ಅಲ್ಲಿನ ಅಭಿವೃದ್ಧಿ ಇಲ್ಲೇಕಿಲ್ಲ?
ಮೈಸೂರು ಮುಖ್ಯಮಂತ್ರಿಯವರ ತವರು ಜಿಲ್ಲೆ. ಸಹಜವಾಗಿ ಇಲ್ಲಿನ ಸಮಸ್ಯೆಗಳು ಬಿಡಿ ಬಿಡಿಯಾಗಿ ಗೊತ್ತಿರುವುದರಿಂದ ಮತ್ತು ಮುಖ್ಯಮಂತ್ರಿಯವರ ಸಹಾಯಕ್ಕೆ ಕಂದಾಯ ಮಂತ್ರಿ ಶ್ರೀನಿವಾಸ ಪ್ರಸಾದ್, ಲೋಕೋಪಯೋಗಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಸಹಕಾರ ಸಚಿವರಾದ ಮಹದೇವಪ್ರಸಾದರು ಇರುವುದರಿಂದ ಪ್ರತಿಯೊಬ್ಬರೂ ಅವರವರ ತಾಲೂಕುಗಳ ಅಭಿವೃದ್ಧಿ ದೃಷ್ಟಿಯಿಂದ ದುಡಿಯುತ್ತಿದ್ದಾರೆ. ಹಾಗಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಒಳ್ಳೆಯ ಅಭಿವೃದ್ಧಿಯನ್ನೇ ಕಂಡಿದೆ. ಆದರೆ ಹುಣಸೂರು ಅದರಲ್ಲಿಯೂ ಮುಖ್ಯವಾಗಿ ಪಿರಿಯಾಪಟ್ಟಣ ತಾಲೂಕುಗಳು ಮುಖ್ಯಮಂತ್ರಿಯವರ ತವರು ಜಿಲ್ಲೆಗೇ ಸೇರಿವೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ನಂಜನಗೂಡಿನ ಅಭಿವೃದ್ಧಿಗೆ ಇತ್ತೀಚೆಗೆ 400 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದ್ದ ಸರ್ಕಾರ, ಮಾರ್ಚ್ ಒಂದರಂದು 293 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಚಾಲನೆ ನೀಡಿದೆ. ಆದರೆ ಪಿರಿಯಾಪಟ್ಟಣ ತಾಲೂಕಿಗೆ ಇಂತಹ ಒಂದು ಕಾರ್ಯಕ್ರಮವಾಗಲಿ, ಘೋಷಣೆಯಾಗಲಿ ಗಗನ ಕುಸುಮ. ತಾಲೂಕಿನಲ್ಲಿ ಹೆಚ್ಚಿನ ಹಳ್ಳಿಗಳಿಗೆ ರಸ್ತೆ ಎಂಬ ಹೆಸರೇ ಗೊತ್ತಿಲ್ಲ. ಕೊಡಗಿಗೂ ತಾಲೂಕಿಗೂ ಮಧ್ಯೆ ಇರುವ ಕಾವೇರಿ ನದಿ ದಾಟಲು ಇಪ್ಪತ್ತು ಮುವತ್ತು ಕಿ.ಮಿ. ದೂರದವರೆಗೆ ಸೇತುವೆಗಳಿಲ್ಲ. ಕುಶಾಲನಗರ - ಕೊಪ್ಪ ನಡುವೆ ಒಂದು ಸೇತುವೆ ಬಿಟ್ಟರೆ ಸೂಳೆಕೋಟೆ -ಹೆಬ್ಬಾಲೆ ನಡುವೆ ಸೇತುವೆ ಇದೆ(ಅದಕ್ಕೆ ಸಂಪರ್ಕ ರಸ್ತೆಯೇ ಇಲ್ಲ). ಈ ನಡುವೆ ಬರುವ ಆವರ್ತೆ, ದಿಂಡಗಾಡು, ಮರಟಿಕೊಪ್ಪಲು, ದೊಡ್ಡ ಕಮರವಳ್ಳಿ, ಶ್ಯಾನುಭೋಗನ ಹಳ್ಳಿಯ ಜನ ಆಚೆಯ ದಡದ ಹಳ್ಳಿಗಳನ್ನು ಸಂಪರ್ಕಿಸಲು ಹತ್ತಾರು ಮೈಲು ಬಳಸಿಯೇ ಬರಬೇಕು. ರೈಲು ಸಂಪರ್ಕದ ವಾಸನೆಯನ್ನೂ ಅರಿಯದ ಜನರು ತಲೆತಲಾಂತರದಿಂದ ಮನಸ್ಸಿಗೆ ಬಂದಾಗ ಬರುವ ಬಸ್ಸುಗಳನ್ನೇ ನಂಬಿ ಒಂದು ಕಿ.ಮೀ ಅಂತರವನ್ನು ಹತ್ತಾರು ಕಿ.ಮೀ ಬಳಸಿ ಬರುವುದಕ್ಕೆ ಒಗ್ಗಿ ಹೋಗಿದ್ದಾರೆ. ವ್ಯರ್ಥವಾಗುತ್ತಿರುವ ಅವರ ಸಮಯ, ಹಣ ಕೇಳುವವರಿಲ್ಲ. ಈ ತಾಲೂಕಿನಲ್ಲಿ ಹೆಸರಿಗೆ ಮಾತ್ರ ಅಲ್ಲಲ್ಲಿ ಆಸ್ಪತ್ರೆಗಳಿವೆಯಾದರೂ ಅಲ್ಲಿ ವೈದ್ಯರೂ ಇಲ್ಲ ಔಷಧವೂ ಇಲ್ಲ. ಎಲ್ಲದಕ್ಕೂ 30 ಕಿ.ಮೀ.ದೂರದ ಕುಶಾಲನಗರಕ್ಕೆ ಇಲ್ಲವೆ ಬೆಟ್ಟದಪುರಕ್ಕೆ ಬರಬೇಕು. ಅದೂ ಬಸ್ಸು ಬಂದರೆ. ತಾಲೂಕಿನ ಕೆರೆಗಳಂತೂ ಸುತ್ತಲಿನ ರೈತರ ಪಾಲಾಗಿ ಕೆರೆ ಇದ್ದ ಗುರುತುಗಳು ಇಲ್ಲ. ಪುಣ್ಯ ಕ್ಷೇತ್ರ ಬೆಟ್ಟದಪುರದ ಶಿಡ್ಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟ, ತಾಲೂಕಿನ ಅತ್ಯಂತ ಎತ್ತರದ ಬೆಟ್ಟವೂ ಅದೆ. ಆದರೆ ಅದೊಂದು ಪುಣ್ಯ ಕ್ಷೇತ್ರವೆಂದು ಅನ್ನಿಸಲಾರದಷ್ಟು ದುರವಸ್ಥೆಗೊಳಗಾಗಿದೆ. ಹತ್ತಲು ಸರಿಯಾದ ಮೆಟ್ಟಿಲುಗಳಿಲ್ಲ. ಹೋಬಳಿ ಕೇಂದ್ರಗಳು ಕೊಂಪೆಗಳಂತೆ ಕಾಣುತ್ತವೆ. ಅಲ್ಲಿ ಯಾವ ಅಧಿಕಾರಿಯೂ ಇರುವುದಿಲ್ಲ. ಅಷ್ಟೆಲ್ಲಾ ಯಾಕೆ ತಾಲೂಕು ಕೇಂದ್ರವಾದ ಪಿರಿಯಾಪಟ್ಟಣ ಹೇಗಿದೆ? ಹೋಬಳಿ ಕೇಂದ್ರಗಳ ಪ್ರತಿ ರೂಪ. ಅಲ್ಲಿನ ರಸ್ತೆ, ಸಂತೆಮಾಳದ ಅವ್ಯವಸ್ಥೆ, ರಸ್ತೆಯಲ್ಲೆಲ್ಲಾ ಹರಿಯುವ ಚರಂಡಿ ನೀರು, ರಸ್ತೆಯಲ್ಲೆಲ್ಲಾ ಹರಡಿಕೊಂಡ ಕಸ, ಇನ್ನೂ ಪರಿಪೂರ್ಣವಾಗದ ಬಸ್ ಸ್ಟ್ಯಾಂಡ್, ಅದರ ಮುಂಭಾಗದಲ್ಲಿಯೇ ಎಲ್ಲರೂ ಮೂತ್ರ ಮಾಡುತ್ತಾ ನಿಲ್ಲುವ ಪಾಳು ಜಾಗ ಇವೆಲ್ಲವೂ ಇನ್ನಿಲ್ಲದ ರೇಜಿಗೆ ಹುಟ್ಟಿಸುತ್ತವೆ.
-ದೊಡ್ಡ ಕಮರವಳ್ಳಿ ಸಿದ್ದಲಿಂಗಪ್ಪ, ಮೈಸೂರು
ಅನಾಸಕ್ತರಿಗೇಕೆ ಹುದ್ದೆ?
ಬೇಡ ಬೇಡವೆಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲಸಕ್ಕೆ ಬಾರದ ದನ ಕಾಯುವ ಕೆಲಸ ಕೊಟ್ರು ಎಂದಿದ್ದಾರೆ ಸಚಿವ ಡಿ.ಬಿ.ಜಯಚಂದ್ರ. ಅವರ ದೃಷ್ಟಿಯಲ್ಲಿ ಪಶುಸಂಗೋಪನೆ ಇಲಾಖೆ ದನ ಕಾಯುವ, ಕೆಲಸಕ್ಕೆ ಬಾರದ ಇಲಾಖೆಯೆ? ಜನಪ್ರತಿನಿಧಿಯಾಗಿದ್ದುಕೊಂಡು ಹೀಗೆ ನುಡಿಯುವುದು ಎಷ್ಟು ಸರಿ? ಅವರಿಗೆ ನಿಭಾಯಿಸಲಾಗದಿದ್ದರೆ ಸರಿಯಾದ ರೀತಿಯಲ್ಲಿ ಅತೃಪ್ತಿ ಹೊರಗೆಡವಲಿ. ಅದು ಬಿಟ್ಟು ಹೀಗೆ ವಿವೇಚನಾ ರಹಿತವಾಗಿ ಮಾತನಾಡಿ ತಮ್ಮ ಬುದ್ಧಿಯನ್ನು ಪ್ರದರ್ಶನಕ್ಕಿಡದಿರಲಿ. ಹಾಗೆಯೇ ಮಾನ್ಯ ಮುಖ್ಯಮಂತ್ರಿಗಳೂ ಸರಿಯಾಗಿ ನಿಭಾಯಿಸುವ, ಇಲಾಖೆಯ ಬಗ್ಗೆ ಆಸಕ್ತರಿರುವವರಿಗೆ ಮಾತ್ರ ಖಾತೆ ಹಂಚಿಕೆ ಮಾಡಲಿ. ಬಲವಂತದಿಂದ ಕೊಟ್ಟರೆ ಹೀಗೆಯೆ..
-ಹಲವಾಗಲ ಶಂಭು, ರಾಣೇಬೆನ್ನೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com