ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ವಿದೇಶಗಳಲ್ಲಿ ಭಾರತದ ಹಣ: ವಿವರ ಪತ್ತೆಗೆ ಯತ್ನ

Mainashree
Updated On : 23 Jun 2014, 9:54 am

ಬಹುಕಾಲದಿಂದಲೂ, ಭಾರತೀಯ ಜನತಾ ಪಾರ್ಟಿಯ ಗಮನ, ವಿದೇಶಗಳಲ್ಲಿ ಠೇವಣಿ ರೂಪದಲ್ಲಿರುವ "ತೆರಿಗೆ ಪಾವತಿಸದ ಹಣವನ್ನು" ಹಿಂದಕ್ಕೆ ತಂದು ಅಂತಹ ಕಳ್ಳ ಹಣದಲ್ಲಿ ವ್ಯವಹರಿಸಿದ ವ್ಯಕ್ತಿಗಳು, ಶಕ್ತಿಗಳನ್ನು ಶಿಕ್ಷಿಸುವ ಕಡೆಗೆ ಹರಿದಿದ್ದು ನಿಜ.
ಚುನಾವಣೆ ಪ್ರಣಾಳಿಕೆಯಲ್ಲಿ ಈ ವಿಚಾರದ ಪ್ರಸ್ತಾಪ ಅನಿವಾರ್ಯ ಎನ್ನುವ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಈಗ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಏಕಪಕ್ಷದ ಸರ್ಕಾರ ನಡೆಸುವಷ್ಟು ಶಕ್ತಿಯನ್ನು ಪಡೆದಿರುವ ಬಿಜೆಪಿ ಆ ವಿಚಾರದಲ್ಲಿ ಸುಮ್ಮನೆ ಕೂತಿಲ್ಲ.
ಹಲವಾರು ವೇದಿಕೆಗಳಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಈ ವಿಚಾರದ ಪ್ರಸ್ತಾಪವನ್ನು ಎತ್ತುತ್ತಲೇ ಇದ್ದಾರೆ. ಈಗ ಜ್ಯೂರಿಚ್ (ಸ್ವಿಸ್) ಗಳ ಪ್ರಕಾರ ಅಲ್ಲಿ ಕಳ್ಳ ಹಣವನ್ನು ಠೇವಣಿ ಇಟ್ಟಿರುವ ಭಾರತೀಯರ ವಿರುದ್ಧ ಕ್ರಮ ಕೈಗೊಳ್ಳುವ ಭಾರತ ಸರ್ಕಾರದ ಎಲ್ಲ ಕ್ರಮಗಳಿಗೂ ಸ್ವಿಸ್ ಬ್ಯಾಂಕ್‌ಗಳು ಬೆಂಬಲ ನೀಡುವ ಭರವಸೆಯನ್ನು ನೀಡಿವೆ. ಅಲ್ಲಿನ ಸರ್ಕಾರದ ಧೋರಣೆಯೂ ಅದೇ. ಆದರೆ ಕಳ್ಳ ಹಣ ಕುರಿತಂತೆ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡದ ಅಧ್ಯಕ್ಷ ಷಹ ಅವರ ಪ್ರಕಾರ ತನಿಖೆಗೆ ಅಗತ್ಯವಾದ ಬೆಂಬಲದ ಭರವಸೆ ಸಿಕ್ಕಿದ್ದರೂ, ಅವರಿಗೆ ಇನ್ನೂ ಯಾವುದೇ ಮೂಲದಿಂದಲೂ ಅಧಿಕೃತ ಮಾಹಿತಿ ಇಲ್ಲ.
ಸೋಮವಾರ ಮಾಧ್ಯಮ ಪ್ರಪಂಚದಲ್ಲಿ ಪ್ರಕಟವಾದ ಕೆಲವು ವರದಿಗಳಂತೆ, ಸದ್ಯದಲ್ಲೇ ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿರುವ ಭಾರತೀಯರ ಪಟ್ಟಿ ಸಿಕ್ಕರೂ ಸಿಗಬಹುದು. ವಿತ್ತಮಂತ್ರಿ ಅರುಣ್ ಜೈಟ್ಲಿ ಅವರು ಭಾರತ ಸರ್ಕಾರ ಸ್ವಿಸ್ ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಪ್ರಸ್ತಾಪಿಸಿ, ಆ ಪತ್ರಕ್ಕೆ ಇನ್ನೂ ಅಧಿಕೃತವಾಗಿ ಯಾವ ಪ್ರತಿಕ್ರಿಯೆಯೂ ಹೊರಬಿದ್ದಿಲ್ಲ ಎಂದಿದ್ದಾರೆ. ಅದಕ್ಕಿಂತ ಹೆಚ್ಚಿನದನ್ನು ಅವರು ಹೇಳಲಿಕ್ಕೆ ಹೋಗಿಲ್ಲ.
ಈ ವಿಚಾರದಲ್ಲಿ ಸರ್ಕಾರದ ಆಸಕ್ತಿ ಕಡಿಮೆಯಾಗಿಲ್ಲ. ಆದರೆ ಇಂತಹ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ದಿಢೀರನೆ ಏನೂ ಆಗುವುದಿಲ್ಲ. ಇಂತಹ ಸಂಕೀರ್ಣ ವಿಷಯಗಳಲ್ಲಿ ವ್ಯವಹಾರ ನಡೆಸುವುದಕ್ಕೆ ಅವರದ್ದೇ ಆದ ರೀತಿ- ರಿವಾಜು, ಸಂಪ್ರದಾಯ ಹಾಗೂ ಆ ದೇಶದ ಕಾಯಿದೆಯ ಚೌಕಟ್ಟು ಇದೆ. ಅದನ್ನು ಧಿಕ್ಕರಿಸುವಂತಿಲ್ಲ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟವಾದ ನೀತಿಯನ್ನು ದಿಟ್ಟತನದಿಂದ ಮುಂದುವರಿಸಿಕೊಂಡು ಹೋಗಬೇಕು. ಮಾಹಿತಿ ಸಿಕ್ಕಿದಾಗ, ರಾಜತಾಂತ್ರಿಕ ನಿಯಮಗಳ ಚೌಕಟ್ಟಿಗೆ ಒಳಪಟ್ಟು ಅದನ್ನು ಪ್ರಕಟಿಸುವುದು ಪಾರದರ್ಶಕ ಆಡಳಿತದ ದೃಷ್ಟಿಯಿಂದ ಒಳ್ಳೆಯದು. ಎಷ್ಟಾದರೂ ವಿದೇಶಗಳಿಗೆ ಹೋಗಿರುವ ಹಣ ಭಾರತೀಯರ ಹಣ ಎನ್ನುವುದನ್ನು ಮರೆಯಬಾರದು.
ಒಂದು ಪ್ರಕಟಿತ ವರದಿಯಂತೆ, 2013ರಲ್ಲಿ ಸ್ವಿಟ್ಜರ್‌ಲ್ಯಾಂಡ್ ಮತ್ತಿತರ ದೇಶಗಳಲ್ಲಿ ಭಾರತೀಯರು ಹೂಡಿರುವ ಹಣದ ಮೊತ್ತ ಶೇಕಡಾ 43ರಷ್ಟು ಹೆಚ್ಚಾಗಿದೆ. ಅದರಲ್ಲಿ ತೆರಿಗೆ ಸಲ್ಲಿಸಿದ ಹಣ ಎಷ್ಟು, ತೆರಿಗೆ ಸಲ್ಲಿಸದೇ ಇರುವ ಹಣ ಎಷ್ಟು ಎನ್ನುವುದು ಯಾರಿಗೂ ಬಡಪೆಟ್ಟಿಗೆ ಗೊತ್ತಾಗುವುದಿಲ್ಲ. ಆದರೆ ಇಷ್ಟೊಂದು ಗೊಂದಲದ ಅನಂತರವೂ ವಿದೇಶಗಳಿಗೆ ಭಾರತೀಯರು ಹಣ ರವಾನಿಸುವುದು ನಿಂತಿಲ್ಲ ಎಂದರೆ, ವಿದೇಶಗಳ ಜತೆಯ ಹಣದ ವ್ಯವಹಾರದ ಉಸ್ತುವಾರಿಯ ವ್ಯವಸ್ಥೆಯಲ್ಲೇ ಏನೋ ಲೋಪವಿದೆ ಎನ್ನುವ ಸಂದೇಹ ಮೂಡಿದೆ.
ವಿದೇಶಿ ಹಣದಲ್ಲಿ ಸರ್ಕಾರ ತನ್ನ ಪ್ರಕಟಿತ ನೀತಿಯನ್ನು ಮುಂದುವರಿಸಿದಂತೆಯೇ, ಮಾಜಿ ಕಾಯಿದೆ ಮಂತ್ರಿ ಡಾ. ಸುಬ್ರಹ್ಮಣ್ಯನ್ ಸ್ವಾಮಿ ಅವರು ಸ್ವಿಟ್ಜರ್‌ಲ್ಯಾಂಡ್‌ಗೆ ತಮ್ಮ ತಜ್ಞ ವಕೀಲರನ್ನು ಕಳುಹಿಸುವುದಾಗಿ ಹೇಳಿದ್ದಾರೆ. ಅದೇ ರೀತಿಯಲ್ಲಿ ವಿದೇಶೀ ಸಂಪರ್ಕವಿರುವ ಹಲವಾರು ಸಂಘಟನೆಗಳೂ ಈ ಪ್ರಯತ್ನದಲ್ಲಿ ನಿರತವಾಗಿವೆ ಎನ್ನುವ ವರದಿಗಳೂ ಇವೆ. ಇದರಲ್ಲಿ ಸರ್ಕಾರದ ಆಸಕ್ತಿ ಕಡಿಮೆಯಾಗಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement