ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬಡವರಿಗೆ ಆಶ್ರಯ ಮನೆ ಅಂಬರೀಷ್ ಅವಾಂತರ

Vishwanath S
Updated On : 25 Jun 2014, 11:31 am

ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ಅನೇಕ ಹೆಸರುಗಳಲ್ಲಿ ಬಡವರಿಗೆ ವಸತಿ ಸೌಲಭ್ಯವನ್ನು ಗ್ರಾಮೀಣ ಪ್ರದೇಶಗಳಲ್ಲಾದರೂ ಒದಗಿಸುವ ಯೋಜನೆಗಳಲ್ಲಿ ಈಗಾಗಲೇ ಅನೇಕ ಕಡೆಗಳಲ್ಲಿ ಮನೆಗಳನ್ನು ವಿತರಿಸಲಾಗಿದೆ.
ಪ್ರತಿ ಬಾರಿ ಇಂತಹ ವಿತರಣೆಯ ಪ್ರಸ್ತಾಪವಾದಾಗಲೂ, ಪ್ರಧಾನವಾಗಿ ಕೇಳಿಬರುತ್ತಿದ್ದ ದೂರು, ಭ್ರಷ್ಟಾಚಾರದ್ದು. ಅಲ್ಲಿ-ಇಲ್ಲಿ ಶಾಸಕರಿಗೆ ಬೇಕಾದವರಿಗೆ ಮನೆಗಳನ್ನು ಕೊಟ್ಟಿದ್ದೂ ಉಂಟು.
ಆದರೆ ಈಗ ಎಲ್ಲರನ್ನೂ ಒಳಗೊಂಡ ಪ್ರಗತಿಯ ಪ್ರತಿಪಾದನೆಗೇ ಹೆಸರಾಗಿರುವ ಕಾಂಗ್ರೆಸ್, ರಾಜ್ಯದಲ್ಲಿ ಅನುಸರಿಸುತ್ತಿರುವುದು ಕಾಂಗ್ರೆಸ್ ಗೆದ್ದಿರುವ ಕ್ಷೇತ್ರಗಳಲ್ಲಿನ ಸತ್ಪಾತ್ರರಿಗೆ ಮಾತ್ರ ಮನೆಗಳನ್ನು "ಹಂಚುವ" ವಸತಿ ಸಚಿವ ಅಂಬರೀಷ್ ಅವರು, ಅದನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡಿದ್ದು, ನಿಜಕ್ಕೂ ಆಶ್ಚರ್ಯಕರ ವಿಚಾರವೇ. ನಿಜ. ಯಾವ ವ್ಯವಸ್ಥೆಯಲ್ಲೇ ಆಗಲಿ ಜನ ಕಲ್ಯಾಣ ಕಾರ್ಯಕ್ರಮಗಳಲ್ಲಿ ಆಳುವ ಪಕ್ಷಗಳಿಗೆ ಬೇಕಾದ ವ್ಯಕ್ತಿಗಳಿಗೆ ಇತರರಿಗಿಂತ ಹೆಚ್ಚು ಪಾಲು ದೊರೆಯುವುದನ್ನು ತಪ್ಪಿಸುವುದು ಸಾಧ್ಯವಿಲ್ಲ. ಅದು ವಾಸ್ತವ ಸ್ಥಿತಿ.
ಒಂದು ಹಂತದವರೆಗೆ ಅದನ್ನು ಸಹಿಸಲೂ ಜನ ಸಿದ್ಧರಾಗಿರಬಹುದು. ಆದರೆ ಈಗ ಸಚಿವ ಅಂಬರೀಷ್ ಅವರು ಕಾಂಗ್ರೆಸ್ ಸೋತಿರುವ ಕ್ಷೇತ್ರಗಳಲ್ಲಿ ಒಂದೇ ಒಂದು ಮನೆಯನ್ನೂ ಕೊಟ್ಟಿಲ್ಲ ಎಂದರೆ, ಅದು ಜನತಂತ್ರಕ್ಕೇ ಬಗೆದ ದ್ರೋಹ. ಅದನ್ನು ವಿಧಾನ ಸಭೆಯಲ್ಲಿ ಸಮರ್ಥಿಸಿಕೊಂಡಿದ್ದಂತೂ ನಿಜವಾಗಲೂ ಅಸಹನೀಯ ವರ್ತನೆ.
ಮಂಗಳವಾರ ವಿಧಾನ ಸಭೆಯಲ್ಲಿ ಈ ವಿಚಾರದಲ್ಲಿ ಸಾಕಷ್ಟು ಗದ್ದಲವಾದರೂ, ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರ ನೇತೃತ್ವದಲ್ಲಿ ಧರಣಿ ನಡೆದರೂ ಸಚಿವರು ತಮ್ಮ ನಿಲವನ್ನೇ ಸಮರ್ಥಿಸಿಕೊಂಡಿದ್ದು ಒಂದು ರೀತಿಯಲ್ಲಿ ಐತಿಹಾಸಿಕ ಎನ್ನಬಹುದು.
ಕೊನೆಗೆ ರಾಜಿ ಸಂಧಾನ ನಡೆದು ರಾಜ್ಯ ಸರ್ಕಾರ ಕೈಗೊಂಡಿರುವ ಹದಿನೈದು ಲಕ್ಷ ಮನೆಗಳನ್ನು ನಿರ್ಮಿಸುವ ಯೋಜನೆಯಲ್ಲಿ ಈಗ ಆಗಿರುವ ಅನ್ಯಾಯವನ್ನು ಸರಿಪಡಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಪ್ರತಿಪಕ್ಷಗಳು ಇಂತಹ ಸನ್ನಿವೇಶದಲ್ಲಿ ಇನ್ನೇನನ್ನು ಮಾಡುವುದು ಸಾಧ್ಯ? ಮಂತ್ರಿ ನೀಡಿರುವ ಭರವಸೆಯನ್ನು ಕೇಳಿದ ಅನಂತರ ಸದ್ಯಕ್ಕಾದರೂ ಚಳವಳಿ- ಆಂದೋಲನದ ಯೋಜನೆಯನ್ನು ಕೈ ಬಿಟ್ಟಿದ್ದಾರೆ.
ಸರ್ಕಾರದ ಜನಕಲ್ಯಾಣ ಯೋಜನೆಗಳು, ಮಂತ್ರಿಗಳ ಸ್ವಂತ ಯೋಜನೆಗಳೂ ಅಲ್ಲ, ಆಳುವ ಪಕ್ಷದ ಯೋಜನೆಗಳೂ ಅಲ್ಲ. ಅವು ಜನರ ಯೋಜನೆಗಳು. ಅಲ್ಲಿ ಫಲಾನುಭವಿಗಳನ್ನು ಗುರ್ತಿಸುವಾಗ ಕೆಲವು ರಾಜಕೀಯ ಪರಿಗಣನೆಯ ಪ್ರಕರಣಗಳು ಕಂಡುಬಂದರೂ, ಅದನ್ನು ಸಮರ್ಥಿಸಿಕೊಳ್ಳುವುದು ಮಂತ್ರಿಗಳಿಗೆ ಒಂದು ಅಪರಾಧ ಎಂದು ತಿಳಿದಿರಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement