ತಪ್ಪಾಯ್ತು ತಿದ್ಕೋತೀವಿ
ತುಂಬ ದಿನಗಳ ನಂತರ ವಾಷಿಂಗ್ಟನ್ ಡಿಸಿಯಿಂದ ಶ್ರೀವತ್ಸ ಜೋಷಿ ಅವರು ಮಿಂಚಂಚೆ ಕಳುಹಿಸಿದ್ದಾರೆ. ಅವರು ಬರೆಯುತ್ತಾರೆ- 'ಫೆ.21ರ ಸಂಚಿಕೆಯ ಸಂಪಾದಕೀಯ ತಲೆಬರಹ ಹೀಗೊಂದು 'ಸಾಂವೈಧಾನಿಕ' ಜಿಜ್ಞಾಸೆ ಕುರಿತು ಈ ಪತ್ರ.'
'ನನಗೆ ಸಾಂವೈಧಾನಿಕ ಎಂಬ ಪದಪ್ರಯೋಗದ ಬಗ್ಗೆಯೇ ಜಿಜ್ಞಾಸೆಯಿದೆ. ಸಂವಿಧಾನ ಎಂಬ ಪದದಿಂದ, ಸಂವಿಧಾನಕ್ಕೆ ಸಂಬಂಧಪಟ್ಟ ಎಂಬ ಅರ್ಥದಲ್ಲಿ, 'ಸಾಂವಿಧಾನಿಕ' ಎಂಬ ಪದ ಆಗುತ್ತದೆ. ಇದು ಸಂಸ್ಕೃತದಲ್ಲಿ 'ಇಕ' ಪ್ರತ್ಯಯ ಸೇರುವಾಗಿನ ಪದರೂಪ ಬದಲಾವಣೆಯ ಸಾಮಾನ್ಯ ನಮೂನೆ. ಸಂದರ್ಭ-ಸಾಂದರ್ಭಿಕ, ಸಂಸ್ಕೃತಿ- ಸಾಂಸ್ಕೃತಿಕ, ಸರ್ವಜನ-ಸಾರ್ವಜನಿಕ ಇತ್ಯಾದಿ ಪದರೂಪಗಳಂತೆ ಸಂವಿಧಾನ-ಸಾಂವಿಧಾನಿಕ ಎಂದಾಗುತ್ತದೆ. ಅಚ್ಚರಿಯೆಂದರೆ ನಿಮ್ಮದೇ ಪತ್ರಿಕೆಯಲ್ಲಿ ಈ ಹಿಂದೆ ಸಾಂವಿಧಾನಿಕ ಎಂಬ ಪದ ಬಳಕೆಯಾಗಿರುವುದು ಗೂಗಲ್ ಸರ್ಚ್ನಿಂದ ತಿಳಿಯುತ್ತದೆ. ('ನ್ಯಾಯಾಂಗ ನೇಮಕ ಸಮಿತಿಗೆ ಸಾಂವಿಧಾನಿಕ ಸ್ಥಾನಮಾನ'- ಕನ್ನಡಪ್ರಭ, ಡಿ.27, 2013).'
'ಆದರೆ ಈಗ ನೀವು ಬಳಸಿರುವ ಸಾಂವೈಧಾನಿಕ ಎಂಬ ರೂಪವು ಯಾವ ತರ್ಕದಿಂದ ಬಂದಿರಬಹುದು ಎಂದು ಅಂದಾಜಿಸಬಲ್ಲೆ. ವಿಮಾನ-ವೈಮಾನಿಕ, ವಿಚಾರ-ವೈಚಾರಿಕ, ವಿಜ್ಞಾನ-ವೈಜ್ಞಾನಿಕ ಮುಂತಾದ ರೂಪಗಳಂತೆ ವಿಧಾನ-ವೈಧಾನಿಕ ಎಂದು ಮಾಡುವ ಪ್ರಯತ್ನ ನಡೆದಿದೆ.
ಆದರೆ ಸಂವಿಧಾನ ಎಂಬ ಪದದಲ್ಲಿ 'ಸಂ' ಎಂಬ ಮೊದಲ ಅಕ್ಷರವು ಆಗಲೇ ದೀರ್ಘರೂಪ ಹೊಂದಿ 'ಸಾಂ' ಎಂದಾಗಿರುವುದರಿಂದ ಮತ್ತೆ 'ವಿ' ಅಕ್ಷರವು ದೀರ್ಘರೂಪ ಹೊಂದಿ 'ವೈ' ಆಗಬೇಕಿಲ್ಲ. ನಾನು ಹೇಳುವುದಾದರೆ ಸಂವಿಧಾನ-ಸಾಂವಿಧಾನಿಕ ಸರಿಯಾದ ರೂಪ. ಇದು ನನ್ನ ವಾದ, ತಪ್ಪಿರಲೂಬಹುದು. ಹಿರಿಯ ಓದುಗಮಿತ್ರ ಕೊಕ್ಕಡ ವೆಂಕಟರಮಣ ಭಟ್ ಅಥವಾ ಬೇರೆ ಯಾರಾದರೂ ಬಲ್ಲವರು ಇದರತ್ತ ಬೆಳಕು ಚೆಲ್ಲಿದರೆ ಸಂತೋಷ' ಎಂದಿದ್ದಾರೆ.
ದಿ. 21.02.14ರ ಕ.ಪ್ರ.ದ ಪುಟ 3ರಲ್ಲಿ ಪಶು ಆಹಾರ ಘಟಕ ಉದ್ಘಾಟನೆಯಲ್ಲಿ ರಾಜ್ಯ ಸರ್ಕಾರ ಶಿಕಾರಿಪುರ ತಾಲ್ಲೂಕಿನ ಸಂಡೂರಿನಲ್ಲಿ (ತಪ್ಪು)------- 'ಸಂಡ' ಎಂಬ ಊರಿನಲ್ಲಿ ಎಂಬುದು ಸರಿ. ಹಾಗೆಯೇ ಶಿಮೂಲಲ್ನಿರ್ದೇಶಕ (ತಪ್ಪು)ಶಿಮೂಲ್ ನಿರ್ದೇಶಕ/ ಶಿಮುಲ್ನ ನಿರ್ದೇಶಕ (ಸರಿ). ಪುಟ 11ರಲ್ಲಿ 'ಗೆಗಾಂಗ್ ಬಿಜೆಪಿಗೆ' ಈ ಶೀರ್ಷಿಕೆಯ ಬರಹದಲ್ಲಿ '22 ವರ್ಷಗಳ ಅಸ್ಸಾಂನ ಮುಖ್ಯಮಂತ್ರಿ' ಎಂದು ಬರೆಯಲಾಗಿದೆ, ಇದು ಅರ್ಥಹೀನ ಎಂದು ಶಿವಮೊಗ್ಗದಿಂದ ರಮೇಶ್ ಹೇಳಿದ್ದಾರೆ.
ಬೆಂಗಳೂರಿನಿಂದ ವಿ.ಹೇಮಂತ್ಕುಮಾರ ಪತ್ರ ಬರೆಯುತ್ತಾರೆ, 'ಫೆ. 20ರ ಸಂಚಿಕೆಯ ಪುಟ 3ರಲ್ಲಿ ಶಾಸಕರ ಸೊಸೈಟಿಗೆ ಆಯ್ಕೆ ಶೀರ್ಷಿಕೆಯ ಲೇಖನದಲ್ಲಿ ಶಾಸಕರ ಭವನದಲ್ಲಿರುವ ಶಾಸಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ನ 2014-19ನೇ ಸಾಲಿಗೆ ಆಡಳಿತ ಮಂಡಳಿಗೆ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಪ್ರಕಟವಾಗಿದೆ. ಅಂದರೆ 6 ವರ್ಷಗಳಿಗೆ ಸದಸ್ಯರಾಗಿದ್ದಾರೆ ಎಂದಾಗುವುದಿಲ್ಲವೇ? 2019ರ ಬದಲು 2014-15 ಎಂದಿರಬೇಕಿತ್ತಲ್ಲವೇ? ಎಂದಿದ್ದಾರೆ.
ಹೇಮಂತ್ಕುಮಾರ್ ಹೇಳಿದಂತೆ ಸುದ್ದಿಯಲ್ಲಿ ತಪ್ಪಾಗಿಲ್ಲ. 2014-19ನೇ ಸಾಲಿಗೆ ಎಂದಾಕ್ಷಣ 6 ವರ್ಷವಾಗುವುದಿಲ್ಲ. ಸಹಕಾರ ಕ್ಷೇತ್ರದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ.
ವಿಶ್ವೇಶ್ವರ ಭಟ್