ಬೆಂಗಳೂರಿಗೇಕೆ ಮರಾಠಿ ಹೇರಿಕೆ?
ಬೆಂಗಳೂರೇನಾದರೂ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಿದೆಯೇ ಎಂದು ಕೇಳಿದರೆ, 'ಈ ಮನುಷ್ಯನಿಗೆ ಎಲ್ಲೋ ತಲೆ ಕೆಟ್ಟಿರಬಹುದು' ಅನ್ನಿಸಬಹುದೇನೊ? ನಿಮ್ಮ ಅನಿಸಿಕೆ ಸಹಜ. ಆದರೆ ಅದು ಆಗಿರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕರಿಗೆ.
ನಾನು ವಾಸವಿರುವುದು ಗಿರಿನಗರದಲ್ಲಿ. ಇತ್ತೀಚೆಗೆ, ಹೊಸದಾಗಿ ಆರಂಭವಾದ ಎ.ಟಿ.ಎಂ. (50 ಅಡಿ ರಸ್ತೆ, ಆವಲಹಳ್ಳಿ ಬಿಡಿಎ ಪಾರ್ಕ್ ಹತ್ತಿರ) ನೋಡಿ ಸಂತೋಷದಿಂದ ಹಣ ತೆಗೆಯಲೆಂದು ಹೋದೆ. ಅಲ್ಲಿ ನನಗೆ ಒಂದು ಆಘಾತ ಕಾದಿತ್ತು. ಭಾಷಾ ಆಯ್ಕೆಯ ಪಟ್ಟಿ ಬಂದಾಗ ಅಲ್ಲಿರುವುದು ಇಂಗ್ಲಿಷ್, ಹಿಂದಿ ಮತ್ತು ಮರಾಠಿ. ಕನ್ನಡದ ಸೊಲ್ಲೇ ಇಲ್ಲ. ಬೇಸರವಾಗಿ ಮನೆಗೆ ಹಿಂದಿರುಗಿ, ಸೀತಾ ಸರ್ಕಲ್ ಬಳಿ ಇರುವ ಎ.ಟಿ.ಎಂ. (ಎಸ್‌ಬಿಐ)ಗೆ ಹೋದೆ. ಅಲ್ಲಿಯೂ ಇದೇ ಪುನರಾವೃತ್ತಿಯಾಯ್ತು. ಇದರರ್ಥ ಏನು? ಬೆಂಗಳೂರು ನಗರದ ಅಚ್ಚ ಕನ್ನಡ ಪ್ರದೇಶವಾದ ಗಿರಿನಗರ, ಬ್ಯಾಂಕ್ ಕಾಲೋನಿಗಳಲ್ಲೇ ಕನ್ನಡಕ್ಕೆ ಜಾಗವಿಲ್ಲವೇ? ಈ ಬ್ಯಾಂಕಿನವರು ಕನ್ನಡಿಗರನ್ನು ಏನೆಂದುಕೊಂಡಿದ್ದಾರೆ? ಇವರಿಗೆ ಕನ್ನಡದ ಬಗ್ಗೆ ಇಷ್ಟು ಅನಾದರ ಬೆಳೆಯಲು ಕಾರಣವೇನು? ಇನ್ನೂ ಒಂದು ಚಾಣಾಕ್ಷ್ಯತನವನ್ನು ಗಮನಿಸಿದ್ದೇನೆ. ಕೆಲವು ಎಟಿಎಂಗಳಲ್ಲಿ ಕನ್ನಡ ಆಯ್ಕೆಯೇನೋ ಇದೆ. ಆದರೆ ಬಹುಮಟ್ಟಿಗೆ ಅದು ಕೆಲಸ ಮಾಡುವುದಿಲ್ಲ. ಈ ಬ್ಯಾಂಕಿನವರು ಕನ್ನಡಿಗರನ್ನು ಇಂಗ್ಲಿಷ್, ಹಿಂದಿಗಳಿಗೆ ಗುಲಾಮರಾಗಿ ಮಾಡಿರುವುದಲ್ಲದೇ ಈಗ ಮರಾಠಿಗರನ್ನಾಗಿಯೂ ಮಾಡಲು ಹೊರಟಿದ್ದಾರೆ. ಈ ಭಾಷಾ ನೀತಿಯನ್ನು ಎಸ್‌ಬಿಐ ಎಲ್ಲಿಂದ ಕಲಿಯಿತು? ಇದು ಕನ್ನಡಿಗರಿಗೆ ಮಾಡಿರುವ ದ್ರೋಹ. ಅದನ್ನು ಒಪ್ಪಿಕೊಂಡು ಸಾರ್ವಜನಿಕ ಕ್ಷಮೆ ಕೇಳಬೇಕು. ಒಂದೆರಡು ತಿಂಗಳಲ್ಲಿ ಕರ್ನಾಟಕದ ಎಲ್ಲಾ ಎಟಿಎಂಗಳಲ್ಲೂ ಕಡ್ಡಾಯವಾಗಿ ಕನ್ನಡ ಆಯ್ಕೆ ಅಳವಡಿಸಿ ಅದು ಯಾವಾಗಲೂ ಸುಸ್ಥಿತಿಯಲ್ಲಿರುವಂತೆ ಎಚ್ಚರಿಕೆ ವಹಿಸಬೇಕು. ಇದು ಎಸ್‌ಬಿಐನವರು ತುರ್ತಾಗಿ ಮಾಡಬೇಕಾದ ಕೆಲಸ. ಇದು ನಮ್ಮ ಕನ್ನಡಪರ ಹೋರಾಟಗಾರರ ಗಮನಕ್ಕೂ ಬರಲೆಂದು ಆಶಿಸುತ್ತೇನೆ.
-ರು.ವೆಂ. ಸೂರ್ಯನಾರಾಯಣ, ಗಿರಿನಗರ, ಬೆಂಗಳೂರು
ಚಿಕಿತ್ಸೆಗಾಗಿ ಆರ್ಥಿಕ ನೆರವಿಗೆ ಮನವಿ...
ಮಗಳ ಹೃದಯ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮೆಣಸಿನಕಾನದ ದಂಪತಿ ಮನವಿ ಮಾಡಿದ್ದಾರೆ.
ಮಹಮ್ಮದ್ ಶವಾದ್ ಹಾಗೂ ಹಸೀನಾ ದಂಪತಿಯ 4 ವರ್ಷದ ಪುತ್ರಿ ಅನೀಷಾ ಹೃದಯ ರೋಗದಿಂದ ಬಳಲುತ್ತಿದ್ದು, ಈಗಾಗಲೇ ಸಾಕಷ್ಟು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯೇ ಅಂತಿಮ ಪರಿಹಾರ ಎಂದು ಮೈಸೂರಿನ ಕೆ.ಆರ್.ವೈದ್ಯಕೀಯ
ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ಕೂಲಿ ಕಾರ್ಮಿಕರಾಗಿರುವ ತಮಗೆ ಯಾವುದೇ ಆದಾಯ ಮೂಲಗಳಿಲ್ಲ. ವೈದ್ಯರು ಹೇಳಿರುವ ಪ್ರಕಾರ ಶಸ್ತ್ರ ಚಿಕಿತ್ಸೆಗೆಂದೇ ಸುಮಾರು ರು. 2 ಲಕ್ಷ ಖರ್ಚಾಗುತ್ತದೆ. ಮುಂದಿನ ಎರಡು ವರ್ಷಗಳವರೆಗೆ ಇತರೆ ಚಿಕಿತ್ಸೆ ಮುಂದುವರಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಅನೀಷಾ ತಾಯಿ ಹಸೀನಾ ಮನವಿ ಮಾಡಿದ್ದಾರೆ. ನೆರವು ನೀಡಲು ಇಚ್ಛಿಸುವವರು, ಬ್ಯಾಂಕ್ ಖಾತೆ ಸಂಖ್ಯೆ- 6042500103183101(ಕರ್ಣಾಟಕ ಬ್ಯಾಂಕ್), ಐಎಫ್‌ಎಸ್‌ಸಿ ಕೋಡ್- ಕೆಎಆರ್‌ಬಿ0000604 ಇಲ್ಲಿಗೆ ನೀಡಲು ಕೋರಲಾಗಿದೆ.
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com