ಸಾಗಣೆ ದರ ಏರಿಕೆಯಿಂದ ಹೆಚ್ಚು ಕಡಿಮೆ ಎಲ್ಲ ವಸ್ತುಗಳ ಸಾಗಾಣಿಕೆಯ ವೆಚ್ಚ ಹೆಚ್ಚಾಗುವುದರಿಂದ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಿನ, ಸೂಚ್ಯಂಕಗಳೂ ಮೇಲೇರುವುದು ಅನಿವಾರ್ಯವೇ. ಅದನ್ನು ಸರ್ಕಾರ ನಿಭಾಯಿಸಲೇಬೇಕು. ಕಡಿಮೆ ಪ್ರಯಾಣ ದರಗಳಿಂದ ರೈಲ್ವೆಗೆ ಆಗುತ್ತಿರುವ ನಷ್ಟವನ್ನು ಸಾಮಾನು ಸರಂಜಾಮುಗಳ ದರದ ಏರಿಕೆಯಿಂದ ಬಹುಮಟ್ಟಿಗೆ ನಿಭಾಯಿಸಬಹುದು. ಆದರೂ ರೈಲ್ವೆ ಸಬ್ಸಿಡಿಯ ಪ್ರಮಾಣ ಸುಮಾರು 60,000 ಕೋಟಿ ರುಪಾಯಿಗಳಷ್ಟು. ಅದರಲ್ಲಿ ಶೇಕಡಾ 60ರಷ್ಟು ಪ್ರಮುಖ ಪಟ್ಟಣಗಳ ಆಂತರಿಕ ಸಂಘರ್ಷ ವ್ಯವಸ್ಥೆಯೇ ಕಬಳಿಸುತ್ತಿದೆ ಎನ್ನುವುದು ಗಮನಾರ್ಹ.
ಈ ವ್ಯವಸ್ಥೆ ಹೀಗೇ ಮುಂದುವರಿದಿದ್ದರೆ, ಭಾರತೀಯ ರೈಲ್ವೆ ಒಂದು ರೀತಿಯ ವಿತ್ತೀಯ ರಕ್ತಸ್ರಾವದಿಂದ ಸತ್ತೇ ಹೋಗುವ ಅಪಾಯವೂ ಇದೆ. ಈಗ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಕ್ರಮದಿಂದ ಆ ಅಪಾಯ ತಪ್ಪಿದಂತೆ ಆಗಿದೆ.
ಭಾರತೀಯ ರೈಲ್ವೆ ಈಗಿನ ಕೆಟ್ಟ ಸ್ಥಿತಿಗೆ, ಸುಮಾರು ಹನ್ನೆರಡು ವರ್ಷಗಳ ಕಾಲ ಜನಪ್ರಿಯತೆಯ ನಷ್ಟದ ಹೆದರಿಕೆಯಿಂದ, ಮಮತಾ ಬ್ಯಾನರ್ಜಿ ಅವರಿಂದ ಹಿಡಿದು ಲಾಲೂ ಪ್ರಸಾದ್ ಯಾದವ್ ಅವರವರೆಗೆ ಯಾವ ರೈಲ್ವೆ ಮಂತ್ರಿಯೂ ದರಗಳನ್ನು ಏರಿಸದೇ ರೈಲ್ವೆಯ ಸುರಕ್ಷಾ ವ್ಯವಸ್ಥೆಯನ್ನು ಅಪಾಯಕ್ಕೆ ದೂಡಿದ್ದೂ ಆಗಿತ್ತು.
ಸಾರ್ವಜನಿಕರು ರೈಲ್ವೆಯಿಂದ ಉತ್ತಮ ಸೇವೆಯನ್ನು ಬಯಸುವುದಾದರೆ, ಅದಕ್ಕೆ ತಕ್ಕ ದರವನ್ನು ತೆರಲು ಸಿದ್ಧರಾಗಿರಬೇಕು. ಅದನ್ನು ಈಗಿನ ಕೇಂದ್ರ ಸರ್ಕಾರದ ಕ್ರಮ ಸ್ಪಷ್ಟಪಡಿಸಿದೆ.
ಆದರೆ ದರಗಳ ವಿಮರ್ಶೆಯ ಪ್ರತಿಕ್ರಿಯೆಯನ್ನು ಪ್ರತ್ಯೇಕವಾಗಿ ಆರಂಭಿಸದೇ ರೈಲ್ವೆ ಬಜಟ್‌ನಲ್ಲೇ ಅಳವಡಿಸಿದ್ದರೆ, ಸಂಸತ್ತಿನ ಸಾರ್ವಭೌಮತೆಯನ್ನು ಎತ್ತಿ ಹಿಡಿದಂತೆ ಆಗುತ್ತಿತ್ತು.