ಅತಿಥಿ ಶಿಕ್ಷಕರು
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 28 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರು ನಿವೃತ್ತರಾಗುತ್ತಾರೆ. ಅವರ ಜಾಗಕ್ಕೆ 2014 ಸೆಪ್ಟೆಂಬರ್ ತಿಂಗಳ ಒಳಗೆ 15 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಹೇಳಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ನಿರ್ದೇಶಕರು ಹಾಗೂ ಗುರುಕುಲ ಶಿಕ್ಷಣ ಟ್ರಸ್ಟ್ (ರಿ), ಧಾರವಾಡ ಆಡಳಿತಾಧಿಕಾರಿಗಳೂ ಆದ ಅವರು ದಿ. 12.7.2012ರಲ್ಲಿ ಧಾರವಾಡ ಶಹರಿನಲ್ಲಿರುವ 4 ಸಂಸ್ಕೃತ ಪಾಠಶಾಲೆಗಳಿಂದ ಒಟ್ಟು 11 ಉಪಾಧ್ಯಾಯ ಪಂಡಿತರನ್ನು ಕ್ರಮವಾಗಿ 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಬುದ್ಧರಖಿತ ವಸತಿ ಪ್ರೌಢಶಾಲೆ ಮತ್ತು ವನಿತಾ ಸೇವಾ ಸಮಾಜ ಪ್ರೌಢಶಾಲೆಗೆ ಸಂಸ್ಕೃತ ಭಾಷೆ ಹಾಗೂ ನೀತಿ ಬೋಧನಗೆ ನಿಯೋಜಿಸಿದ್ದಾರೆ.(Deputation) ಈ ಶಾಲೆಗಳಲ್ಲಿ ಸಂಸ್ಕೃತ ಬೋಧನೆಗೆ ಅವಕಾಶವಿಲ್ಲದಿದ್ದರೂ ನೀತಿಪಾಠ ಕನ್ನಡ ಇತ್ಯಾದಿ ವಿಷಯಗಳನ್ನು ಬೋಧಿಸುತ್ತಿದ್ದಾರೆ. ಇಂದಿಗೂ ಅವರು ನಿಯೋಜನೆಯಡಿಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿ 470 ಸಂಸ್ಕೃತ ಪಾಠಶಾಲೆಗಳಿದ್ದು ಅಂದಾಜು 1,250 ಉಪಾಧ್ಯಾಯ ಪಂಡಿತರು ಈ ಪಾಠಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಸಂಸ್ಕೃತ ಪಾಠಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ. ಈ ಹಿನ್ನೆಲೆಯಲ್ಲಿ ಇವರ ಸೇವೆಯನ್ನು ತಾತ್ಕಾಲಿಕವಾಗಿ ಪ್ರಾಥಮಿಕ ಶಾಲೆಗಳಿಗೆ ನಿಯೋಜಿಸಿಕೊಂಡು ಇವರ ಸೇವೆಯನ್ನು ಏತಕ್ಕೆ ಬಳಸಬಾರದು.
-ಗೂಳೂರು ಚನ್ನವೀರಸ್ವಾಮಿ, ಬೆಂಗಳೂರು.
ಕ್ಷೀರ ಪಾವಿತ್ರ್ಯ ಉಳಿಯಲಿ
ಹೈನುಗಾರಿಕೆಯ ಅಭಿವೃದ್ಧಿ ಹಾಗೂ ರೈತರ ಏಳಿಗೆಯ ದೃಷ್ಟಿಯಿಂದ ಹಿಂದಿನ ಬಿಜೆಪಿ ಸರ್ಕಾರದಿಂದ ಆರಂಭಗೊಂಡ ಹಾಲಿಗೆ ಪ್ರೋತ್ಸಾಹ ಧನ, ಪ್ರಸಕ್ತ ಕಾಂಗ್ರೆಸ್ ಸರ್ಕಾರವು ಕೂಡ ಹೆಚ್ಚಳ ಮಾಡಿ ಮುಂದುವರೆಸುತ್ತಿರುವುದು ಶ್ಲಾಘನೀಯ.
ಆದರೆ ಇತ್ತೀಚೆಗೆ ದಲಿತರಿಂದ ಸಂಗ್ರಹವಾಗುವ ಹಾಲಿಗೆ ಪ್ರತ್ಯೇಕವಾಗಿ ಲೀಟರ್ಗೆ ರೂ.2 ಹೆಚ್ಚಿನ ದರ ನೀಡಲು ಸರ್ಕಾರ ಕೈಗೊಂಡಿರುವ ಕ್ರಮ ನಿಜಕ್ಕೂ ಬಿಳಿಯ ಹಾಲಿನಲ್ಲಿ ಕಪ್ಪು ಕದಡಿದಂತೆ ಅನ್ನಿಸುತ್ತಿದೆ.
ಪ್ರಸಕ್ತ ಸರ್ಕಾರ ಪ.ಜಾ. ಮತ್ತು ಪಂಗಡದವರಿಗೆ ಹಸು, ಎಮ್ಮೆ, ಕುರಿ, ಮೇಕೆ ಇತ್ಯಾದಿ ಖರೀದಿಸಲು ಗಣನೀಯ ಮೊತ್ತದ ಅನುದಾನ ಪ್ರಮಾಣ ಹೆಚ್ಚಿಸಿ ಪ್ರೋತ್ಸಾಹಿಸುತ್ತಿರುವುದೂ ಸರಿ. ಆದರೆ ಕೆ.ಎಂ.ಎಫ್ಗೆ ದಿನವಹಿ ಸಂಗ್ರಹವಾಗುವ 35.40 ಲಕ್ಷ ಲೀಟರ್ ಹಾಲಿನಲ್ಲಿ ಪರಿಶಿಷ್ಟರು ನೀಡುವ ಹಾಲನ್ನು ಪತ್ತೆ ಹಚ್ಚಿ ಪ್ರೋತ್ಸಾಹಿಸಲು ಕೈಗೊಂಡಿರುವ ಸರ್ಕಾರದ ಕ್ರಮ ಸಮಾಜದಲ್ಲಿ ಮೇಲಾಗಿ ಗ್ರಾಮೀಣರಲ್ಲಿ ಅಶಾಂತಿಗೆ ಎಡೆಮಾಡುವ ಕ್ರಮವಾಗಿದೆ.
ಪ್ರಜಾಪ್ರಭುತ್ವದ ತತ್ವದಡಿಯಲ್ಲಿ ಸಮಬಾಳ್ವೆ, ಸಮಾನತೆ ಸಾಧಿಸುವ ಬದಲು ಸಂಘರ್ಷಕ್ಕೆಡೆ ಮಾಡಿ ಸರ್ಕಾರ ಸ್ವಯಂಪ್ರೇರಿತ ಕ್ಯಾತೆ-ಜಗಳವುಂಟು ಮಾಡುವ ಕ್ರಮವಾಗಿದೆ. ಹಾಲು ಕರೆಯುವ ಹಸು/ಎಮ್ಮೆ/ಕೆಂಪು/ಕಪ್ಪು ಯಾವುದೇ ಬಣ್ಣದ ಸ್ವರೂಪವಾದರೂ ನೀಡುವ ಹಾಲಿನ ಬಣ್ಣ ಮಾತ್ರ ಬಿಳಿಯಾಗಿದ್ದು, ಪಂಚಾಮೃತದಲ್ಲೊಂದಾದ ಕ್ಷೀರದ ಪಾವಿತ್ರ್ಯ ಮತ್ತು ನೈಜತೆ ಕಾಪಾಡಲು, ಸರ್ಕಾರ ಯೋಚಿಸಿರುವ ಕ್ರಮವನ್ನು ಸಾಮಾಜಿಕ ನ್ಯಾಯದಡಿ ಕೈ ಬಿಡುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದು.
-ಅತ್ತಿಹಳ್ಳಿ ನಂಜೇಗೌಡ, ಚನ್ನರಾಯಪಟ್ಟಣ
ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com