ಲೋಕಪಾಲ ನೇಮಕ ಪ್ರಕ್ರಿಯೆ ಪಾರದರ್ಶಕತೆಯ ಕೊರತೆ
ಲೋಕಸಭೆ ಚುನಾವಣೆಯ ಪ್ರಚಾರ ಸಮರದಲ್ಲಿ ಭ್ರಷ್ಟಾಚಾರದ ಆರೋಪಗಳದ್ದೇ ಪ್ರಮುಖ ಪಾತ್ರವಾಗಬಹುದೆನ್ನುವುದನ್ನು ಊಹಿಸಿದ್ದ ಕಾಂಗ್ರೆಸ್ ನೇತೃತ್ವದ ಕೂಟ ಸರ್ಕಾರ ಭ್ರಷ್ಟಾಚಾರಕ್ಕೆ ತಾನೂ ವಿರೋಧಿಯೇ ಎನ್ನುವ ಭಾವನೆಯನ್ನು ಮೂಡಿಸಲು ಪಟ್ಟ ಪ್ರಯತ್ನಗಳಲ್ಲಿ ಲೋಕಪಾಲ ವ್ಯವಸ್ಥೆಯ ರಚನೆಗೆ ಕಾಯಿದೆಯನ್ನು ರೂಪಿಸಿದ್ದು ಒಂದು ಮುಖ್ಯವಾದ ಬೆಳವಣಿಗೆ.
ಲೋಕಸಭೆಯ ಕಾರ್ಯಕಲಾಪವನ್ನು, ತೆಲಂಗಾಣ ರಾಜ್ಯದ ನಿರ್ಮಾಣದ ಹಿನ್ನೆಲೆಯಲ್ಲಿ, ನಡೆಸುವುದೇ ಅಸಾಧ್ಯವೆನ್ನುವ ವಾತಾವರಣ ಸೃಷ್ಟಿಯಾಗಿದ್ದಾಗಲೂ ಕಾಂಗ್ರೆಸ್ ಲೋಕಪಾಲ - ಲೋಕಾಯುಕ್ತ ವಿಧೇಯಕಕ್ಕೆ ಸಂಸತ್ತಿನ ಅನುಮತಿ ಪಡೆದಿದ್ದೇ ಹೆಚ್ಚು ಎನ್ನುವುದು ನಿಜ. ಅದು ಸಾಧ್ಯವಾಗಿದ್ದು, ಪ್ರಧಾನ ಪ್ರತಿಪಕ್ಷವಾದ ಭಾರತೀಯ ಜನತಾ ಪಾರ್ಟಿ ತೆರೆಮರೆಯ ಸಂಧಾನದಲ್ಲಿ ವಿಧೇಯಕಕ್ಕೆ ಬೆಂಬಲ ನೀಡುವುದಾಗಿ ಸೂಚನೆ ನೀಡಿದ್ದರಿಂದ. ಅದು ಒಂದು ರೀತಿಯಲ್ಲಿ ಬಿಜೆಪಿಯ ಪಾಲಿಗೆ ಅನಿವಾರ್ಯವೇ ಆಗಿತ್ತು. ಲೋಕಪಾಲ ವ್ಯವಸ್ಥೆಯ ಜಾರಿಗೆ ಹಿಂದಿನಿಂದಲೂ ಬಿಜೆಪಿ ತನ್ನ ಪ್ರಣಾಳಿಕೆಗಳಲ್ಲಿ ತನ್ನ ಬದ್ಧತೆ ಪ್ರಕಟಿಸಿಕೊಂಡೇ ಬಂದಿದೆ. ಆದ್ದರಿಂದ ಈಗ ಅಂತಹ ವಿಧೇಯಕ ಕಾಂಗ್ರೆಸ್ ಮೂಲದಿಂದ ಬಂದ ಮಾತ್ರಕ್ಕೇ ಅದನ್ನು ವಿರೋಧಿಸುವುದು ಸಾರ್ವಜನಿಕರಿಗೆ ವಂಚನೆ ಮಾಡಿದಂತೆಯೇ ಆಗುತ್ತಿತ್ತು.
ಲೋಕಾಪವಾದಕ್ಕೆ ಹೆದರಿ, ಬಿಜೆಪಿ ಲೋಕಪಾಲ ವಿಧೇಯಕಕ್ಕೆ ಒಪ್ಪಿಗೆ ನೀಡಿದ್ದರೂ, ಅದರ ಎಲ್ಲ ವಿವರಗಳನ್ನು ಗೊಂದಲದಲ್ಲಿ ಪರಿಶೀಲಿಸಿರಲಿಲ್ಲ. ಕೆಲವು ಪ್ರಮುಖ ವಿಚಾರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ವಿಧೇಯಕಕ್ಕೆ ಅಡ್ಡಿಯಾಗುವ ಬಯಕೆ ಬಿಜೆಪಿಗೆ ಈಗ ಇರಲಿಲ್ಲ. ಸಂಘ ಪರಿವಾರದ ಹಿರಿಯರೂ, ಒಮ್ಮೆ ಲೋಕಪಾಲ ವ್ಯವಸ್ಥೆ ಕಾಯಿದೆಯ ರೂಪವನ್ನು ಪಡೆದರೆ, ಲೋಪದೋಷಗಳನ್ನು ಅನಂತರ ತಿದ್ದಲು ಅವಕಾಶವಿದೆ ಎನ್ನುವ ಭಾವನೆಯನ್ನು ಪ್ರಕಟಿಸಿದ್ದರು.
ಆದರೆ ಲೋಕಪಾಲರ ನೇಮಕದ ವಿಚಾರದಲ್ಲೇ (ಕಾಯಿದೆಯ ಜಾರಿಗೆ ಅದೇ ಮೊದಲ ಹೆಜ್ಜೆ ಕೂಡಾ) ಈಗ ಪ್ರಕಟವಾಗಿರುವ ನ್ಯಾಯಾಂಗದ ಪ್ರಮುಖರ ವಿರೋಧ ಇಡೀ ದೇಶದ ಪ್ರಜ್ಞಾವಂತರ ಗಮನವನ್ನು ಸೆಳೆದಿದೆ. ಪ್ರಖ್ಯಾತ ನ್ಯಾಯವಾದಿ, ಫಾಲಿ ನಾರಿಮನ್, ಕೆ.ಜಿ. ಥಾಮಸ್ ಅವರಂತಹ ಹಿರಿಯರು ಲೋಕಪಾಲರ ಶೋಧನೆ ಅಥವಾ ಆಯ್ಕೆಯ ಸಮಿತಿಯಲ್ಲಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೆ ಕಾರಣ ಶೋಧನ ಸಮಿತಿಯ ಸದಸ್ಯರು ಯಾರೇ ಆಗಿರಲಿ, ಅವರಿಗೆ ಸ್ವತಂತ್ರವಾದ ಯಾವ ಅಧಿಕಾರವೂ ಇಲ್ಲ ಎನ್ನುವುದು ಈಗ ಗೊತ್ತಾಗಿದೆ. ಅಂತಿಮ ಹಂತದಲ್ಲಿ ಸುತ್ತಿ ಬಳಸಿ, ಏನೇ ಹೇಳಿದರೂ ಲೋಕಪಾಲರ ಆಯ್ಕೆಯ ಅಧಿಕಾರ ಪ್ರಧಾನಿಗೇ ಎನ್ನುವ ಅರಿವು ಈಗ ಮೂಡಿದೆ.
ಪ್ರಧಾನಿ ಆರಿಸಿದ ಹೆಸರುಗಳ ಪಟ್ಟಿಯನ್ನಷ್ಟೇ ಪರಿಶೀಲಿಸುವುದು ಸಮಿತಿಯ ಕೆಲಸ ಎನ್ನುವ ಹಂತಕ್ಕೆ ಲೋಕಪಾಲರ ನೇಮಕದ ಪ್ರಕ್ರಿಯೆಯ ಸ್ವರೂಪವನ್ನು ಮುಟ್ಟಿಸಿರುವುದರಿಂದ ಅಂತಹ "ಕೆಲಸಕ್ಕೆ" ತಮ್ಮ ಗೌರವ - ಪ್ರತಿಷ್ಠೆಗಳ ಅರಿವಿರುವ ಯಾವ ನಿವೃತ್ತ ನ್ಯಾಯಮೂರ್ತಿಯೂ ಒಪ್ಪುವುದಿಲ್ಲ.
ಲೋಕಪಾಲರ ನೇಮಕದ "ಅಧಿಕಾರ" ಪ್ರಧಾನಿಗೇ ಇರುವುದಾದರೆ, ಈ ಸರ್ಕಾರದ ಅವಧಿಯಲ್ಲಿ ಕಂಡುಬಂದ ಆರೋಪಗಳು ಪ್ರಧಾನಿ ನೇಮಿಸಿದ ಲೋಕಪಾಲರ ಪರಿಶೀಲನೆಗೆ ಒಳಪಡುವುದರಿಂದ ಅದರಿಂದ ಯಾವ ಪ್ರಯೋಜನವೂ ಇಲ್ಲವೆನ್ನುವುದು ಸಹಜ ತರ್ಕಕ್ಕೆ ಅನುಗುಣವಾದದ್ದು. ಇಷ್ಟಕ್ಕೂ ಈಗ ಲೋಕಪಾಲರನ್ನು ನೇಮಿಸಿ ಸಾಧಿಸುವುದಾದರೂ ಏನನ್ನು? ಇಡೀ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುವುದೇ ಒಳ್ಳೆಯದು.